ರಸ್ತೆ ಬದಿ ನಿಂತಿದ್ದ ಟಿಪ್ಪರ್ ಗೆ ಡಿಕ್ಕಿ ಹೊಡೆದ ಕಾರು: ಕಾರು ಚಾಲಕ ಸ್ಥಳದಲ್ಲೇ ಸಾವು

ರಸ್ತೆ ಬದಿ ನಿಂತಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟು, ಕಾರಿನಲ್ಲಿದ್ದ ಇಬ್ಬರು ಸಹ ಪ್ರಯಾಣಿಕರು ತೀವ್ರ ಗಾಯಗೊಂಡ ಘಟನೆ ಸುರತ್ಕಲ್ ಹೊಸ ಬೆಟ್ಟು ಬಳಿ ನಡೆದಿದೆ.
ಕಾರು ಚಾಲಕ ಅರ್ಜುನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಹ ಪ್ರಯಾಣಿಕ ಮೊಹಮ್ಮದ್ ಫಿಝಾನ್ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಇನ್ನೋರ್ವ ಸಹ ಪ್ರಯಾಣಿಕ ಅನಿರುದ್ಧ್ ನಾಯರ್ ಅವರ ಹಣೆಗೆ ಗಾಯವಾಗಿದೆ.
ಗಾಯಾಳುಗಳಿಬ್ಬರಿಗೂ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಮಿಳುನಾಡಿನ ರಿಜಿಸ್ಟ್ರೇಶನ್ ನಂಬರ್ ಹೊಂದಿರುವ ಫೋರ್ಚುನರ್ ಕಾರನ್ನು ಅರ್ಜುನ್ ಅವರು ಚಲಾಯಿಸಿಕೊಂಡು ಮಂಗಳೂರಿನಿಂದ ಸುರತ್ಕಲ್ ಕಡೆಗೆ ಹೋಗುತ್ತಿದ್ದಾಗ ಸುರತ್ಕಲ್ ಸಮೀಪದ ಹೊಸಬೆಟ್ಟು ಪೆಟ್ರೋಲ್ ಪಂಪ್ ಎದುರು ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಕಾರು ಚಾಲಕನ ಅತಿ ವೇಗದ ಹಾಗೂ ನಿರ್ಲಕ್ಷ್ಯದ ಚಾಲನೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.