ಬುದ್ಧನ "ಧಮ್ಮಯಾನ"ದಲ್ಲಿ ಒಂದು ಸುತ್ತು - Mahanayaka

ಬುದ್ಧನ “ಧಮ್ಮಯಾನ”ದಲ್ಲಿ ಒಂದು ಸುತ್ತು

dhamma yana book
02/03/2025

ಹಿರಿಯ ಸಾಹಿತಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ ಯವರು ಬರೆದಿರುವ “ಧಮ್ಮಯಾನ” ಕೃತಿಯನ್ನು ಲಡಾಯಿ ಪ್ರಕಾಶನದವರು ಇತ್ತೀಚೆಗೆ ಅಂದರೆ 2024ರಲ್ಲಿ ಪ್ರಕಟಿಸಿದ್ದಾರೆ. 480 ಪುಟಗಳಿರುವ ಈ ಬೃಹತ್ ಕೃತಿಯಲ್ಲಿ ಬುದ್ಧನ ಚರಿತ್ರೆಯನ್ನು ಎರಡು ಭಾಗವಾಗಿ ವಿಂಗಡಿಸಿರುವುದನ್ನು ನಾವು ಕಾಣಬಹುದು. ಮೊದಲನೆಯ ಭಾಗ ಬುದ್ಧನ ಜನನ, ಬಾಲ್ಯ, ತಾರುಣ್ಯ, ಮದುವೆ, ಕಠಿಣ ತಪಸ್ಸು, ಜ್ಞಾನೋದಯ, ಧಮ್ಮೋಪದೇಶ ಮತ್ತು ದೀಕ್ಷೆ ಜೊತೆಗೆ ಈ ಸಂದರ್ಭದಲ್ಲಿ ಆನಂದ, ದೇವದತ್ತ, ಸೋಪಾಕ, ಸಾರಿಪುತ್ರ, ಮುಗ್ಗಲಾನ, ಅನಾಥ ಪಿಂಡಿಕ, ಜೀವಕ, ಉಪಾಲಿ, ಅಂಗುಲಿಮಾಲ ಇವರುಗಳ ಜೊತೆಗೆ ಬುದ್ಧನ ಧಮ್ಮೋಪದೇಶ ಮತ್ತು ದೀಕ್ಷೆ ಹಾಗೂ ಮಹಿಳೆಯರಿಗೆ ಧಮ್ಮ ದೀಕ್ಷೆ, ಭಿಕ್ಕುಣಿ ಸಂಘ ಇವುಗಳನ್ನು ಕುರಿತು ಮೂಡ್ನಾಕೂಡು ಚಿನ್ನಸ್ವಾಮಿ ಯವರು ಬಹಳ ಸರಳವಾಗಿ ಓದುಗರಿಗೆ ತಿಳಿಸಿಕೊಟ್ಟಿದ್ದಾರೆ.

