ಸಿರಿಯಾದ ಪದಚ್ಯುತ ಅಧ್ಯಕ್ಷ ಅಸದ್ ಮತ್ತು ಇಸ್ರೇಲ್ ನಡುವೆ ರಹಸ್ಯ ಸಂಬಂಧ? ಈ ದಾಖಲೆ ಏನ್ ಹೇಳುತ್ತೆ?
ಸಿರಿಯಾದ ಪದಚ್ಯುತ ಅಧ್ಯಕ್ಷ ಬಶ್ಯಾರುಲ್ ಅಸದ್ ಮತ್ತು ಇಸ್ರೇಲ್ ನಡುವೆ ರಹಸ್ಯ ಸಂಬಂಧ ಇತ್ತು ಎಂಬುದನ್ನು ಸಾಬೀತುಪಡಿಸುವ ಕೆಲವು ದಾಖಲೆಗಳು ಬಹಿರಂಗವಾಗಿವೆ. ಈ ದಾಖಲೆಗಳ ಅಧಿಕೃತತೆ ಇನ್ನಷ್ಟೇ ಸಾಬೀತುಗೊಳ್ಳಬೇಕಾಗಿದೆಯಾದರೂ ಈ ದಾಖಲೆಗಳಲ್ಲಿ ಅರಬ್ ರಿಪಬ್ಲಿಕ್ ನ ಅಧಿಕೃತ ಲೆಟರ್ ಹೆಡ್ ಗಳು ಮತ್ತು ಇಂಟಲಿಜೆನ್ಸ್ ಬ್ರಾಂಚಿನ ಸ್ಟ್ಯಾಂಪ್ ಗಳು ಇರುವುದಾಗಿ ತಿಳಿದು ಬಂದಿದ್ದು ಆದರಿಂದ ಇದು ಅಧಿಕೃತ ದಾಖಲೆಯಾಗಿದೆ ಎಂದು ಅಂದುಕೊಳ್ಳಲಾಗಿದೆ.
ಈ ದಾಖಲೆಗಳನ್ನು ಸಿರಿಯಾದ ಅನೇಕ ಪತ್ರಕರ್ತರು ಮತ್ತು ಅನೇಕ ಅಂತಾರಾಷ್ಟ್ರೀಯ ಪತ್ರಿಕೆಗಳು ಕೂಡ ಪ್ರಕಟಿಸಿವೆ. ಆಘಾತಕಾರಿ ಸಂಗತಿ ಏನೆಂದರೆ ಇರಾನ್ ವಿರುದ್ಧ ಇಸ್ರೇಲ್ ನಡೆಸಿರುವ ಸೈನಿಕ ಕಾರ್ಯಾಚರಣೆ ಯಲ್ಲಿ ಅಸದ್ ಅವರಿಗೆ ಪಾತ್ರವಿತ್ತು ಎಂಬ ಬೆಚ್ಚಿ ಬೀಳಿಸುವ ಮಾಹಿತಿಯನ್ನು ಈ ದಾಖಲೆಗಳು ನೀಡುತ್ತಿವೆ.
ಇರಾನ್ ಮತ್ತು ಹಿಝ್ಬುಲ್ಲಾದ ಸೇನಾ ಶಸ್ತ್ರಾಸ್ತ್ರಗಳ ಹರಿವನ್ನು ತಡೆಯಬೇಕೆಂದು ಸಿರಿಯ ಸರಕಾರಕ್ಕೆ ಇಸ್ರೇಲ್ ಕಳುಹಿಸಿದ ಪತ್ರದಲ್ಲಿ ವಿನಂತಿಸಿಕೊಳ್ಳಲಾಗಿದೆ. ಹಾಗೆಯೇ ಮೊಸಾದ್ ಎಂಬ ಗುಪ್ತ ನಾಮದೇಯದೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿ ಹಮಾಸ್ ನ ಚಟುವಟಿಕೆ ಬಗ್ಗೆ ಮತ್ತು ಅದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ಸಿರಿಯಾದ ರಕ್ಷಣಾ ಸಚಿವ ಲೆಫ್ ಟಿನೆಂಟ್ ಜನರಲ್ ಅಲಿ ಮಹಮ್ಮದ್ ಅಬ್ಬಾಸ್ ಅವರ ಜೊತೆ ನೇರವಾಗಿ ಮಾಹಿತಿಯನ್ನು ಹಂಚಿಕೊಂಡಿರುವುದನ್ನು ದಾಖಲೆಗಳು ಹೇಳುತ್ತಿವೆ.
ಈ ಎಲ್ಲ ಮಾಹಿತಿಯನ್ನು ರಾಷ್ಟ್ರೀಯ ಸುರಕ್ಷಾ ಬ್ಯುರೋದ ಮಾಜಿ ನಾಯಕ ಅಲಿ ಮಮ್ಲುಕ್ ಅವರಿಗೆ ಹಸ್ತಾಂತರಿಸಿರುವುದಾಗಿ ಕೂಡ ಸೋರಿಕೆಯಾಗಿರುವಾಗ ದಾಖಲೆಗಳು ಹೇಳುತ್ತಿವೆ.
ಇರಾನಿನ ಜೊತೆ ಸಹಕಾರ ಮುಂದುವರಿಸಿದರೆ ಭಾರಿ ದೊಡ್ಡ ಪ್ರತ್ಯಾಘಾತವನ್ನು ಎದುರಿಸಬೇಕಾದೀತು ಎಂದು 2023 ಎಪ್ರಿಲ್ ನಲ್ಲಿ ಸಿರಿಯಾಕ್ಕೆ ಇಸ್ರೇಲ್ ಮುನ್ನೆಚ್ಚರಿಕೆಯನ್ನು ನೀಡಿತ್ತು. ಅದಕ್ಕೆ ಪೂರ್ವಭಾವಿಯಾಗಿ ಗೋಲಾನ್ ಬೆಟ್ಟದಲ್ಲಿ ಇಸ್ರೇಲ್ ರಾಕೆಟ್ ಜಮಾಾವಣೆಯನ್ನು ಮಾಡಿತ್ತು ಎಂದು ಕೂಡ ಸೋರಿಕೆಯಾದ ದಾಖಲೆಗಳು ಹೇಳುತ್ತಿವೆ.
ಇಸ್ರೇಲ್ ವಿರೋಧಿ ಶಕ್ತಿಯಾಗಿ ಹೊರಜಗತ್ತಿಗೆ ಅಸದ್ ಗುರುತಿಸಿಕೊಂಡಿದ್ದರು. ಇಸ್ರೇಲ್ ನ ವಿರುದ್ಧ ಅರಬ್ ಜಗತ್ತಿನ ಪ್ರಬಲ ಪ್ರತಿರೋಧದ ಶಕ್ತಿಯಾಗಿ ಅವರು ಬಿಂಬಿಸಿಕೊಂಡಿದ್ದರು. ಆದರೆ ಇದೀಗ ಸೋರಿಕೆಯಾಗಿರುವ ದಾಖಲೆಗಳು ಅವರ ಇನ್ನೊಂದು ಕಪಟ ಮುಖವನ್ನು ಬಹಿರಂಗ ಪಡಿಸಿದೆ ಎಂದು ಹೇಳಲಾಗುತ್ತಿದೆ. ಇಸ್ರೇಲ್ ನ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿರುವ ಅಸದ್ ಅವರು ಇರಾನ್ ಮತ್ತು ಹಿಝ್ಬುಲ್ಲಾ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವುದಕ್ಕೆ ಇಸ್ರೇಲ್ ಗೆ ನೆರವಾಗಿದ್ದಾರೆ ಎಂಬುದು ಈ ದಾಖಲೆಗಳಿಂದ ಗೊತ್ತಾಗುತ್ತಿದೆ.
ಇದೇ ವೇಳೆ ಅಸದ್ ಅವರ ಸರ್ಕಾರ ಪತನಗೊಂಡ ಬಳಿಕ ಸಿರಿಯಾದ ಹೊಸ ಬಂಡುಕೋರ ಸರಕಾರದೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸಲು ಇರಾನ್ ಮುಂದಾಗಿದೆ. ಇಸ್ರೇಲ್ ಹಿಡಿತದಿಂದ ಪ್ರತಿಪಕ್ಷಗಳು ದೂರ ನಿಲ್ಲಬೇಕು ಎಂದು ಇರಾನ್ ಕರೆ ನೀಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj