ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣ:  ನಿಸ್ಸಹಾಯಕ ಸಿಎಂ ಬೊಮ್ಮಾಯಿ ರಾಜೀನಾಮೆಗೆ ಎಎಪಿ ಆಗ್ರಹ - Mahanayaka
8:56 PM Sunday 22 - September 2024

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣ:  ನಿಸ್ಸಹಾಯಕ ಸಿಎಂ ಬೊಮ್ಮಾಯಿ ರಾಜೀನಾಮೆಗೆ ಎಎಪಿ ಆಗ್ರಹ

bomayi
07/03/2023

ಶಾಸಕರೊಬ್ಬರ ಮನೆಯಲ್ಲಿ ಕಂತೆ- ಕಂತೆ ನೋಟುಗಳು ಸಿಕ್ಕ ನಂತರವೂ ಕಾನೂನು ಕ್ರಮ ಜರುಗಿಸಲು ಆಗದೆ, ನಿಸ್ಸಹಾಯಕರಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡುವ ಮೂಲಕ ರಾಜಕೀಯ ನೈತಿಕತೆಯನ್ನು ಮೆರೆಯಬೇಕಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯ ಚುನಾವಣೆಯ ಹೊಸ್ತಿಲಿನಲ್ಲಿರುವಾಗಲೇ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪರ ಮಗ ಗುತ್ತಿಗೆದಾರರೊಬ್ಬರಿಂದ ಕಂತೆ- ಕಂತೆ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ದಾಳಿಯ ಸಂದರ್ಭದಲ್ಲಿ ಸಿಕ್ಕ ನಗದು ಹಣದ ದೃಶ್ಯಕ್ಕೆ ಜನ ಸಾಮಾನ್ಯರು ಬೆಚ್ಚಿಬಿದ್ದಿದ್ದಾರೆ. ಗುತ್ತಿಗೆದಾರರ ಸಂಘ ಆರಂಭದಿಂದಲೂ ಮಾಡಿಕೊಂಡು ಬಂದ 40% ಆರೋಪಕ್ಕೆ ಪ್ರಬಲ ಸಾಕ್ಷಿಯೊಂದು ಸಿಕ್ಕಂತಾಗಿದೆ” ಎಂದರು.

ಪ್ರಕರಣ ಬಯಲಿಗೆ ಬಂದು ನಾಲ್ಕು ದಿನಗಳು ಕಳೆದರೂ ರಾಜ್ಯ ಸರಕಾರ ತಮ್ಮದೇ ಪಕ್ಷದ ಶಾಸಕನನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಹಿಂದೇಟು ಹಾಕುತ್ತಿದೆ ಎಂದು ದೂರಿದ ಅವರು, “ಆರೋಪಿ ಸ್ಥಾನದಲ್ಲಿ ನಿಂತು, ಇಷ್ಟೊತ್ತಿಗೆ ಜೈಲು ಶಿಕ್ಷೆಗೆ ಒಳಪಡಿಸಬೇಕಿತ್ತು. ಆದರೆ ಮಾಡಾಳು ವಿರೂಪಾಕ್ಷಪ್ಪಗೆ ರಾಜಾತಿಥ್ಯ ನೀಡಲಾಗುತ್ತಿದೆ. ಆತ ಸಾಕ್ಷಿಗಳನ್ನು ಸಂಬಾಳಿಸಿಕೊಂಡು, ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಆಡಳಿತ ಪಕ್ಷ ಬಿಜೆಪಿಗೆ ಸಿಕ್ಕಿರುವ ಪವಿತ್ರ ಅಧಿಕಾರ ಬಳಕೆಯಾಗುತ್ತಿದೆ. ಇದು ನಾಚಿಕೆಗೇಡು ಮಾತ್ರವಲ್ಲ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿಸ್ಸಹಾಯಕತೆಯನ್ನು ತೋರಿಸುತ್ತಿದೆ” ಎಂದು ಆರೋಪಿಸಿದರು.


