ವೀರ ಮರಣ ಹೊಂದಿದ ಅರ್ಜುನನಿಗೆ ಕಣ್ಣೀರಿನ ವಿದಾಯ
ಹಾಸನ: ಕಾಡಾನೆ ಹಿಡಿಯುವ ಕಾರ್ಯಾಚರಣೆ ವೇಳೆ ವೀರ ಮರಣ ಹೊಂದಿದ ಅರ್ಜುನನ ಅಂತ್ಯ ಕ್ರಿಯೆಯನ್ನು ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಅರಣ್ಯದಲ್ಲೇ ನಡೆಸಲು ಸಿದ್ಧತೆ ನಡೆಸಿರುವುದಕ್ಕೆ ಆನೆ ಮಾವುತರು ಹಾಗೂ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
8 ಅಂಬಾರಿಯನ್ನು ಹೊತ್ತಿದ್ದ ಅರ್ಜುನನ್ನು ಮೈಸೂರಿಗೆ ಕರೆದುಕೊಂಡು ಹೋಗಬೇಕು, ಅರ್ಜುನನಿಗೆ ಸ್ಮಾರಕ ಮಾಡಬೇಕು ಎಂದು ಮಾವುತರು, ಸ್ಥಳೀಯರು ಪಟ್ಟು ಹಿಡಿದು ಅರಣ್ಯ ಇಲಾಖೆ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಕಲೇಶಪುರದಲ್ಲಿ ಅಂತ್ಯಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದಾಗ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದರು. ಜನರನ್ನು ನಿಯಂತ್ರಿಸಿದ ಬಳಿಕ ಪೊಲೀಸರು ಅರ್ಜುನನ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಮಾವುತರ ಕಣ್ಣೀರು, ಅಭಿಮಾನಿಗಳ ಆಕ್ರೋಶದ ನಡುವೆ ಸಕಲ ಸರ್ಕಾರಿ ಗೌರವದೊಂದಿಗೆ ಅರ್ಜುನನ ಅಂತ್ಯಸಂಸ್ಕಾರ ನಡೆಯಿತು. ಅರ್ಜುನನ್ನು ಕೊನೆಯ ಸಲ ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಕಾದು ಕುಳಿತಿದ್ದರು.
ಅಂತ್ಯ ಸಂಸ್ಕಾರಕ್ಕೂ ಮುನ್ನ ಅರ್ಜುನನ ಎರಡೂ ದಂತವನ್ನು ಅರಣ್ಯ ಇಲಾಖೆ ಸಿಬ್ಬಂದಿ ವೈದ್ಯರ ನೆರವಿನೊಂದಿಗೆ ದಂತ ತೆರವು ಮಾಡಿ ತೆಗೆದುಕೊಂಡು ಹೋಗಿದ್ದಾರೆ.