ಎರಡನೆಯ ಭಾಗದಲ್ಲಿ ಧಮ್ಮದ ಮೂರು ಲಕ್ಷಣಗಳಾದ ಅನಿಚ್ಛ, ದುಃಖ ಮತ್ತು ಅನತ್ತ, ತಪಸ್ಸಿನ ನಾಲ್ಕು ಹಂತಗಳಾದ ಸೋತಾಪನ್ನ, ಸಕದಗಾಮಿ, ಅನಾಗಾಮಿ, ಅರಹಂತ, ಕಮ್ಮ ಅಥವಾ ಕರ್ಮ, ವೇದ ಪ್ರಾಮಾಣ್ಯ, ಕರ್ತ್ರೃವಾದ, ಆತ್ಮವಾದ, ಜಾತಿವಾದ, ಬಲಿ ಹಿಂಸೆ ಇವುಗಳ ಬಗ್ಗೆ, ಏಳು ಸಪ್ತಾಹಗಳಾದ ಬೋಧಿ ಪಲ್ಲಂಕ ಸಪ್ತಾಹ, ಅನಿಮಿಷ ಸಪ್ತಾಹ, ಚಂಕಮ ಸಪ್ತಾಹ, ರತನಘದ ಸಪ್ತಾಹ, ಅಜಪಾಲ ಸಪ್ತಾಹ, ಮುಚಲಿಂದ ಸಪ್ತಾಹ, ರಾಜಾಯತನ ಸಪ್ತಾಹ ಇವುಗಳ ಬಗ್ಗೆ, ಜೀವಿಗಳ ಅಸ್ತಿತ್ವದ ಐದು ಗುಂಪುಗಳಾದ ರೂಪ, ವೇದನಾ, ಸನ್ಯಾ, ಸಂಕಖಾರ, ವಿನ್ಯಾನ. ಪಂಚ ಧಮ್ಮ ನಿಯಮಗಳಾದ ಋತು ನಿಯಮ, ಬೀಜ ನಿಯಮ, ಚಿತ್ತ ನಿಯಮ, ಕಮ್ಮ ನಿಯಮ, ಧಮ್ಮ ನಿಯಮಗಳ ಬಗ್ಗೆ, ಪಟಿಚ್ಛ ಹಾಗೂ ಸಂಯುತ್ಪಾದದ 12 ಸಂಗತಿಗಳಾದ ಅವಿಜ್ಜಾ, ಸಂಬಾರ, ವಿನ್ಯಾನ, ನಾಮರೂಪ, ಸಲಾಯತನ, ಫಸ್ಸ, ವೇದನಾ, ತನ್ಹ, ಉಪಾದಾನ, ಭವ, ಜಾತಿ ಇವುಗಳ ಬಗ್ಗೆ, ಮಹಾಸತಿಪಟ್ಠಾನದ ನಾಲ್ಕು ಮನೋ ಮಗ್ನತೆಗಳಾದ ಕಾಯಾನುಪಸ್ಸನಾ, ವೇದಾನಾನು ಪಸ್ಸನಾ, ಚಿತ್ತಾನು ಪಸ್ಸನಾ, ಧಮ್ಮಾನು ಪಸ್ಸನಾ, ಐದು ನೀವರಣಗಳು, ಐದು ಉಪಾದಾನ ಸ್ಕಂದಗಳು, ಆರು ಇಂದ್ರಿಯ ಆಯತನಗಳು, ಏಳು ಬೋಧಿ ಅಂಗಗಳು, ನಾಲ್ಕು ಆರ್ಯ ಸತ್ಯಗಳು, 24 ಶೀಲಗಳನ್ನು ಮೂರು ಗುಂಪುಗಳಾಗಿ ಅಂದರೆ ಚೂಲಶೀಲ, ಮಧ್ಯಮ ಶೀಲ, ಮಹಾಶೀಲ. ಪಂಚ ನೀವರಣಗಳಾದ ಇಂದ್ರಿಯ ಶಕ್ತಿ, ದ್ವೇಷಕೋಪ, ಅಲಸ್ಯ ಜಡತೆ, ಚಂಚಲತೆ, ಚಿಂತೆ ಸಂಶಯ. ಧ್ಯಾನಕ್ಕೆ ಬೇಕಾದ ಐದು ಗುಣಗಳಾದ ಸದ್ದಾ, ವಿರಿಯ, ಸತಿ, ಸಮಾಧಿ, ಪನ್ನಾ. ನಾಲ್ಕು ಸುಖಗಳಾದ ಅತ್ಥಿಸುಖ, ಭೋಗ ಸುಖ, ಅನನಸುಖ, ಅನವಜ್ಜ ಸುಖ. ದಶಪಾರಮಿಗಳಾದ ದಾನಪಾರಮಿ, ಶೀಲಪಾರಮಿ, ನಿಸ್ಕಾಮ ಪಾರಮಿ, ಪ್ರಜ್ಞಾ ಪಾರಮಿ, ವಿರಿಯ ಪಾರಮಿ, ಖಂತಿಪಾರಮಿ, ಸಚ್ಛ ಪಾರಮಿ, ಅಧಿಟ್ಠಾಣ ಪಾರಮಿ. ಹೀಗೆ ಬುದ್ಧನ ಧಮ್ಮ ಸ್ಕಂದಗಳನ್ನು 84000 ಎಂದು ಹೇಳಬಹುದಾಗಿದೆ. ಇವುಗಳನ್ನ ವಿನಯ ಪಿಟಕ, ಸುತ್ತಪಿಟಕ, ಅಭಿಧಮ್ಮಪಿಟಕ ಎಂದು ಭಾಗಗಳನ್ನಾಗಿಸಿದ್ದಾರೆ.

