ಪಾರ್ಟ್ ಟೈಮ್ ಗಾದ್ರೂ ಒಬ್ಬ ವಿಪಕ್ಷ ನಾಯಕನನ್ನ ಆಯ್ಕೆ ಮಾಡ್ಬಹುದಿತ್ತು! - Mahanayaka
11:00 AM Thursday 12 - December 2024

ಪಾರ್ಟ್ ಟೈಮ್ ಗಾದ್ರೂ ಒಬ್ಬ ವಿಪಕ್ಷ ನಾಯಕನನ್ನ ಆಯ್ಕೆ ಮಾಡ್ಬಹುದಿತ್ತು!

opposition
27/08/2023

  • ಮೂರ್ತಿ

ಬೆಳಗ್ಗೆ ಎದ್ದು ಮೊಬೈಲ್ ನೋಡ್ಬೇಕಾದ್ರೆ… ನ್ಯೂಸ್ ಲಿಂಕ್ ವೊಂದು ವಾಟ್ಸಾಪ್ ನಲ್ಲಿ ನೋಡ್ದೆ… ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗಿ, 100 ದಿನ ಪೂರ್ತಿ ಆಯ್ತಂತೆ… ಆಯ್ತು ಬಿಡಿ, ಒಳ್ಳೆಯದೇ ಆಯ್ತು… ಈ ಸಲ ಆದ್ರೂ ಒಂದೇ ಸರ್ಕಾರ ಐದು ವರ್ಷ ಪೂರೈಸುತ್ತಾ ನೋಡೋಣ ಅಂತ ಅಂದುಕೊಳ್ತಿರೋವಾಗ್ಲೇ… ನಮ್ಮ ಪಕ್ಕದ ಮನೆಯ ವಿನಾಯಕನ ಮಗ ಹರೀಶ ಓಡೋಡಿ ಬಂದ, ಏನ್ ಅಂಕಲ್ ಚೆನ್ನಾಗಿದ್ದೀರಾ? ಟೀ ಆಯ್ತಾ ಅಂತ ಕೇಳ್ದ…

ಹ್ಞೂ ಆಯ್ತು… ನಿಂದು ಆಯ್ತಾ ಅಂತ ಅವನಿಗೂ ವಿಚಾರಿಸ್ಬಿಟ್ಟೆ… ಆಯ್ತು ಅಂಕಲ್ ಅಂತಂದ… ಇನ್ನೇನು ಕೆಲ ಹೊತ್ತು ಕಷ್ಟ ಸುಖ ಮಾತಾಡಿದ್ವಿ… ಮಾತಾಡ್ತಾ ಮಾತಾಡ್ತಾ… ರಾಜಕೀಯದತ್ತ ನಮ್ಮ ಚರ್ಚೆ ವಾಲಿತು.

“ಹರೀಶ… ರಾಜ್ಯದಲ್ಲಿ ಹೊಸ ಸರ್ಕಾರ ಬಂದು 100 ದಿನ ಆಯ್ತಂತೆ… ಏನು ನಿನ್ನ ಸ್ನೇಹಿತರ ಪಾರ್ಟಿ ಏನಾದ್ರು ಇದ್ಯಾ…” ಅಂತ ಕೇಳ್ದೆ…

“ಅಯೋ… ಪಾರ್ಟಿನೂ ಇಲ್ಲ, ಏನೂ ಇಲ್ಲ ಅಂಕಲ್… ಅದೆಲ್ಲ ಏನಿದ್ರೂ ಎಲೆಕ್ಷನ್ ಟೈಮ್ ನಲ್ಲಿರುತ್ತೆ, ಬೇಡ ಅಂದ್ರೂ ಒತ್ತಾಯದಲ್ಲಿ ಪಾರ್ಟಿ ಕೊಡ್ತಾರೆ… ಎಲ್ಲ ಪಾರ್ಟಿಯೋರ್”  ಅಂದ್ಬುಟ್ಟ…

ಆಯ್ತು ಬಿಡಪ್ಪಾ… ಅಂತು ಇಂತೂ  ನಿನ್ಗೆ ಎಲ್ಲ ಪಾರ್ಟಿ ಸಹವಾಸ ಸಾಕು ಅನ್ನೋ ಥರ ಆಗ್ಬಿಟ್ಟಿದೆ, ಅಂತ ನನ್ಗಂತೂ ಅರ್ಥ ಆಯ್ತು ಅಂದೆ…

