ತಂದೆಯ ಕಣ್ಣೆದುರೇ ಅಪಘಾತಕ್ಕೆ ಬಲಿಯಾದ ಯುವತಿ!
ಚಿಕ್ಕಬಳ್ಳಾಪುರ: ತಂದೆಯ ಕಣ್ಣೆದುರೇ ಮಗಳು ಅಪಘಾತಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ನಗರದ ಎಂ.ಜಿ.ರಸ್ತೆಯ ಅಂಬಾಭವಾನಿ ಹೊಟೇಲ್ ಬಳಿ ನಡೆದಿದೆ.
ಯೋಗಿತಾ(22) ಮೃತಪಟ್ಟ ಯುವತಿಯಾಗಿದ್ದಾಳೆ. ಹಾಸನದ ಕಾಲೇಜಿನಲ್ಲಿ ಪಶು ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಈಕೆ ಅಂತಿಮ ವರ್ಷ ಮುಗಿಸಿ ಬೆಂಗಳೂರಿನಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದರು.
ಪ್ರತೀ ದಿನದಂತೆ ಇಂದು ಕೂಡ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಪ್ರಯಾಣಿಸಲು ತಂದೆಯ ಜೊತೆಗೆ ಬೈಕ್ ನಲ್ಲಿ ಬಂದಿದ್ದರು. ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಅಂಬಾಭವಾನಿ ಹೊಟೇಲ್ ಮುಂಭಾಗದಲ್ಲಿ ಕ್ಯಾಂಟರ್ ವೊಂದು ತಂದೆ—ಮಗಳು ಪ್ರಯಾಣಿಸುತ್ತಿದ್ದ ಬೈಕ್ ಗೆ ತಗುಲಿದ್ದು, ಪರಿಣಾಮವಾಗಿ ಬೈಕ್ ನ ಹಿಂಬದಿಯಲ್ಲಿದ್ದ ಯೋಗಿತಾ ನೆಲಕ್ಕೆ ಬಿದ್ದಿದ್ದು ತಲೆಗೆ ಗಂಭೀರವಾಗಿ ಗಾಯವಾಗಿತ್ತು.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ನಡೆಸುತ್ತಿದ್ದ ವೇಳೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತಕ್ಕೆ ಕಾರಣವಾದ ಕ್ಯಾಂಟರ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: