ಭಾರತ ಮಾತೆ ಬದಲು ಅದಾನಿಗೆ ಜೈ ಹೇಳಬೇಕಾದ ಪರಿಸ್ಥಿತಿ: ಬಿಜೆಪಿ ಕಚೇರಿ ಎದುರು ಎಎಪಿ ಪ್ರತಿಭಟನೆ
ಬೆಂಗಳೂರು: ಉದ್ಯಮಿ ಗೌತಮ್ ಅದಾನಿ ಅವ್ಯವಹಾರಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದ ಎದುರು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿ ರೆಡ್ಡಿ, “ನಮ್ಮೆಲ್ಲರಿಗೂ ದೇಶವೆಂದರೆ ತಾಯಿ. ತಾಯಿಯ ಸಂಪನ್ಮೂಲವನ್ನು ಬಿಜೆಪಿಯು ಒಬ್ಬ ವ್ಯಕ್ತಿಗೆ ಮಾರಾಟ ಮಾಡಿದೆ. ನಮ್ಮ ದೇಶದ ಕಲ್ಲಿದ್ದಲು, ಗ್ಯಾಸ್, ವಿದ್ಯುತ್, ರಸ್ತೆ, ನೀರು, ವಿಮಾನ ನಿಲ್ದಾಣ, ಬಂದರು ಮುಂತಾದವುಗಳನ್ನೆಲ್ಲ ಅದಾನಿ ಪಾಲಾಗುವಂತೆ ಮಾಡಿದ್ದಾರೆ. ಇದರಿಂದಾಗಿ ದೇಶದಲ್ಲಿ ಆರ್ಥಿಕ ಆತಂಕ ಎದುರಾಗಿದೆ. ಇದು ಹೀಗೇ ಮುಂದುವರಿದರೆ, ಭಾರತ ಮಾತೆಗೆ ಜೈ ಎನ್ನುವ ಬದಲು ಅದಾನಿಗೆ ಜೈ ಎಂದು ಹೇಳಬೇಕೆಂದು ಅವರು ನಮಗೆ ಆದೇಶಿಸುವ ದಿನ ಬರಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಇದರ ತನಿಖೆ ಮಾಡಿಸುವ ಬದಲು ಉದ್ಯಮಿಯ ಪರವಾಗಿ ನಿಂತಿದ್ದಾರೆ. ಅದಾನಿ ವಿರುದ್ಧದ ಎಲ್ಲ ಆರೋಪಗಳ ಬಗ್ಗೆ ಜಂಟಿ ಸದನ ಸಮಿತಿಯ ತನಿಖೆಯಾಗಬೇಕು” ಎಂದು ಆಗ್ರಹಿಸಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, “ಅದಾನಿ ಆಸ್ತಿಯು 2014ರಲ್ಲಿ ಅದಾನಿ ಆಸ್ತಿ 37,000 ಕೋಟಿ ರೂಪಾಯಿ ಹಾಗೂ 2018ರಲ್ಲಿ ಆಸ್ತಿ 59,000 ಕೋಟಿ ರೂಪಾಯಿ ಆಗಿತ್ತು. 2020ರಲ್ಲಿ 2.5 ಲಕ್ಷ ಕೋಟಿ ರೂಪಾಯಿ ತಲುಪಿತು. 2022ರಲ್ಲಿ 13 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿದೆ. ಒಬ್ಬನೇ ಒಬ್ಬ ವ್ಯಕ್ತಿಗೆ ಎಲ್ಲಾ ಸಂಪನ್ಮೂಲಗಳನ್ನು ನೀಡುವ ಮೂಲಕ ಮೋದಿಯವರು ಅದಾನಿಯನ್ನು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯನ್ನಾಗಿ ಮಾಡಿದ್ದಾರೆ. ನಿರುದ್ಯೋಗಿ ಯುವಕರು, ರೈತರು, ಬೀದಿಬದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು 2.5 ಲಕ್ಷ ರೂಪಾಯಿ ಸಾಲ ಬೇಕೆಂದು ಬಯಸಿದರೆ, ಅವರ ಚಪ್ಪಲಿ ಸವೆಯುತ್ತದೆಯೇ ಹೊರತು ಸಾಲ ಸಿಗುವುದಿಲ್ಲ. ಆದರೆ ಮೋದಿಯವರು ಅದಾನಿಗೆ 2.5 ಲಕ್ಷ ಕೋಟಿ ರೂಪಾಯಿಯನ್ನು ಬಿಟ್ಟಿಯಾಗಿ ನೀಡಿದ್ದಾರೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಡಾ.ಸತೀಶ್ ಕುಮಾರ್ ಮಾತನಾಡಿ, “ಉದ್ಯಮಿ ಅದಾನಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಡುವಿನ ಸ್ನೇಹ ಎಲ್ಲರಿಗೂ ತಿಳಿದಿದೆ. ಅದಾನಿಯಂತಹ ಉದ್ಯಮಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಲಾಭ ಮಾಡಿಕೊಟ್ಟು, ಅವರಿಂದ ಪಕ್ಷದ ಖಾತೆಗೆ ಕೋಟ್ಯಂತರ ರೂಪಾಯಿ ದೇಣಿಗೆ ಪಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹೀಗೆ ಪಡೆದ ಹಣವನ್ನು ಚುನಾವಣೆ ವೇಳೆ ಮತದಾರರಿಗೆ ಆಮಿಷವೊಡ್ಡಲು ಹಾಗೂ ಚುನಾವಣೆಯಲ್ಲಿ ಬಹುಮತ ಬಾರದಿದ್ದರೆ ಆಪರೇಷನ್ ಕಮಲ ಮಾಡಲು ಬಿಜೆಪಿ ಬಳಸಿಕೊಳ್ಳುತ್ತಿದೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿ ಮುಖಂಡರಾದ ಮೋಹನ್ ದಾಸರಿ, ಚನ್ನಪ್ಪಗೌಡ ನೆಲ್ಲೂರು, ಡಾ. ಸತೀಶ್ ಕುಮಾರ್, ಜಗದೀಶ್ ವಿ ಸದಂ, ಸುಮನ್ ಪ್ರಶಾಂತ್, ಉಷಾ ಮೋಹನ್, ಪುಟ್ಟಣ್ಣ, ಅಶೋಕ್ ಮೃತ್ಯುಂಜಯ, ಅರುಣ್ ಕುಮಾರ್ ಆಜಾದ್, ಅಯೂಬ್ ಖಾಬ್, ಜಗದೀಶ್ ಚಂದ್ರ ಮತ್ತಿತರ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw