ಮಗನೇ ತಾಯಿಯನ್ನು ಹತ್ಯೆ ಮಾಡಿದ ಕೇಸ್‌ ಗೆ ಹೊಸ ತಿರುವು!: ರಾಡ್‌ ನಲ್ಲಿ ಪತ್ತೆಯಾಯ್ತು ಮತ್ತೊಬ್ಬನ ಬೆರಳಚ್ಚು! - Mahanayaka
1:59 AM Thursday 20 - February 2025

ಮಗನೇ ತಾಯಿಯನ್ನು ಹತ್ಯೆ ಮಾಡಿದ ಕೇಸ್‌ ಗೆ ಹೊಸ ತಿರುವು!: ರಾಡ್‌ ನಲ್ಲಿ ಪತ್ತೆಯಾಯ್ತು ಮತ್ತೊಬ್ಬನ ಬೆರಳಚ್ಚು!

bangalore
06/02/2024

ಬೆಂಗಳೂರು:  ತಿಂಡಿ ಮಾಡಿಲ್ಲ ಎಂದು ಮಗನೇ ತಾಯಿಯನ್ನು ಹತ್ಯೆ ಮಾಡಿದ ಘಟನೆಯೊಂದು ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಆದ್ರೆ ಈ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ನೇತ್ರಾ ಎಂಬ ಮಹಿಳೆಯನ್ನು ಅವರ ಅಪ್ರಾಪ್ತ ವಯಸ್ಸಿನ ಮಗ ಪವನ್‌ ರಾಡ್‌ ನಿಂದ ಹೊಡೆದು ಹತ್ಯೆ ಮಾಡಿದ್ದ. ಹತ್ಯೆಯ ಬಳಿಕ ಪೊಲೀಸರಿಗೆ ಕರೆ ಮಾಡಿ ತಾನೇ ತಾಯಿಯನ್ನು ಕೊಂದಿರೋದಾಗಿ ಹೇಳಿದ್ದ.  ಆದ್ರೆ ಎಫ್‌ ಎಸ್‌ ಎಲ್‌ ಪರಿಶೀಲನೆ ವೇಳೆ ಹತ್ಯೆಗೆ ಬಳಸಿದ ರಾಡ್‌ ನಲ್ಲಿ ಇಬ್ಬರ ಕೈ ಬೆರಳಚ್ಚು ಪತ್ತೆಯಾಗಿದ್ದು, ಹೀಗಾಗಿ ತಂದೆ ಚಂದ್ರಪ್ಪ ಕೂಡ ಈ ಹತ್ಯೆಯಲ್ಲಿ ಭಾಗಿಯಾಗಿರೋದು ಬೆಳಕಿಗೆ ಬಂದಿದೆ.

ನೇತ್ರಾ ಪಾರ್ಟಿ ಸೇರಿದಂತೆ ಐಶಾರಾಮಿ ಜೀವನ ಇಷ್ಟಪಡುತ್ತಿದ್ದಳು. ಮನೆ ಬಿಟ್ಟು ಹೆಚ್ಚಾಗಿ ಹೊರಗಡೆಯೇ ಸುತ್ತಾಟ ಆರಂಭಿಸಿದ್ದಳು. ಇದೆಲ್ಲವೂ ಅತೀಯಾದಾಗಲೇ ಈಕೆಯ ಮೇಲೆ ತಂದೆ ಮಗ ಕೋಪಗೊಂಡಿದ್ದರು ಎನ್ನಲಾಗಿದೆ. ಒಂದು ದಿನ ಬೇರೊಬ್ಬ ವ್ಯಕ್ತಿಯ ಜೊತೆಗೆ ನೇತ್ರಾ ಮಗ ಪವನ್‌ ನ ಕಣ್ಣಿಗೆ ಬಿದ್ದಳು. ಈ ವಿಚಾರ ಮಗನ ಕೋಪಕ್ಕೆ ಕಾರಣವಾಗಿತ್ತು.

2ರಂದು ಅಡುಗೆ ಮಾಡುವ ವಿಚಾರಕ್ಕೆ ಮನೆಯಲ್ಲಿ ದೊಡ್ಡ ಗಲಾಟೆ ನಡೆದಿತ್ತು. ಈ ವೇಳೆ ಕೋಪಗೊಂಡ ಚಂದ್ರಪ್ಪ ಪತ್ನಿಯ ತಲೆಗೆ ರಾಡ್‌ ನಿಂದ ಹೊಡೆದಿದ್ದಾನೆ. ಆತನ ಹೊಡೆತಕ್ಕೆ ನೇತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಳು.

ತಾಯಿಯನ್ನು ಕೊಂದ ತಂದೆಯನ್ನು ಉಳಿಸಲು ಮಗ ಪವನ್‌ ಮುಂದಾಗಿದ್ದು, ತಾನೇ ಕೊಲೆ ಮಾಡಿರೋದಾಗಿ ಆತ ಒಪ್ಪಿಕೊಳ್ಳಲು ಮುಂದಾಗಿದ್ದಾನೆ. ಅಂತೆಯೇ ತಂದೆಯನ್ನು ಮನೆಯಿಂದ ಹೊರಗೆ ಕಳಿಸಿ,  ತಾಯಿಯ ಮೃತದೇಹದ ತಲೆಗೆ ರಾಡ್‌ ನಿಂದ ಮತ್ತೆ ಮೂರು ಬಾರಿ ಹೊಡೆದು, ತಾನೇ ಹತ್ಯೆ ಮಾಡಿರೋದಾಗಿ ಪೊಲೀಸರಿಗೆ ಕರೆ ಮಾಡಿದ್ದ. ಎಫ್‌ ಎಸ್‌ ಎಲ್‌ ಪರಿಶೀಲನೆ ವೇಳೆ ನೇತ್ರಾಳ ಪತಿ ಕೂಡ ಹತ್ಯೆಯಲ್ಲಿ ಭಾಗಿಯಾಗಿರೋದು ಬೆಳಕಿಗೆ ಬಂದಿದೆ. ಸದ್ಯ ತಂದೆ ಮಗನನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