ಪಟಾಕಿಯಿಂದ ಪ್ರಾಣವೇ ಹೋಯ್ತು: ಸಿಡಿದ ರಭಸಕ್ಕೆ 5 ಅಡಿ ಎತ್ತರಕ್ಕೆ ಹಾರಿ ಬಿದ್ದ ಯುವಕ ಸಾವು
ಚಿಕ್ಕಮಗಳೂರು: ಪಟಾಕಿ ಸಿಡಿಸುವ ವೇಳೇ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಎಂದು ಜಾಗೃತಿ ಮೂಡಿಸಿದರೂ ಯುವಜನರು ಎಚ್ಚೆತ್ತುಕೊಳ್ಳುತ್ತಿಲ್ಲ, ಇಲ್ಲೊಬ್ಬ ದೀಪಾವಳಿ ಸಂಭ್ರಮದಲ್ಲಿದ್ದ ಯುವಕ ಪಟಾಕಿ ಸಿಡಿದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸುಣ್ಣದಹಳ್ಳಿಯಲ್ಲಿ ನಡೆದಿದೆ.
ಪ್ರದೀಪ್ (30) ಮೃತಪಟ್ಟ ಯುವಕನಾಗಿದ್ದಾನೆ. ತರೀಕೆರೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪಟಾಕಿ ಹೊಡೆಯುವ ವೇಳೆ ಮುನ್ನೆಚ್ಚರಿಕೆ ವಹಿಸದೇ, ವಿನೋದಕ್ಕಾಗಿ ಮಾಡಿದ ಕೆಲಸ ಯುವಕ ಪ್ರಾಣಕ್ಕೆ ಕುತ್ತಾಗಿದೆ.
ಅಡಕೆ ಗೋಟು (ಕಲ್ಲು ಆಟಂಬಾಂಬ್) ಪಟಾಕಿಯನ್ನ ಚೇರ್ ಕೆಳಗೆ ಇರಿಸಿದ ಯುವಕ ಚೇರ್ ಮೇಲೆ ಕುಳಿತು ಬೆಂಕಿ ಹಚ್ಚಿದ್ದಾನೆ. ಪಟಾಕಿ ಸಿಡಿದ ರಭಸಕ್ಕೆ ಯುವಕ 5 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾನೆ. ಯುವಕನ ದೇಹದ ಸೂಕ್ಷ್ಮ ಭಾಗಕ್ಕೆ ಏಟು ಬಿದ್ದಿದ್ದುರಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ್ದಾನೆ.
ಮೃತ ಪ್ರದೀಪ್ ಜೊತೆಗಿದ್ದ ಮತ್ತೋರ್ವ ಯುವಕ ಹಾಗೂ ಮೂವರು ಮಕ್ಕಳಿಗೂ ಗಂಭೀರ ಗಾಯವಾಗಿದೆ. ಪಟಾಕಿಯ ತೀವ್ರತೆಗೆ ಮನೆಯ ಗ್ಲಾಸ್ ಗಳು ಪುಡಿಪುಡಿಯಾಗಿದೆ.