ವಿನಯ ಪಿಟಕದಲ್ಲಿ ಶಿಸ್ತನ್ನು ಕುರಿತು 5 ಗ್ರಂಥಗಳಿವೆ ಪರಾಜಿತ, ಪಾಚಿತ್ತಿಯ, ಮಹಾವಗ್ಗ, ಚೂಲವಗ್ಗ, ಪರಿವಾರ. ಸುತ್ತ ಪಿಟಕದಲ್ಲಿ ಐದು ಭಾಗಗಳಿವೆ ದೀಘನಿಕಾಯ, ಮಜ್ಜಿಮನಿಕಾಯ, ಸಂಯುಕ್ತನಿಕಾಯ, ಅಂಗುತ್ತರ ನಿಕಾಯ, ಖುದ್ದಕನಿಕಾಯ. ಅಭಿಧಮ್ಮ ಪಿಟಕದಲ್ಲಿ 7 ಗ್ರಂಥಗಳಿವೆ ಧಮ್ಮ ಸಂಗಾನಿ, ವಿಭಂಗ, ಧಾತುಕಥಾ, ಪುಗ್ಗಲ ಪಟ್ಟತ್ತಿ, ಕಥಾವಸ್ತು, ಯಮಕ ಪಟ್ಠಾನ ಇವುಗಳ ಜೊತೆಗೆ ನವಾಂಗಗಳಾದ ದಾನಕಥಾ, ಶೀಲಕಥಾ, ಸಗ್ಗಕಥಾ, ಕಮಾನಾಂ ಕಥಾ, ಆದಿನವ ಕಥಾ, ನೇಕ್ಖಮ್ಮ ಆನಿಸಂಸ ಕಥಾ, ದುಃಖ ಅರಿಯ ಸಚ್ಚಕಥಾ, ದುಃಖ ಸಮುದಯ ಸಚ್ಚ ಕಥಾ, ದುಃಖ ನಿರೋಧಗಾಮಿನಿ ಪಟಿ ಪದ ಸಚ್ಛ ಕಥಾ, ಆಧ್ಯಾತ್ಮಿಕದ ಬೆಳವಣಿಗೆಯ ಮೂರು ಮಜಲುಗಳಾದ ಪರಿಯತ್ತಿ, ಪಟಿಪತ್ತಿ, ಪಟಿವೇಧ ಇವುಗಳ ಜೊತೆಗೆ ಕೂಟದಂತ ಅಸ್ಸಲಾಾಯನ ಸುನೀತಾ ಮಹಾವಗ್ಗ ಕೊಕಾಲಿಕ ಕಾಲಾಮ ಲಕ್ಕಣ ಊಟ ಪಾದ ಆಮಗಂಧ ಮಾತಂಗ ಬೋರಿದತ್ತ ತೇರ ಗಾತ ಉಪಲಿ ಮುಂತಾದ ಪ್ರದೇಶಗಳ ಮತ್ತು ವ್ಯಕ್ತಿಗಳ ಜೊತೆಗೆ ಬುದ್ಧ ತನ್ನ ಬಿಕ್ಕುಡಿಗಳ ಜೊತೆ ದಮೋಪದೇಶ ಮತ್ತು ದೀಕ್ಷೆ ನೀಡಿರುವುದನ್ನು ಈ ಕೃತಿಯಲ್ಲಿ ಮೂಡ್ನಾಕೂಡುಚ್ಚಿದ ಸ್ವಾಮಿಯವರು ವಿವರವಾಗಿ ತಿಳಿಸಿಕೊಟ್ಟಿದ್ದಾರೆ ಜಾತಕ ಕಥೆಗಳು ಮಹಾಯಾನ ಪಂಥದ ಬಗ್ಗೆಯೂ ಈ ಕೃತಿಯಲ್ಲಿ ವಿವರಣೆ ನೀಡಿದ್ದಾರೆ. ಹೀಗೆ ಬುದ್ಧನ ಧಮ್ಮೋಪದೇಶಗಳನ್ನು ಓದುಗರಿಗೆ ಒದಗಿಸಿ ಕೊಟ್ಟಿದ್ದಾರೆ.

