ಪರೇಶ್ ಮೇಸ್ತಾ ಹೆಸರಲ್ಲಿ ಗಲಭೆ; 112 ಜನರ ಮೇಲಿದ್ದ ಪ್ರಕರಣ ವಾಪಸ್ ಪಡೆದ ಸರ್ಕಾರ
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಪರೇಶ್ ಮೇಸ್ತಾ ಅವರ ಸಾವಿನ ಸಂದರ್ಭದಲ್ಲಿ ಕೋಮು ಉದ್ವಿಗ್ನತೆ ಉಂಟಾಗಿ ದಾಖಲಾಗಿದ್ದ ಪ್ರಕರಣಗಳನ್ನು ಬಿಜೆಪಿ ಸರ್ಕಾರ ವಾಪಸ್ ಪಡೆದಿದೆ. ಪ್ರಕರಣ ಘಟಿಸಿ ಆರು ವರ್ಷಗಳ ನಂತರ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.
ಗಲಭೆಯಲ್ಲಿ 112 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹಿಂಪಡೆಯಲು ಸರ್ಕಾರ ಆದೇಶ ಹೊರಡಿಸಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೋಮುಗಲಭೆಗೆ ಸಂಬಂಧಿಸಿದಂತೆ 112 ಮಂದಿ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
2017ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮೇಸ್ತಾ (19) ಎಂಬ ಯುವಕ ಶವವಾಗಿ ಪತ್ತೆಯಾಗಿದ್ದನು. ಡಿಸೆಂಬರ್ 8 ರಂದು ಹೊನ್ನಾವರದ ಶೆಟ್ಟಿಕೆರೆಯ ಕೆರೆಯಲ್ಲಿ ಅವರ ಮೃತದೇಹ ಕಂಡುಬಂದಿತ್ತು. ಇದಕ್ಕೆ ಕೋಮು ಬಣ್ಣ ಕಟ್ಟಿದ್ದರಿಂದ ರಾಜ್ಯದಲ್ಲಿ ಉದ್ವಿಗ್ನತೆ ಉಂಟಾಗಿತ್ತು.
ಇದೊಂದು ಕೊಲೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು, ಬಜರಂಗದಳ ಹಾಗೂ ಸ್ಥಳೀಯ ಶಾಸಕರು ಸೇರಿದಂತೆ ಬಲಪಂಥೀಯ ಸಂಘಟನೆಗಳು ಮೇಸ್ತಾ ಸಾವಿನ ವಿರುದ್ಧ ಪ್ರತಿಭಟನೆ ನಡೆಸಿದ್ದವು.
ಶಾಸಕ ಹಾಗೂ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಕಾರ್ಯಕರ್ತರು, ಬಜರಂಗದಳ ಕಾರ್ಯಕರ್ತರು ಹಾಗೂ ಇತರರ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಇದೀಗ, ಗಲಭೆಗೆ ಸಂಬಂಧಿಸಿದ ಎಲ್ಲಾ 112 ಜನರ ಮೇಲಿನ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಆದೇಶಿಸಿದೆ.
ಮೆಸ್ತಾ ಸಾವಿನ ಪ್ರಕರಣ:
ಕಳೆದ ವರ್ಷ, ಕೇಂದ್ರೀಯ ತನಿಖಾ ದಳ (ಸಿಬಿಐ) ಮೆಸ್ತಾ ಪ್ರಕರಣದ ಕುರಿತು ‘ಬಿ’ ರಿಪೋರ್ಟ್ ಸಲ್ಲಿಸಿತು. ಮೇಸ್ತಾ ಸಾವು ಆಕಸ್ಮಿಕ ಎಂದು ಘೋಷಿಸಿದೆ.
ಮೆಸ್ತಾ ಅವರ ದೇಹದಲ್ಲಿ ಯಾವುದೇ ಬಾಹ್ಯ ಗಾಯಗಳು ಅಥವಾ ಹಲ್ಲೆಯ ಗುರುತುಗಳಿಲ್ಲ ಎಂದು ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅವರನ್ನು ಚಿತ್ರಹಿಂಸೆ ನೀಡಿ ಕೊಲ್ಲಲಾಗಿದೆ ಎಂಬುದು ಸುಳ್ಳು ಎಂದಿತ್ತು ಸಿಬಿಐ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಮಾಲ್ ಆಜಾದ್, ಆಶಿಫ್ ರಫೀಕ್, ಫೈಝಲ್, ಸಲೀಂ ಮತ್ತು ಇಮ್ತಿಯಾಜ್ ಸೇರಿದಂತೆ ಐವರನ್ನು ಬಂಧಿಸಲಾಗಿತ್ತು.