Provided by

“ಗುತ್ತಿಗೆದಾರರ ಸಂಘದ ಅಧ್ಯಕ್ಷ, ಹಿರಿಯ ಜೀವ ಕೆಂಪಣ್ಣ, ರಾಜ್ಯ ಸರಕಾರದ ಭ್ರಷ್ಟಾಚಾರವನ್ನು ಬಯಲಿಗೆ ಎಳೆದರು. 40% ಕಮಿಷನ್ ಕೊಡದೆ ಯಾವ ಕೆಲಸಗಳೂ ಆಗುತ್ತಿಲ್ಲ ಎಂದು ದೂರಿದರು. ಈ ಸಮಯದಲ್ಲಿ ಖುದ್ದು ಮುಖ್ಯಮಂತ್ರಿ, ಇವೆಲ್ಲಾ ಬರೀ ಆರೋಪಗಳು, ಸಾಕ್ಷಿ ಕೊಡಿ ಎಂದರು. ಸರಕಾರದ ಎದುರು ಜನರ ತೆರಿಗೆ ಕಳ್ಳತನವಾಗುತ್ತಿದೆ ಎಂದು ಆರೋಪ ಮುಂದಿಟ್ಟ ಕೆಂಪಣ್ಣ ಅವರನ್ನು ಸರಕಾರಿ ರಜಾ ದಿನ ನೋಡಿಕೊಂಡು ಬಂಧಿಸಿದರು. ಈ ಪ್ರಕರಣದಲ್ಲಿ ಅಗತ್ಯ ಮೀರಿ ಅಧಿಕಾರ ದುರ್ಬಳಕೆ ಮಾಡಿಕೊಂಡಿತು ಸರಕಾರ,’’ ಎಂದರು.

ಆದರೆ ಇದೀಗ, “ತಮ್ಮ ಶಾಸಕನ ಲಂಚಾವತಾರ ಸಾಕ್ಷಿ ಸಮೇತ ಬಯಲಿಗೆ ಬಂದಾಗ ಮುಖ್ಯಮಂತ್ರಿಗಳು ತಮ್ಮ ಪದವಿಯನ್ನು ಮರೆತಂತೆ ವರ್ತಿಸುತ್ತಿದ್ದಾರೆ. ಆರೋಪಿಯ ರಕ್ಷಣೆಗೆ ನಿಂತಿದ್ದಾರೆ. ಈ ಹಿನ್ನಲೆಯಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ಕರ್ನಾಟಕ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಮುಂದಿಡುತ್ತಿದೆ. ಇವುಗಳು 24 ಗಂಟೆಯೊಳಗೆ ಈಡೇರದೆ ಹೋದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಬಳಿ ಬುಧವಾರ ಪಕ್ಷ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದೆ,” ಎಂದು ಎಚ್ಚರಿಕೆ ನೀಡಿದರು.

ಹಕ್ಕೊತ್ತಾಯಗಳು ಹೀಗಿವೆ:

ಮಾಡಾಳ್ ವಿರೂಪಾಕ್ಷಪ್ಪ ಅಕ್ರಮ ಲಂಚ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲು ನಿಸ್ಸಹಾಯಕರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು.

ಮಾಡಾಳ್ ವಿರೂಪಾಕ್ಷಪ್ಪನನ್ನು ಕೂಡಲೇ ಬಂಧಿಸಿ, ಜನರಿಗೆ ಕಾನೂನಿನ ಬಗೆಗೆ ಇರುವ ಗೌರವವನ್ನು ಕಾಪಾಡಬೇಕು.

ಚುನಾವಣೆ ಸಮಯದಲ್ಲಿ ಅಕ್ರಮ ಹಣ ಸಂಗ್ರಹದಲ್ಲಿ ತೊಡಗಿರುವ ಹಿನ್ನಲೆಯಲ್ಲಿ, ರಾಜ್ಯದ ಎಲ್ಲಾ ಶಾಸಕರು ಹಾಗೂ ಮಂತ್ರಿಗಳ ಗೃಹ ಹಾಗೂ ಕಚೇರಿಯನ್ನು ತಪಾಸಣೆಗೆ ಒಳಪಡಿಸಬೇಕು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