ದ.ಕನ್ನಡ ಜಿಲ್ಲೆಯಲ್ಲಿ ಕೊವಿಡ್ ಹೆಚ್ಚುತ್ತಿದೆ | ಹಾಸಿಗೆ ಕೊರತೆ ನಿಭಾಯಿಸಲು ಜಿಲ್ಲಾಡಳಿತ ಸಿದ್ಧ | ಜಿಲ್ಲಾಧಿಕಾರಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊವಿಡ್ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ, ಮುಂದಿನ 15 ದಿನಗಳವರೆಗೆ ಎಲ್ಲ ಪರಿಸ್ಥಿತಿಗಳನ್ನು ಸಮರ್ಪಕವಾಗಿ ನಿಭಾಯಿಸಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಜಿಲ್ಲೆಯ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಸೇರಿದಂತೆ ಬಿಕ್ಕಟ್ಟು ಎದುರಾಗಬಹುದು. ಎಲ್ಲವನ್ನೂ ನಿಭಾಯಿಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಅವರು ಹೇಳಿದರು.
ಎಂಸಿಎಫ್, ಎನ್‌ಐಟಿಕೆಯಲ್ಲಿಯೂ ಹಾಸಿಗೆಗಳನ್ನು ಮೀಸಲಿಡಲು, ಪ್ರತಿ ತಾಲೂಕಿನಲ್ಲೂ ಪ್ರತ್ಯೇಕ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಲು ತಹಶೀಲ್ದಾರರಿಗೆ ಜಾಗ ಗುರುತಿಸಲು ಸೂಚಿಸಲಾಗಿದೆ. ಕೋವಿಡ್ ಚಿಕಿತ್ಸೆಗೆ 31 ಆಸ್ಪತ್ರೆಗಳ ಜತೆಗೆ ಜಿಲ್ಲೆಯಲ್ಲಿ 124 ನರ್ಸಿಂಗ್ ಹೋಂಗಳು ಲಭ್ಯವಿವೆ. ಇದರಲ್ಲಿ 74 ಮಂಗಳೂರಿನಲ್ಲೇ ಇವೆ. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 5,000 ಬೆಡ್‌ಗಳು ಲಭ್ಯವಿದೆ. ಅದರಲ್ಲಿ 3,800 ಜನರಲ್ ಬೆಡ್‌ಗಳು, 300 ಐಸಿಯು, ವೆನ್‌ಲಾಕ್ ಆಸ್ಪತ್ರೆಯಲ್ಲಿ 274 ಆಕ್ಸಿಜನ್ ಬೆಡ್‌ಗಳು, 70 ವೆಂಟಿಲೇಟರ್‌ಗಳು ಲಭ್ಯವಿದೆ. ಜಿಲ್ಲೆಗೆ ಆರೋಗ್ಯ ಸಮಸ್ಯೆಗಾಗಿ ನೆರೆಯ ಜಿಲ್ಲೆಗಳಿಂದಲೂ ರೋಗಿಗಳು ಬರುವುದರಿಂದ ಮುಂದೆ ಬೆಡ್‌ಗಳ ಕೊರತೆ ಕಾಣಿಸಿಕೊಳ್ಳಬಹುದು. ಆರೋಗ್ಯ ಸೇವೆಯನ್ನು ಇತರ ಜಿಲ್ಲೆಯವರಿಗೆ ನಿರಾಕರಿಸಲು ಸಾಧ್ಯವಿಲ್ಲ. ಹಾಗಿದ್ದರೂ ದ.ಕ.ಜಿಲ್ಲೆಯವರಿಗೆ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.