ಕೊರೊನಾ ಹೋಗಲಾಡಿಸಲು ರಾಜ್ಯಾದ್ಯಂತ ಅಗ್ನಿಹೋತ್ರ ಹೋಮ | ಸಿಎಂ ಯಡಿಯೂರಪ್ಪ
ಬೆಳಗಾವಿ: ಕೊರೊನಾ ತಡೆಗೆ ರಾಜ್ಯದ ಮಠ ಹಾಗೂ ಮಂದಿರಗಳಲ್ಲಿ ಅಗ್ನಿಹೋತ್ರ ಹೋಮ ಕೈಗೊಳ್ಳಲು ಆದೇಶ ನೀಡುವುದಾಗಿ ಸಿಎಂ ಯಡಿಯೂರಪ್ಪನವರು ಹೇಳಿದ್ದು, ಮುಜರಾಯಿ ಇಲಾಖೆ ಮುಖಾಂತರ ಮಠ, ಮಂದಿರಗಳಲ್ಲಿ ಅಗ್ನಿಹೋತ್ರ ಮಾಡಿಸಲು ಮುಂದಾಗುವುದಾಗಿ ಅವರು ಹೇಳಿದ್ದಾರೆ.
ನಗರದ ಹುಕ್ಕೇರಿ ಹಿರೇಮಠದಲ್ಲಿ ಜಿಲ್ಲೆಯ 80ಕ್ಕೂ ಅಧಿಕ ಮಠಾಧೀಶರು ಆಯೋಜಿಸಿದ್ದ ಅಗ್ನಿಹೋತ್ರ, ಧನ್ವಂತರಿ, ಸುದರ್ಶನ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಗ್ನಿಹೋತ್ರ ಮಾಡುವುದರಿಂದ ಕೊರೊನಾ ದೂರ ಮಾಡಬಹುದು ಎಂದು ಹುಕ್ಕೇರಿ ಹಿರೇಮಠದ ಶ್ರೀಗಳು ಹೇಳಿದ್ದಾರೆ. ಹೀಗಾಗಿ ಮುಜರಾಯಿ ಇಲಾಖೆ ಮುಖಾಂತರ ಮಠ, ಮಂದಿರಗಳಲ್ಲಿ ಅಗ್ನಿಹೋತ್ರ ಮಾಡಿಸಲು ಸೂಚನೆ ನೀಡಬೇಕೆಂಬ ಅವರ ಸಲಹೆ ಪರಿಗಣಿಸಲಾಗುವುದು. ಕರೊನಾದಿಂದ ಜನರನ್ನು ಮುಕ್ತರನ್ನಾಗಿ ಮಾಡಲು ಎಲ್ಲ ಮಠಾಧೀಶರು ಆಶೀರ್ವದಿಸಬೇಕು. ಶ್ರೀಗಳ ಮಾರ್ಗದರ್ಶನದಲ್ಲಿ ರಾಜ್ಯವನ್ನು ಮಾದರಿಯಾಗಿ ರೂಪಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಹೋಮದಿಂದ ಕೊರೊನಾವನ್ನು ಹೋಗಲಾಡಿಸಲು ಸಾಧ್ಯ ಎನ್ನುವ ಸಿಎಂ ಯಡಿಯೂರಪ್ಪನವರು ಯಾಕೆ ರಾತ್ರಿ ಕರ್ಫ್ಯೂ ವಿಧಿಸಬೇಕಿತ್ತು. ಇಷ್ಟೆಲ್ಲ ಮಾರ್ಗದರ್ಶಿ ಸೂತ್ರಗಳು ಎಲ್ಲ ಯಾಕೆ? ಯಡಿಯೂರಪ್ಪನವರು ಒಂದು ಜಾತಿಯವರನ್ನು ಮೆಚ್ಚಿಸಲು ಇಡೀ ರಾಜ್ಯದ ಜನರ ಕಿವಿಗೆ ಹೂವಿಡಲು ಮುಂದಾಗಿದ್ದಾರೆಯೇ? ಎನ್ನುವ ಪ್ರಶ್ನೆಗಳು ಇದೀಗ ಕೇಳಿ ಬಂದಿದೆ.