ಸಚಿವ ಶ್ರೀರಾಮುಲು ಅವರಿಂದ ಕೊವಿಡ್ ಮಾರ್ಗಸೂಚಿ ಉಲ್ಲಂಘನೆ
ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮುಲು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಇಂದು ಪ್ರಚಾರ ನಡೆಸಿದ್ದು, ಆದರೆ ಕೊವಿಡ್ ನಿಯಮಗಳನ್ನು ಗಾಳಿಗೆ ತೂರಿ ಅವರು ಪ್ರಚಾರ ನಡೆಸಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸಚಿವರು ಕನಿಷ್ಠ ಮಾಸ್ಕ್ ಕೂಡ ಧರಿಸದೇ ಸಾರ್ವಜನಿಕರ ಬಳಿ ಹೋಗಿ ಮತ ಕೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ಶ್ರೀರಾಮುಲು ಫೋಟೋ ಶೇರ್ ಮಾಡಿದ್ದು, ಈ ಫೋಟೋ ಇದೀಗ ಹಲವು ಚರ್ಚೆಗೆ ಕಾರಣವಾಗಿದೆ.
ಶ್ರೀರಾಮುಲು ಜೊತೆಗಿದ್ದವರ ಪೈಕಿ ಬಹುತೇಕರು ಮಾಸ್ಕ್ ಧರಿಸಿಲ್ಲ, ದೈಹಿಕ ಅಂತರ ಕೂಡ ಪಾಲಿಸಿಲ್ಲ. ಊರಿಗೆಲ್ಲ ಪಾಠ ಮಾಡುವ ಜನಪ್ರತಿನಿಧಿಗಳು ಈ ರೀತಿಯಾಗಿ ಮಾಡಬಹುದೇ? ಇದೇ ಜಾಗದಲ್ಲಿ ಜನಸಾಮಾನ್ಯರು ಇದ್ದರೆ, ಪೊಲೀಸರು, ಅಧಿಕಾರಿಗಳು ಅಂತ ಬೇರೆ ಬೇರೆ ರೀತಿಯಲ್ಲಿ ಸಾರ್ವಜನಿಕರನ್ನು ಕಾಡುತ್ತಿರಲಿಲ್ಲವೇ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತವಾಗಿ ನಗರದ 25ನೇ ವಾರ್ಡಿನಲ್ಲಿ ಶ್ರೀರಾಮುಲು ಪ್ರಚಾರ ನಡೆಸಿದ್ದಾರೆ. ಈ ಸಂದರ್ಭ ತಮ್ಮದೇ ಪಕ್ಷದ ಸರ್ಕಾರ ಮಾಡಿರುವ ಮಾರ್ಗದರ್ಶಿ ನಿಯಮಗಳನ್ನು ಗಾಳಿಗೆ ತೂರಿ ಚುನಾವಣೆ ಪ್ರಚಾರ ನಡೆಸಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತವಾಗಿ ನಗರದ 25ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದೆ. ನಗರದ ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತಯಾಚನೆ ಮಾಡುತ್ತಿರುವ ಕಾರಣ ಜನರು ಉತ್ತಮ ಬೆಂಬಲ ನೀಡುತ್ತಿದ್ದಾರೆ. ಈ ವೇಳೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. pic.twitter.com/FRxVWnes5k
— B Sriramulu (Modi Ka Parivar) (@sriramulubjp) April 21, 2021