ಶಾಸಕ ಎ.ಎಸ್.ಪಾಟೀಲ ಬೇಡಿಕೆಗೆ ಸ್ಪಂದಿಸಿದ ಸಿಎಂ | 1.5 ಕೋಟಿ ರೂ ಅನುದಾನ ಮಂಜೂರು - Mahanayaka
5:58 AM Saturday 14 - December 2024

ಶಾಸಕ ಎ.ಎಸ್.ಪಾಟೀಲ ಬೇಡಿಕೆಗೆ ಸ್ಪಂದಿಸಿದ ಸಿಎಂ | 1.5 ಕೋಟಿ ರೂ ಅನುದಾನ ಮಂಜೂರು

a s pateel
29/05/2021

ಮುದ್ದೇಬಿಹಾಳ: ಕೊರೊನಾ ಎರಡನೇ ಅಲೆಯ ಪ್ರಗತಿ ಮತ್ತು ನಿಯಂತ್ರಣಕ್ಕೆ ಕೈಕೊಂಡಿರುವ ಕ್ರಮಗಳ ಕುರಿತು ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಸದರು, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ನಲ್ಲಿ ಮುದ್ದೇಬಿಹಾಳ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಅವರ ಬೇಡಿಕೆಗೆ ಸ್ಪಂದಿಸಿ ತಕ್ಷಣವೇ 1.5 ಕೋಟಿ ರೂ ಅನುದಾನ ಮಂಜೂರು ಮಾಡಿ ಸಹಕರಿಸಿದರು.

ಇಲ್ಲಿನ ಮಿನಿ ವಿಧಾನಸೌಧದ ವಿಡಿಯೋ ಕಾನ್ಫರೆನ್ಸ್ ಹಾಲ್ನಲ್ಲಿ ಸಂವಾದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಂದಾಜು ಎರಡು ಗಂಟೆ ಕಾಲ ನಡೆದ ಸಂವಾದದಲ್ಲಿ ಈ ಮತಕ್ಷೇತ್ರದ ಶಾಸಕರಿಗೆ ಚರ್ಚಿಸಲು ಕೆಲವೇ ನಿಮಿಷ ಕಾಲಾವಕಾಶ ಕೊಡಲಾಗಿತ್ತು. ಈ ಕಾಲಾವಕಾಶ ಬಳಸಿಕೊಂಡ ಶಾಸಕರು ಇಲ್ಲಿ ತುರ್ತಾಗಿ ಬೇಕಾಗಿರುವ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿಗೆ ಮಂಡಿಸಿ ಈ ಮಂಜೂರಾತಿ ಪಡೆದುಕೊಂಡರು.

ಈ ಮತಕ್ಷೇತ್ರದಲ್ಲಿ ಮುದ್ದೇಬಿಹಾಳ, ತಾಳಿಕೋಟೆ ತಾಲೂಕುಗಳು ಬರುತ್ತವೆ. ಮುದ್ದೇಬಿಹಾಳದಲ್ಲಿ ತಾಲೂಕಾ ಆಸ್ಪತ್ರೆ ಇದ್ದು ತಾಳಿಕೋಟೆಯಲ್ಲಿ ಇನ್ನೂ ಸಮುದಾಯ ಆರೋಗ್ಯ ಕೇಂದ್ರವೇ ಕಾರ್ಯನಿರ್ವಹಿಸುತ್ತಿದೆ. ತಾಳಿಕೋಟೆ ತಾಲೂಕಾಗಿದ್ದರಿಂದ ಅಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಎರಡೂ ತಾಲೂಕಲ್ಲಿ ಬರುವ 8 ಪ್ರಾಥಮಿಕ ಆರೋಗ್ಯ ಕೇಂದ್ರ, 3 ಸಮುದಾಯ ಆರೋಗ್ಯ ಕೇಂದ್ರಗಳ ಕಟ್ಟಡಗಳು 30 ವರ್ಷ ಹಿಂದಿನ ಹಳೇ ಕಟ್ಟಡಗಳಾಗಿದ್ದು ಮಳೆ ಬಂದಾಗಲೆಲ್ಲ ಸೋರುತ್ತವೆ. ಇವುಗಳ ದುರಸ್ತಿಗೆ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕು. 200 ಆಕ್ಸೀಜನ್ ಬೆಡ್, 160 ಜಂಬೋ ಸಿಲಿಂಡರ್, 60 ಆಕ್ಸೀಜನ್ ಕಾನ್ಸಂಟ್ರೇಟರ್, ಕೋವಿಡ್ ಟ್ರೀಟಮೆಂಟ್ಗೆ ಬೇಕಾದ ಔಷಧಿ ಮುಂತಾದವುಗಳನ್ನು ಆದ್ಯತೆ ಮೇಲೆ ಪೂರೈಸಬೇಕು ಎನ್ನುವ  ಬೇಡಿಕೆ ಮಂಡಿಸಿದರು.

ಎಲ್ಲವನ್ನೂ ಆಲಿಸಿದ ಮುಖ್ಯಮಂತ್ರಿಯವರು ತಮ್ಮ ಜೊತೆ ಇದ್ದ ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿಯವರಿಗೆ ವಿಡಿಯೋ ಕಾನ್ಪರೆನ್ಸ್ ಸಂದರ್ಭವೇ ಸೂಚನೆ ನೀಡಿ ಮುದ್ದೇಬಿಹಾಳ ಶಾಸಕರಿಗೆ 1.5 ಕೋಟಿ ರೂ ಮಂಜೂರು ಮಾಡುವಂತೆ ಸೂಚಿಸಿ ಇನ್ನಿತರ ಚರ್ಚೆಗಳತ್ತ ಮರಳಿದರು.

ಇತ್ತೀಚಿನ ಸುದ್ದಿ