ಕ್ರಿ.ಶ.ಪೂರ್ವ ಆರನೆಯ ಶತಮಾನದಲ್ಲಿ ಹುಟ್ಟಿ, ಮೂರನೆಯ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಬೌದ್ಧ ಧರ್ಮ. ಕ್ರಿಸ್ತಪೂರ್ವ ಒಂದನೆಯ ಶತಮಾನದಲ್ಲಿ ಮೌರ್ಯ ಸಾಮ್ರಾಜ್ಯದ ದೊರೆ ಬೃಹದ್ರತನ ಮೋಸದ ಕೊಲೆಯ ನಂತರ ಕ್ಷೀಣಿಸುತ್ತಾ ಬಂದು ಸುಮಾರು 1000 ವರ್ಷಗಳ ಕಾಲ ಭಾರತದಿಂದ ಕಣ್ಮರೆಯಾಗಿತ್ತು. ಬ್ರಿಟಿಷರ ಆಡಳಿತದಲ್ಲಿ ಅಲೆಕ್ಸಾಂಡರ್ ಕನ್ನಿಂಗ್ಯಾಮ್ ಎಂಬ ಒಬ್ಬ ಯುವ ಪುರಾತತ್ವ ಇಲಾಖೆಯ ಅಧಿಕಾರಿ, ಸಾರನಾಥದಲ್ಲಿ ಗಿಡಗಂಟಿಗಳ ಪೊದೆಯ ಮಧ್ಯೆ ಹುದುಗಿ ಹೋಗಿದ್ದ ಭವ್ಯ ಸ್ತೂಪವನ್ನು ಆಕಸ್ಮಿಕವಾಗಿ ಕಂಡುಹಿಡಿಯದಿದ್ದರೆ ಇಂತಹ ಅಮೂಲ್ಯ ಧಮ್ಮ ರತ್ನ ನಮಗೆ ಸಿಗುತ್ತಿರಲಿಲ್ಲವೇನೋ ಎಂದು ಹೇಳುತ್ತಾರೆ. ಒಂದು ಉದಾತವಾದ, ನೈತಿಕ ನೆಲೆಗಟ್ಟಿನ ಮೇಲೆ ಗಟ್ಟಿಯಾಗಿ ನಿಂತಿದ್ದ ಧರ್ಮ ಅಂದು ಹೇಗೆ ನೀರವಶೇಷವಾಯಿತು ಎನ್ನುವುದು ಒಂದು ಆಕಸ್ಮಿಕವೇ ಸರಿ. ಮೂರನೆಯ ಶತಮಾನದಲ್ಲಿ ಭರತ ವರ್ಷವನ್ನು ಆಳುತ್ತಿದ್ದ ಸಾಮ್ರಾಟ ಅಶೋಕನು ಧಮ್ಮಕ್ಕೆ ಮಹದುಪಕಾರ ಮಾಡಿ ಹೋಗಿದ್ದಾನೆ. ಯುದ್ಧವನ್ನು ಗೆದ್ದರೂ ಹಿಂಸೆ ಮತ್ತು ರಕ್ತಪಾತದಿಂದ ಜಿಗುಪ್ಸೆಗೊಂಡು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಲ್ಲದೆ, ಧಮ್ಮ ಪ್ರಸಾರಕ್ಕಾಗಿ ಭಿಕ್ಕುಗಳನ್ನು ವಿವಿಧಡೆಗೆ ಕಳುಹಿಸಿದ ಮತ್ತು ತನ್ನ ಸ್ವಂತ ಮಕ್ಕಳಿಬ್ಬರನ್ನು ಸಿಂಹಳದ ದ್ವೀಪಕ್ಕೆ ಕಳಿಸಿದನು. ಶಾಸನಗಳನ್ನು ಕೆತ್ತಿಸಿದನು, ಸ್ತೂಪಗಳನ್ನು ಕಟ್ಟಿಸಿದನು,

ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರು ಸ್ಥಾಪಿಸಿದವರು ಸಿಂಹದ ಬೌದ್ಧ ಭಿಕ್ಕು ಅನಗಾರಿಕ ಧಮ್ಮಪಾಲ. ಗಯಾ ಪಟ್ಟಣದಲ್ಲಿ ಮಹಂತರ ಹಿಡಿತದಲ್ಲಿ ಅಳಿವಿನಂಚಿನಲ್ಲಿದ್ದ ಬೌದ್ಧ ಮಂದಿರಕ್ಕೆ ಅವರು ಮರುಜೀವ ತುಂಬಿದರು. ಮಹಾ ಭೋದಿ ಸೊಸೈಟಿಯನ್ನು ಸ್ಥಾಪಿಸಿ ಧಮ್ಮದ ಚಲನೆಗೆ ನಾಂದಿ ಹಾಡಿದರು. ನಂತರ ಬೌದ್ಧ ಧರ್ಮ ಮತ್ತೆ ಪ್ರಚಲಿತಕ್ಕೆ ಬಂದದ್ದು ಬಾಬಾ ಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು 14ಅಕ್ಟೋಬರ್ 1956 ರಂದು ತಮ್ಮ 5 ಲಕ್ಷ ಅನುಯಾಯಿಗಳೊಂದಿಗೆ ಧಮ್ಮ ಸ್ವೀಕಾರ ಮಾಡಿದ ಮೇಲೆ ಅದು ಮಹಾರಾಷ್ಟ್ರದಲ್ಲಿ ವ್ಯಾಪಕವಾಗಿ ಬೆಳೆಯಿತು.