“ಅದು ಇದ್ದಿದ್ದೆ ಅಂಕಲ್”, ಅಂತ ನಿರಾಸೆಯ ಮುಖ ಹೊತ್ತ ಹರೀಶ ಮಾತು ಮುಂದುವರಿಸಿದ… “ಕಳೆದ ಚುನಾವಣೆಯಲ್ಲಿ ಎಂಎಲ್ ಎಗಳನ್ನ ಗೆಲ್ಸೋಕೆ ಓಡಾದ್ವಿ… ನೆಕ್ಸ್ಟ್ ಎಲೆಕ್ಷನ್ ನಲ್ಲಿ ಎಂಪಿಗಳನ್ನ ಗೆಲ್ಲಿಸ್ಬೇಕು… ಒಂದೊಂದು ಬೂತ್ ನಲ್ಲಿ ಇಂತಿಷ್ಟು ಓಟ್ ಹಾಕಿಸ್ಬೇಕು, ಅನ್ನೋದಷ್ಟೆ ನಮ್ಗೆ ಟಾಸ್ಕ್ ಕೊಡ್ತಾರೆ… ಗೆದ್ದ ಮೇಲೆ  ಕಷ್ಟಪಟ್ಟು ದುಡಿದ ನಾವೆಲ್ಲ ಲೆಕ್ಕಕ್ಕೆ ಬರಲ್ಲ, ಸುಮ್ನೆ ನಮ್ಮಂಥವರು, ಪಾರ್ಟಿಯ ಬಾವುಟ ಹಿಡಿಬೇಕು, ಬ್ಯಾನರ್ ಕಟ್ಬೇಕು… ಬೇರೆ ಪಕ್ಷದವರ ಜೊತೆ ಗಲಾಟೆ ಮಾಡ್ಬೇಕು, ಅಧಿಕಾರ ಸಿಕ್ಕಿದ ಮೇಲೆ ನಾವೆಲ್ಲ ಬೇಡ… ಗೆಲ್ಲುವವರೆಗೆ ಪಕ್ಷ, ಸಿದ್ಧಾಂತ, ಗೆದ್ದ ಮೇಲೆ ಎಲ್ಲಿ ಲಾಭ ಇರುತ್ತೋ ಅದೇ ಪಕ್ಷ, ಅದೇ ಸಿದ್ಧಾಂತ, ನೋಡಿ, ನೋಡಿ ಸಾಕಾಬಿಟ್ಟಿದೆ…” ಅಂದ್ಬಿಟ್ಟ…

“ಅದೂ ಸರಿ ಬಿಡು… ಏನ್ ಮಾಡೋಣ… ನಿನ್ನನ್ನ ನೋಡಿದ್ರೆ, ವಿರೋಧ ಪಕ್ಷದವ್ರೇ ನೆನಪಾಗ್ತಾರೆ ನನ್ಗೆ… ಹೊಸ ಸರ್ಕಾರ ಬಂದು 100 ದಿನ ಆದ್ರೂ ಇನ್ನೂ ವಿರೋಧ ಪಕ್ಷದ ನಾಯಕರನ್ನೇ ಆಯ್ಕೆ ಮಾಡಿಲ್ವಲ್ಲ… ವಿರೋಧ ಪಕ್ಷದ ನಾಯಕನಿಲ್ಲದ 100 ದಿನ ಅಂತ ಸರ್ಕಾರದವ್ರೆ… ಸಂಭ್ರಮಿಸ್ತಿದ್ದಾರೆ.  ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕ ಆಗೋ ಸಾಮಾರ್ಥ್ಯ ಇರೋವವರು ಯಾರೂ ಇಲ್ವಾ, ಅಥವಾ ಹೊಸ ಸರ್ಕಾರದವರನ್ನ ವಿರೋಧ ಮಾಡಲು ಏನೂ ಇಲ್ಲ ಅಂತ ಇನ್ನೂ ನೇಮಕ ಮಾಡಿಲ್ವಾ?” ಅಂತ ಕುತೂಹಲದಿಂದಲೇ ಕೇಳಿದೆ…

“ಏನ್ ಮಾಡೋಣ ಅಂಕಲ್ ನಾನೇನಾದ್ರೂ… ಆ ಪಾರ್ಟಿಯ ಹೈಕಮಾಂಡ್ ಆಗಿದ್ದಿದ್ರೆ… ಒಳ್ಳೆಯ ನಾಯಕ ಸಿಗ್ಲಿಲ್ಲ ಅಂತ ಸುಮ್ನೆ ಇರ್ತಿರ್ಲಿಲ್ಲ… ಪಾರ್ಟ್ ಟೈಮ್ ಗಾದ್ರೂ… ಒಬ್ಬ ವಿಪಕ್ಷ ನಾಯಕನನ್ನ ಆಯ್ಕೆ ಮಾಡ್ತಿದ್ದೆ ಅಂದ…”

“ಏನೋ ಇದು ಹೀಗಂದ್ಬಿಟ್ಟೆ… ಪಾರ್ಟ್ ಟೈಮ್ ಗೆ ಆಯ್ಕೆ ಮಾಡೋದಿಕ್ಕೆ ಅದೇನು… ಮಕ್ಕಳಾಟನಾ… ವಿಪಕ್ಷ ಸ್ಥಾನಕ್ಕೆ ಎಷ್ಟು ಮಹತ್ವ ಇದೆ ಗೊತ್ತಾ?”  ಅಂತ ಹರೀಶನಿಗೆ ಪ್ರಶ್ನೆ ಹಾಕಿದೆ.

“ಇನ್ನೇನು ಅಂಕಲ್ ಈ ರಾಜಕೀಯ ಪಕ್ಷದವರೆಲ್ಲ, ಅಧಿಕಾರಕ್ಕೆ ಬರ್ಬೇಕಾದ್ರೆ, ಆಪರೇಷನ್ ಮಾಡೋಕು ರೆಡಿಯಾಗಿರ್ತಾರೆ… ಆದ್ರೆ ಜವಾಬ್ದಾರಿಯುತ ಸ್ಥಾನವಾಗಿರೋ ವಿಪಕ್ಷ ಸ್ಥಾನವನ್ನ ಹಾಗೆ ಬಿಟ್ಟಿದ್ದಾರಲ್ಲ…” ಅಂತ ಒಳಗಿಂದೊಳಗೆ ವ್ಯಥೆ ಪಟ್ಟ…

ನಾಯಕರು ಇಲ್ಲ ಅಂತ ವಿಪಕ್ಷ ಸ್ಥಾನ ಖಾಲಿ ಬಿಟ್ಟಿಲ್ಲ… ಹರೀಶ, ಪಕ್ಕದಲ್ಲೇ ಇರೋ ಸ್ಥಳೀಯ ಪಕ್ಷದ ನಾಯಕರ ಜೊತೆಗೇನಾದ್ರೂ ಮೈತ್ರಿ ಆಗೋದಿದ್ರೆ… ಗಿಫ್ಟ್ ಕೊಡೋಣ ಅಂತ ಏನಾದ್ರೂ ಇಟ್ಕೊಂಡಿದ್ದಾರಾ ಹೇಗೆ? ಅಂತ ಎಲ್ಲರ ಅನುಮಾನವನ್ನ ನಾನೇ ಕೇಳ್ಬಿಟ್ಟೆ…

ಯಾರಿಗೆ ಗೊತ್ತು ಅಂಕಲ್… ಚದುರಂಗದ ಆಟವನ್ನಾದ್ರೂ ತಿಳಿಯಬಹುದು ಈಗಿನ ರಾಜಕೀಯದಾಟವನ್ನ ತಿಳಿಯೋದು ತುಂಬಾನೇ ಕಷ್ಟ… ಇಷ್ಟು ದಿನ ಕಾದಿದ್ದೇವೆ… ಇನ್ನು ಕಾಯೋಣ… ಲೋಕಸಭೆ ಎಲೆಕ್ಷನ್ ಮುಗಿಯೋ ತನಕವಾದ್ರೂ ಪಾರ್ಟ್ ಟೈಮ್ ಗೆ ಒಬ್ಬ ವಿಪಕ್ಷ ನಾಯಕನನ್ನ ಹಾಕ್ಬಬಹುದಿತ್ತು ಅಂತ ಏನೋ ಯೋಚ್ನೇ ಮಾಡ್ತಾ ಹರೀಶ ಹೊರಟು ಹೋದ…

ಇತ್ತೀಚಿನ ಸುದ್ದಿ