ಜನ ಗುಂಪು ಸೇರಿದ್ದರಿಂದ ಕೊರೊನಾ ಹೆಚ್ಚಾಗಿದೆ | ಆರೋಗ್ಯ ಸಚಿವರ ಹೇಳಿಕೆ - Mahanayaka
1:59 AM Wednesday 5 - February 2025

ಜನ ಗುಂಪು ಸೇರಿದ್ದರಿಂದ ಕೊರೊನಾ ಹೆಚ್ಚಾಗಿದೆ | ಆರೋಗ್ಯ ಸಚಿವರ ಹೇಳಿಕೆ

sudhakar
20/04/2021

ಬೆಂಗಳೂರು: ಜನರು ಗುಂಪುಗುಂಪಾಗಿ ಸೇರುತ್ತಿರುವುದೇ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ನಿಯಮಗಳನ್ನು ತರುವುದಾಗಿ ಹೇಳಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ರಾತ್ರೋ ರಾತ್ರಿ ವೈದ್ಯರನ್ನು, ಆರೋಗ್ಯ ಕಾರ್ಯಕರ್ತರನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದ ಅವರು, ಕೊವಿಡ್ ನಿಯಂತ್ರಣಕ್ಕೆ  ಬೆಂಗಳೂರಿಗೆ ಹಾಗೂ ಇತರ ಜಿಲ್ಲೆಗಳಿಗೆ ಪ್ರತ್ಯೇಕ ನಿಯಮಗಳನ್ನು ತರುತ್ತೇವೆ ಎಂದು ಹೇಳಿದರು.

ಇಂದು ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಲಿದೆ. ಸಭೆಯಲ್ಲಿ ಕಠಿಣ ನಿಯಮಗಳ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ರಾಜ್ಯ ಸರ್ಕಾರ ಕೊವಿಡ್ ನಿರ್ವಹಣೆಯಲ್ಲಿ ವೈಫಲ್ಯ ಹೊಂದಿದ್ದರೂ ಜನರು ಗುಂಪುಗೂಡುತ್ತಿರುವುದರಿಂದ ಕೊರೊನಾ ವ್ಯಾಪಕವಾಗಿ ಹರಡಿದೆ ಎಂದು ಸರ್ಕಾರ ಹೇಳಿದೆ. ಕೊರೊನಾ ಎರಡನೇ ಅಲೆಯ ಸಾಧ್ಯತೆಯ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ಇರಲಿಲ್ಲವೇ ಎನ್ನುವ ಬಗ್ಗೆ ಸಚಿವರು ಏನೂ ಮಾತನಾಡಿಲ್ಲ. ಸರ್ಕಾರವು ಮೊದಲ ಅಲೆಯ ಬಳಿಕ ಕೊರೊನಾವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿತ್ತು. ಸ್ವತಃ ಸರ್ಕಾರದ ಸಚಿವರೇ ಮಾಸ್ಕ್ ಗಳಿಲ್ಲದೇ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಉಪ ಚುನಾವಣೆಯಲ್ಲಿ ಬೇಕಾಬಿಟ್ಟಿ ಜನ ಸೇರಿಸುವ ಮೂಲಕ ಸಾರ್ವಜನಿಕರನ್ನು ಸಂಕಷ್ಟಕ್ಕೆ ತಳ್ಳಿವೆ. ಆದರೂ ಕೊರೊನಾ ಹೆಚ್ಚಾಗಲು ಜನರೇ ಕಾರಣ ಎಂದು ಸಚಿವರು ಹೇಳುತ್ತಿದ್ದಾರೆ.

ಜನರು ಗುಂಪುಗೂಡದೇ ಬದುಕುವುದು ಹೇಗೆ? ಮೊದಲ ಅಲೆ ಕಡಿಮೆಯಾದಾಗಲೇ  ಎರಡನೇ ಅಲೆ ಬರುವ ಅಪಾಯವನ್ನು ಕಂಡುಕೊಂಡು ಕೊರೊನಾ ಎದುರಿಸಲು ಸರ್ಕಾರ ಮುಂದಾಗಬೇಕಿತ್ತು. ಆದರೆ ಸರ್ಕಾರ ತೀವ್ರ ನಿರ್ಲಕ್ಷ್ಯವಹಿಸಿದ್ದರಿಂದಾಗಿ ಇದೀಗ ಬೆಂಗಳೂರು ಮೃತ್ಯು ಕೂಪವಾಗಿದೆ. ಜನರಿಗೆ ಜವಾಬ್ದಾರಿಯ ಬಗ್ಗೆ ಮಾತನಾಡುತ್ತಿರುವ ಸರ್ಕಾರ ಆಸ್ಪತ್ರೆಯಲ್ಲಿ ಬೆಡ್ ಹಾಗೂ ಆಮ್ಲಜನಕ ಸಿಲಿಂಡರ್ ಕೊರತೆಯನ್ನು ನೀಗಿಸಲು ಕೂಡ ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಯಾವ ರೀತಿಯ ಚಿಕಿತ್ಸೆ ದೊರಕುತ್ತಿದೆ ಎನ್ನುವುದು ಕೂಡ ಯಾರಿಗೂ ಗೊತ್ತಿಲ್ಲ. ಸರ್ಕಾರ ಇಷ್ಟೊಂದು ನಿರ್ಲಕ್ಷ ವಹಿಸುತ್ತಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿದ್ದು, ಸರ್ಕಾರದ ನಡೆಯ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ.

ಇತ್ತೀಚಿನ ಸುದ್ದಿ