ಇತ್ತೀಚಿನ ದಶಕಗಳಲ್ಲಿ ದೇಶದ ಇತರ ರಾಜ್ಯಗಳಲ್ಲಿಯೂ ಬೌದ್ಧ ಧರ್ಮ ಹಬ್ಬುತ್ತಿದೆ. ಹೆಚ್ಚಾಗಿ ಶೋಷಿತ ಸಮುದಾಯದ ಜನ ಬಾಬಾ ಸಾಹೇಬರ ಅಣತಿಯಂತೆ ಧಮ್ಮವನ್ನು ಅಪ್ಪಿಕೊಳ್ಳುತ್ತಿದ್ದಾರೆ. ಬೌದ್ಧ ಧರ್ಮವನ್ನು ದಕ್ಷಿಣಕ್ಕೆ ತಂದವರು ಪೂಜನೀಯರಾದ ಆಚಾರ್ಯ ಬುದ್ಧರಕ್ಖಿತ ಥೇರ. 1956 ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿ ಮಹಾಬೋಧಿ ಸೊಸೈಟಿಯನ್ನು ಸ್ಥಾಪಿಸಿ, ಧಮ್ಮವನ್ನು ಮುನ್ನಡೆಸಿದರು. ಅವರ ಪ್ರವಚನಗಳಿಂದ ಜನರು ಆಕರ್ಷಿತರಾಗುತ್ತಿದ್ದರು. ಕರ್ನಾಟಕದ್ಯಂತ ಎಲ್ಲೇ ಬೌದ್ಧ ವಿಹಾರ ನಿರ್ಮಾಣವಾದರೂ ಅವುಗಳ ನಿರ್ವಹಣೆ, ಪೂಜಾ ಪದ್ದತಿ ಇತ್ಯಾದಿ ಸಲಹೆ ಸೂಚನೆಗಳಿಗೆ ಉಪಾಸಕರು ಮತ್ತು ಭಂತತಜಿಗಳು ಮಹಾಭೋದಿ ಸೊಸೈಟಿಯನ್ನೇ ಅವಲಂಬಿಸಿದ್ದಾರೆ. ಪ್ರಸಕ್ತ ಕಾರ್ಯದರ್ಶಿಗಳಾಗಿರುವ ಪೂಜ್ಯ ಭಂತೆ ಆನಂದ ಥೇರಾ ಮಾರ್ಗದರ್ಶಕರಾಗಿದ್ದಾರೆ. ಇವರ ಕಾರ್ಯ ವ್ಯಾಪ್ತಿ ಈಶಾನ್ಯ ರಾಜ್ಯಗಳಷ್ಟೇ ಅಲ್ಲದೆ ತೆಲಂಗಾಣಕ್ಕೂ ಹಬ್ಬಿದೆ. ಬೌದ್ಧ ಧರ್ಮದ ಬೆಳವಣಿಗೆಗೆ ಇವರ ಕೊಡುಗೆಯನ್ನು ಮರೆಯಲಾಗದು ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿಯವರು ಹೇಳುತ್ತಾರೆ.

ನಾವು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಬುದ್ಧನ ಒಂದು ಉಪದೇಶ “ಆಸೆಯೇ ದುಃಖಕ್ಕೆ ಮೂಲ” ಎನ್ನುವ ಸಾಲುಗಳನ್ನು ಮೆಲುಕು ಹಾಕುತ್ತಿದ್ದೆವು. ಬುದ್ಧ ರಾಜನ ಮಗನಾಗಿದ್ದನು, ಜ್ಯೋತಿಷಿ ಒಬ್ಬರು ಈತ ಸನ್ಯಾಸಿ ಆಗುತ್ತಾನೆ ಎಂದು ಹೇಳಿದ್ದು, ಇದರಿಂದ ಅವರ ತಂದೆ ರಾಜನು ಬುದ್ಧನನ್ನು ಅರಮನೆಯಲ್ಲಿ ಇಟ್ಟಿದ್ದು. ನಂತರ ಬುದ್ದನು ಹೊರಗೆ ಬಂದು ಸತ್ತವನ ವ್ಯಕ್ತಿಯನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗುವುದನ್ನ ನೋಡಿದ್ದು, ವೃದ್ಧನನ್ನು ನೋಡಿದ್ದು, ರೋಗಿ ಒಬ್ಬನನ್ನು ನೋಡಿದ್ದು ಇದಕ್ಕೆ ಕಾರಣವೇನು ಎಂದು ತಿಳಿಯಲು, ಕೊನೆಗೂ ಬುದ್ಧ ರಾತ್ರಿ ಯಾರಿಗೂ ತಿಳಿಯದಂತೆ ಮನೆ ಬಿಟ್ಟು ಹೋಗಿ ಸನ್ಯಾಸಿಯಾದದ್ದು, ಬೋಧಿ ವೃಕ್ಷದ ಕೆಳಗೆ ತಪಸ್ಸು ಮಾಡಿದ್ದು, ಸುಜಾತ ಬುದ್ಧನಿಗೆ ಪಾಯಸ ನೀಡಿದ್ದು ಇಷ್ಟೇ ಗೊತ್ತಿದ್ದ ನಮಗೆ ಈ ಕೃತಿ ಬುದ್ಧನ ಜೀವನ ಮತ್ತು ಆತನ ಉಪದೇಶಗಳನ್ನು ಬಹಳ ಸವಿವರವಾಗಿ ಓದುಗರಿಗೆ ಒದಗಿಸಿಕೊಡುತ್ತದೆ.

ಬುದ್ಧನ ಉಪದೇಶಗಳಲ್ಲಿ ಬಹಳ ಮುಖ್ಯವಾದವುಗಳಲ್ಲಿ ಯಾವುದೇ ಜೀವಿಗಳನ್ನು ಹಿಂಸೆ ಮಾಡಬಾರದು, ಸ್ತ್ರೀಯರ ವ್ಯಾಮೋಹವನ್ನು ಬಿಡಬೇಕು, ಪ್ರಾಮಾಣಿಕವಾಗಿರಬೇಕು, ಸುಳ್ಳನ್ನು ಹೇಳಬಾರದು, ಕೊಲೆ ಮಾಡಬಾರದು, ದೆವ್ವ, ಆತ್ಮ ದೇವರು, ಮಾಟ, ಮಂತ್ರ ಇವುಗಳನ್ನು ನಂಬಬಾರದು. ನಮ್ಮ ಕಣ್ಣಿಗೆ ಕಾಣುವ ಮತ್ತು ಅನುಭವಿಸುವ ವಿಚಾರಗಳನ್ನು ಮತ್ತೊಬ್ಬರಿಗೆ ಹೇಳಬೇಕು ಎಂಬ ಅನೇಕ ವೈಚಾರಿಕ ಮತ್ತು ವೈಜ್ಞಾನಿಕವಾದ ಸಲಹೆ ಮತ್ತು ಉಪದೇಶಗಳನ್ನು ಬುದ್ಧ ಬಹಳ ಹಿಂದೆಯೇ ಸಾರ್ವಜನಿಕವಾಗಿ ಬಿತ್ತಿ ಹೋಗಿದ್ದಾನೆ. ಆದರೆ ನಾವು ಇಂದಿಗೂ ಮೂರ್ಖರಾಗಿರುವುದು ಸತ್ಯವೇ ಸರಿ! ಪ್ರಸ್ತುತ ಕಾಲದಲ್ಲಿ ಬುದ್ಧನ ಅನೇಕ ಉಪದೇಶಗಳು ಸಾರ್ವಜನಿಕ ವಲಯದಲ್ಲಿ ಅನುಷ್ಠಾನಕ್ಕೆ ಬರದೇ ಹೋಗಿರುವುದು ವಿಪರ್ಯಾಸವೇ ಸರಿ! ಮನಸ್ಸು ನಿಗ್ರಹ ಇಲ್ಲಿ ಮುಖ್ಯವಾಗಿರುವುದರಿಂದ ಬುದ್ಧನ ಸತ್ಯ ಅನುಷ್ಠಾನಕ್ಕೆ ಮನುಷ್ಯ ತೆಗೆದುಕೊಳ್ಳುತ್ತಿರುವುದು ಬಹಳ ಕಡಿಮೆ ಎಂದರೆ ಅತಿಶಯವಲ್ಲ.

ಒಟ್ಟಿನಲ್ಲಿ ಈ ಕೃತಿ “ಧಮ್ಮಯಾನ” ಓದುಗನನ್ನು ಮನಸ್ಸಿನ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುವಂತೆ ಮಾಡುವುದರಲ್ಲಿ ಯಶಸ್ಸು ಪಡೆದಿದೆ. ಮೂಡ್ನಾಕೂಡು ಚಿನ್ನಸ್ವಾಮಿಯವರಿಗೆ ಅಭಿನಂದನೆಗಳು.

udanth kumar

ಉದಂತ ಶಿವಕುಮಾರ್


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