ಪರೇಶ್ ಮೇಸ್ತಾ ಅವರ ತಂದೆ ಕಮಲಾಕರ್ ಮೇಸ್ತಾ, ಬಲಪಂಥೀಯ ಸಂಘಟನೆಗಳಾದ ಶ್ರೀರಾಮ ಸೇನೆ, ಹಿಂದೂ ಜನಜಾಗೃತಿ ಸಮಿತಿಯು ಸಿಬಿಐ ವರದಿಯನ್ನು ಒಪ್ಪಿಕೊಂಡಿಲ್ಲ. ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಮೇಸ್ತಾ ಸಾವು ರಾಜಕೀಯಕ್ಕೆ ಬಳಕೆ:
2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದ ಗಲಭೆಯಲ್ಲಿ ಮೀನುಗಾರ ಯುವಕ ಪರೇಶ್ ಮೇಸ್ತಾ ಕಾಣೆಯಾಗಿದ್ದ. ಎಂಟರಂದು ಹೊನ್ನಾವರ ನಗರದ ಶನಿದೇವಾಸ್ಥಾನದ ಹಿಂಭಾಗದ ಶೆಟ್ಟಿ ಕೆರೆಯಲ್ಲಿ ಮೇಸ್ತಾ ಶವವಾಗಿ ಪತ್ತೆಯಾಗಿದ್ದ. ಯುವಕನನ್ನು ಮುಸ್ಲಿಮರು ಹತ್ಯೆ ಮಾಡಿದ್ದಾರೆಂದು ಸಂಘಪರಿವಾರ ಹಾಗೂ ಬಿಜೆಪಿ ಆರೋಪಿಸಿತ್ತು. ಮೃತ ಮೇಸ್ತಾನನ್ನು ಹಿಂದೂ ಕಾರ್ಯಕರ್ತ ಎಂದು ಬಿಂಬಿಸಲಾಯಿತು. ಆಗಿನ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹರಿಹಾಯ್ದಿತ್ತು.
ಪರೇಶ್ ಮೆಸ್ತಾ ಸಾವು ಮುಂದಿಟ್ಟು ಬಿಜೆಪಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡಿತ್ತು. ಆಗಿನ ಗೃಹ ಮಂತ್ರಿ ರಾಮಲಿಂಗ ರೆಡ್ಡಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ವಿಸ್ತೃತ ವಿಚಾರಣೆಗೆ ಕೇಳಿತ್ತು. ಅದಾಗಿಯೂ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರ ಕನ್ನಡ, ಉಡುಪಿ, ದಕ, ಶಿವಮೊಗ್ಗ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬಿರುಸಿನ ಪ್ರಚಾರ ನಡೆಸಿತ್ತು.
ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಶೋಭಾ ಕರಂದ್ಲಾಜೆ ತರಹೇವಾರಿ ಹೇಳಿಕೆಗಳನ್ನು ನೀಡಿದ್ದರು. “ಈಶ್ವರಪ್ಪನವರ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಜಿಹಾದಿಗಳ ಪರವಾಗಿ ಸರ್ಕಾರ ಹಾಗೂ ಪೊಲೀಸರೇ ನಿಂತು ಹಿಂದೂಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದನ್ನು ರಾಜ್ಯಪಾಲರಿಗೆ ನೀಡಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ನಡೆಯುತ್ತಿರುವ ಘಟನೆಗಳಿಗೆ ರಾಜ್ಯ ಸರ್ಕಾರವೇ ಪ್ರಮುಖವಾದ ಕಾರಣ. ಪ್ರಕರಣವನ್ನು ಮುಚ್ಚಿಹಾಕುವ ಗುಮಾನಿ ಆ ಭಾಗದ ಜನರಿಗೆ ಬರುತ್ತಿದೆ” ಎಂದು ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದರು.
ಇಡೀ ದೇಶದ ಶೋಷಿತ ಹಾಗೂ ಅಲಕ್ಷಿತ ಸಮುದಾಯಗಳನ್ನು ರಕ್ಷಿಸುತ್ತಿರುವ ಸಂವಿಧಾನವನ್ನೇ ಬದಲಿಸುವುದಾಗಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಸಂಸದ ಅನಂತಕುಮಾರ್ ಹೆಗಡೆ, “ಮೇಸ್ತಾನ ಪ್ರತಿ ಹನಿ ರಕ್ತಕ್ಕೂ ನ್ಯಾಯ ದೊರಕಿಸದೆ ಬಿಡುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw