ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಬದಲು ಎಎಪಿಯ ಹೊಸ ಎಂಜಿನ್ ಸರ್ಕಾರ ತನ್ನಿ: ಅರವಿಂದ್ ಕೇಜ್ರಿವಾಲ್
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಆಡಳಿತದಲ್ಲಿ ಕಮಿಷನ್ ಪ್ರಮಾಣ ಮಾತ್ರ ಡಬಲ್ ಆಗಿದ್ದು, ಜನಪರ ಹಾಗೂ ಶೂನ್ಯ ಪರ್ಸೆಂಟ್ ಆಡಳಿತಕ್ಕಾಗಿ ಆಮ್ ಆದ್ಮಿ ಪಾರ್ಟಿಯ ಹೊಸ ಎಂಜಿನ್ ಸರ್ಕಾರವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದರು.
ದಾವಣಗೆರೆಯಲ್ಲಿ ನಡೆದ ಆಮ್ ಆದ್ಮಿ ಪಾರ್ಟಿಯ ಬೃಹತ್ ಸಮಾವೇಶದಲ್ಲಿ ಕನ್ನಡದಲ್ಲಿ ಮಾತು ಆರಂಭಿಸಿದ ಅರವಿಂದ್ ಕೇಜ್ರಿವಾಲ್, “ನಮಸ್ಕಾರ ಕರ್ನಾಟಕ. ಕರ್ನಾಟಕದ ಹೃದಯ ಭಾಗ ದಾವಣಗೆರೆ. ಇಲ್ಲಿ ಬಂದಿದ್ದು ನನಗೆ ತುಂಬಾ ಸಂತೋಷವಾಗಿದೆ” ಎಂದು ಕನ್ನಡದಲ್ಲೇ ಹೇಳಿದರು.
ಕರ್ನಾಟಕದ ಜನರು ಬಹಳ ಒಳ್ಳೆಯವರು ಹಾಗೂ ದೇಶಭಕ್ತಿ ಉಳ್ಳವರು. ಆದರೆ ಇಲ್ಲಿನ ಜನಪ್ರತಿನಿಧಿಗಳು ಕೆಟ್ಟವರಾಗಿದ್ದಾರೆ. ಕರ್ನಾಟಕದ ಸರ್ಕಾರವು 40% ಸರ್ಕಾರವೆಂಬ ಮಾತು ಪ್ರಚಲಿತದಲ್ಲಿದೆ. ಕಳೆದ ಎರಡು ವರ್ಷಗಳಲ್ಲಿ 40% ಕಮಿಷನ್ ನೀಡದೇ ಸರ್ಕಾರದ ಯಾವುದೇ ಗುತ್ತಿಗೆ ಕಾಮಗಾರಿ ನಡೆಯುತ್ತಿಲ್ಲವೆಂದು ಗುತ್ತಿಗೆದಾರರ ಸಂಘವೇ ಹೇಳುತ್ತಿದೆ. ಆದರೆ ಬಿಜೆಪಿಯ ಅಮಿತ್ ಶಾರವರು ಇಲ್ಲಿಗೆ ಬಂದು ಭ್ರಷ್ಟರಹಿತ ಆಡಳಿತ ನೀಡುವುದಾಗಿ ಹೇಳುತ್ತಿದ್ದಾರೆ. ಇದೇ ಜಿಲ್ಲೆಯ ಹಾಗೂ ಅಮಿತ್ ಶಾರವರ ಪಕ್ಷದ ಶಾಸಕ ಹಾಗೂ ಅವರ ಮಗನ ಬಳಿ ಲೋಕಾಯುಕ್ತ ಅಧಿಕಾರಿಗಳಿಗೆ 8 ಕೋಟಿ ರೂಪಾಯಿ ನಗದು ದೊರೆತಿದೆ. ಶಾಸಕರನ್ನು ಈವರೆಗೂ ಬಂಧಿಸದ ಸರ್ಕಾರಕ್ಕೆ ಪದ್ಮಭೂಷಣ ನೀಡಬೇಕು” ಎಂದು ವ್ಯಂಗ್ಯವಾಡಿದರು.
“ದೆಹಲಿ ಸರ್ಕಾರದ ಸಚಿವ ಮನೀಶ್ ಸಿಸೋಡಿಯಾ ಅವರ ಮನೆ, ಕಚೇರಿ, ಬ್ಯಾಂಕ್ ಲಾಕರ್ ಮೇಲೆ ಕೇಂದ್ರ ಸರ್ಕಾರದ ಸಂಸ್ಥೆಗಳು ದಾಳಿ ಮಾಡಲಾಯಿತು. ಅಲ್ಲಿ ಕೇವಲ ಹತ್ತು ಸಾವಿರ ರೂಪಾಯಿ ಹಣ ಸಿಕ್ಕಿತು. ಆದರೆ ಅವರ ಮೇಲೆ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದಾರೆ ಎಂಬ ಸುಳ್ಳು ಆರೋಪ ಹೊರಿಸಿ ಬಂಧಿಸಲಾಗಿದೆ. ಭ್ರಷ್ಟಾಚಾರ, ಅತ್ಯಾಚಾರ, ಲಂಚ ಕೇಳುವ, ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವವರು, ಮೋಸ, ವಂಚನೆ ಮಾಡುವವರು ಬಿಜೆಪಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಮೊದಲು ಶೇಕಡಾ 20ರಷ್ಟು ಕಮಿಷನ್ ಪಡೆಯುವ ಸರ್ಕಾರವಿತ್ತು. ಪ್ರಧಾನಿ ಮೋದಿಯವರು 2018ರಲ್ಲಿ ಕರ್ನಾಟಕಕ್ಕೆ ಆಗಮಿಸಿ, ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಭ್ರಷ್ಟಾಚಾರಕ್ಕೆ ಅಂತ್ಯಹಾಡುವುದಾಗಿ ಹೇಳಿದರು. ಆದರೆ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಮಿಷನ್ ಡಬಲ್ ಆಯಿತು. ಈಗ 40% ಕಮಿಷನ್ ಪಡೆಯಲಾಗುತ್ತಿದ್ದು, ಬಿಜೆಪಿ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದರೆ ಕಮಿಷನ್ ಮತ್ತೆ ಡಬಲ್ ಆಗಿ 80% ತಲುಪಲಿದೆ. ಆದ್ದರಿಂದ ಜನರು ಡಬಲ್ ಎಂಜಿನ್ ಸರ್ಕಾರದ ಬದಲು ಆಮ್ ಆದ್ಮಿ ಪಾರ್ಟಿಯ ಹೊಸ ಎಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
“ಕಳೆದ ಎರಡು ವರ್ಷಗಳಲ್ಲಿ 40% ಕಮಿಷನ್ ನೀಡದೇ ಸರ್ಕಾರದ ಯಾವುದೇ ಗುತ್ತಿಗೆ ಕಾಮಗಾರಿ ನಡೆಯುತ್ತಿಲ್ಲವೆಂದು ಗುತ್ತಿಗೆದಾರರ ಸಂಘವೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ. ಆದರೆ ಪ್ರಧಾನಿಯಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಮಿಷನ್ ಪಡೆದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಯಾವುದೇ ಶಿಕ್ಷೆ ವಿಧಿಸಿಲ್ಲ. ಬದಲಾಗಿ, ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ 82 ವರ್ಷದ ಕೆಂಪಣ್ಣರವರನ್ನೇ ಬಂಧಿಸಿದರು. ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದವರನ್ನೇ ಬಂಧಿಸುವ ಇದು ಎಂತಹ ಸರ್ಕಾರ? ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು. ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ರವರು ಕಮಿಷನ್ ದಂಧೆಯಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಿ, ಅನೇಕ ನಾಯಕರು ಹಾಗೂ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಕೊನೆಗೆ ಆತ್ಮಹತ್ಯೆ ಮಾಡಿಕೊಂಡರು” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
“ರಾಜ್ಯ ಸರ್ಕಾರದ ಕಮಿಷನ್ ದಂಧೆಯಿಂದಾಗಿ ಶಾಲೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಖಾಸಗಿ ಶಾಲೆಗಳ ಒಕ್ಕೂಟ ಕೂಡ ಆರೋಪಿಸುತ್ತಿವೆ. ಸರ್ಕಾರದಿಂದ ಅನುದಾನ ಪಡೆಯಲು 30% ಕಮಿಷನ್ ನೀಡಬೇಕಾಗಿದೆ ಎಂದು ಹಿಂದೂ ಮಠಗಳು ಆರೋಪಿಸಿವೆ. ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನ ರಸ್ತೆಗಳನ್ನು ದುರಸ್ತಿ ಹಾಗೂ ನಿರ್ವಹಣೆಗೆ 20,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇತ್ತೀಚೆಗೆ 6000 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆದರೆ ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದಾಗಿ 100ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಕೆಲವು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಾರೆಂದು 34 ಕೋಟಿ ರೂಪಾಯಿ ಖರ್ಚು ಮಾಡಿ ರಸ್ತೆ ನಿರ್ಮಿಸಲಾಯಿತು. ಆದರೆ ಕೇವಲ 24 ಗಂಟೆಗಳೊಳಗೆ ರಸ್ತೆಯು ಕುಸಿದು ಗುಂಡಿ ಬಿದ್ದಿತು. ಕರ್ನಾಟಕದ ಯುವಕರು ಉದ್ಯೋಗವನ್ನು ಹಣಕೊಟ್ಟು ಖರೀದಿಸಬೇಕಾಗಿದೆ. 50 ಲಕ್ಷದಿಂದ 1 ಕೋಟಿ ರೂಪಾಯಿ ತನಕ ಹಣ ನೀಡಿದವರಿಗೆ ಪಿಎಸ್ಐ ಹುದ್ದೆಗಳನ್ನು ಮಾರಾಟ ಮಾಡಲಾಗಿದೆ. ಉಪನ್ಯಾಸಕರಾಗಲು 25 ಲಕ್ಷ ರೂಪಾಯಿ ನೀಡಬೇಕಾಗಿದೆ. ಶಾಸಕರು ಕೂಡ ಮಾರಾಟದ ಸರಕಾಗಿದ್ದು, ಆಪರೇಷನ್ ಕಮಲ ಹೆಸರಿನಲ್ಲಿ ಅವರನ್ನು ಖರೀದಿಸಿಯೇ ಬಿಜೆಪಿ ಸರ್ಕಾರವನ್ನು ರಚಿಸಲಾಗಿದೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
“ಕರ್ನಾಟಕದಲ್ಲಿ ವಿದ್ಯುತ್, ನೀರು, ಆರೋಗ್ಯ, ಗುಣಮಟ್ಟದ ಶಿಕ್ಷಣ, ಮಹಿಳೆಯರಿಗೆ ಸಾರಿಗೆ ಉಚಿತವಾಗಿ ಇಲ್ಲದಿದ್ದರೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ಕಳೆದ ಐದು ವರ್ಷಗಳಲ್ಲಿ 3 ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದವೆ. ಜನರಿಗೆ ಉಚಿತ ಕೊಡುಗೆ ನೀಡುವ ಬದಲು ಅವರ ತಲೆ ಮೇಲೆ ಸಾಲದ ಹೊರೆ ಹೊರಿಸಿವೆ. ದೆಹಲಿಯಲ್ಲಿ ಇವೆಲ್ಲ ಉಚಿತವಾಗಿದ್ದರೂ ಅಲ್ಲಿನ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಆಮ್ ಆದ್ಮಿ ಪಾರ್ಟಿಯು ಜೀರೋ ಕಮಿಷನ್ ಆಡಳಿತ ನೀಡುತ್ತಿರುವುದರಿಂದ ಇವೆಲ್ಲ ಸಾಧ್ಯವಾಗಿದೆ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
“ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರರಹಿತ ಆಡಳಿತ ನೀಡಲಾಗುತ್ತದೆ. ಪಂಜಾಬ್ನಲ್ಲಿ ನಮ್ಮದೇ ಪಕ್ಷದ ಇಬ್ಬರು ನಾಯಕರು ತಪ್ಪು ಮಾಡಿರುವುದು ಕಂಡುಬಂದಾಗಿ ಶೀಘ್ರವೇ ಅವರನ್ನು ಅಧಿಕಾರದಿಂದ ವಜಾ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಭ್ರಷ್ಟಾಚಾರದ ವಿಷಯದಲ್ಲಿ ನಾವು ಜೀರೋ ಟಾಲರೆನ್ಸ್ ಹೊಂದಿದ್ದೇವೆ. ಯಾರೇ ಭ್ರಷ್ಟಾಚಾರ ಮಾಡಿದರೂ ಸಹಿಸುವ ಪ್ರಶ್ನೆಯೇ ಇಲ್ಲ. ನಮ್ಮ ಮಕ್ಕಳು ತಪ್ಪು ಮಾಡಿದರೂ ನಾವು ಬಿಡುವುದಿಲ್ಲ” ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಬಿಜೆಪಿ ಶಾಸಕನ ಪುತ್ರನ ಬಳಿ ಕಂತೆಕಂತೆ ಹಣ ಎಲ್ಲಿಂದ ಬಂತು?: ಪಂಜಾಬ್ ಸಿಎಂ ಭಗವಂತ್ ಮಾನ್ ಪ್ರಶ್ನೆ
ಅಧಿಕಾರ ದುರ್ಬಳಕೆ ಮಾಡಿಕೊಂಡು ಆಮ್ ಆದ್ಮಿ ಪಾರ್ಟಿ ನಾಯಕರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿರುವ ಕೇಂದ್ರ ಸರ್ಕಾರವು ಬಿಜೆಪಿ ಶಾಸಕರೊಬ್ಬರ ಪುತ್ರನ ಬಳಿ ಕಂತೆಕಂತೆ ಹಣ ಸಿಕ್ಕರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರಶ್ನಿಸಿದರು.
ದಾವಣಗೆರೆಯಲ್ಲಿ ನಡೆದ ಆಮ್ ಆದ್ಮಿ ಪಾರ್ಟಿ ಸಮಾವೇಶದಲ್ಲಿ ಮಾತನಾಡಿದ ಭಗವಂತ್ ಮಾನ್, “ದೆಹಲಿ ಸರ್ಕಾರದ ಸಚಿವ ಮನೀಷ್ ಸಿಸೋದಿಯಾರವರು ಅತ್ಯುತ್ತಮವಾಗಿ ಸರ್ಕಾರಿ ಶಾಲೆಗಳನ್ನು ನವೀಕರಿಸಿದರು. ಅತ್ಯಾಧುನಿಕ ವ್ಯವಸ್ಥೆ ಕಲ್ಪಿಸಿಕೊಡುವ ಮೂಲಕ ವಿಶ್ವವೇ ದೆಹಲಿಯ ಸರ್ಕಾರಿ ಶಾಲೆಗಳತ್ತ ತಿರುಗಿ ನೋಡುವಂತೆ ಮಾಡಿದರು. ಇದನ್ನು ಸಹಿಸದೇ ಸಿಬಿಐ ಮೂಲಕ ಅವರನ್ನು ಬಂಧಿಸಲಾಗಿದೆ. ನಾವು ಸಿಬಿಐ, ಇಡಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂಬುದನ್ನು ಬಿಜೆಪಿ ನೆನಪಿಟ್ಟುಕೊಳ್ಳಬೇಕು” ಎಂದು ಹೇಳಿದರು.
“ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಲ್ಲಿನ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬರ ಅಕೌಂಟ್ಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಭರವಸೆ ನೀಡಿದ್ದರು. ಅದು ಇದುವರೆಗೆ ಈಡೇರಿಲ್ಲ. ಭ್ರಷ್ಟಾಚಾರದ ವಿರುದ್ಧ ನಾವು ಸಮರ ಸಾರಿದ್ದೇವೆ. ಈ ನಿಟ್ಟಿನಲ್ಲಿ ಪಂಜಾಬ್ ಹಾಗೂ ದೆಹಲಿಯಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ತೆರಿಗೆ ಕಟ್ಟುವಂತಹ ದುಸ್ಥಿತಿಯಲ್ಲಿ ದೇಶದ ಜನರಿದ್ದಾರೆ. ಜನಪರ ಆಡಳಿತ ನೀಡುತ್ತಿರುವ ಕೇಜ್ರಿವಾಲ್ ಜನಪ್ರಿಯತೆ ಸಹಿಸದೇ ಬಿಜೆಪಿಯು ದ್ವೇಷದ ರಾಜಕಾರಣ ಮಾಡುತ್ತಿದೆ” ಎಂದು ಭಗವಂತ್ ಮಾನ್ ವಾಗ್ದಾಳಿ ನಡೆಸಿದರು.
“ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಕಳ್ಳರ ಪಕ್ಷಗಳು. ಈ ಪಕ್ಷಗಳಿಂದ ಅಭಿವೃದ್ಧಿ ಅಸಾಧ್ಯ. ರಾಜ್ಯ ಲೂಟಿ ಹೊಡೆಯುವುದರಲ್ಲಿ ನಿರತವಾಗಿರುವ ಈ ಪಕ್ಷಗಳಿಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ, ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಬೇಕು. ಪಂಜಾಬ್ ಸರ್ಕಾರವು ಯಾವ ಭ್ರಷ್ಟರನ್ನೂ ಬಿಡುತ್ತಿಲ್ಲ. ಮಾಹಿತಿ ಮತ್ತು ದಾಖಲೆ ಸಿಕ್ಕ ತಕ್ಷಣವೇ ಜೈಲಿಗಟ್ಟುವ ಕೆಲಸ ಮಾಡಿದ್ದೇವೆ. ದೆಹಲಿಯಲ್ಲಿ ನಾವೇನು ಮಾಡಿದ್ದೇವೆ ಎಂಬುದು ಜನರಿಗೆ ಗೊತ್ತಿದೆ. ಪಂಜಾಬ್ ಮತ್ತು ದೆಹಲಿಯಲ್ಲಿ ಪ್ರಾಮಾಣಿಕ ಸರ್ಕಾರ ಕೊಟ್ಟಂತೆ ಇಲ್ಲಿಯೂ ಕೊಡುತ್ತೇವೆ” ಎಂದು ಭಗವಂತ್ ಮಾನ್ ಹೇಳಿದರು.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾಗೆ ಎಎಪಿಯ ಕೇಜ್ರಿವಾಲ್, ಮಾನ್ ಕಂಡರೆ ಭಯ: ಪೃಥ್ವಿ ರೆಡ್ಡಿ
ದಾವಣಗೆರೆಯಲ್ಲಿ ನಡೆದ ಆಮ್ ಆದ್ಮಿ ಪಾರ್ಟಿ ಸಮಾವೇಶದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಬದಲಾವಣೆಯು ಪ್ರಕೃತಿಯ ನಿಯಮ. ಕರ್ನಾಟಕದಲ್ಲಿ ಸರ್ಕಾರ ಹಾಗೂ ಆಡಳಿತ ಪಕ್ಷವನ್ನು ಹಲವು ಬಾರಿ ಬದಲಿಸಿದ್ದೇವೆ. ಆದರೆ ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಬದಲಿಸಲು ಮಾತ್ರ ಸಾಧ್ಯವಾಗಿಲ್ಲ. ಕರ್ನಾಟಕವನ್ನು ಆಳಿದ ಮೂರು ಪಕ್ಷಗಳಲ್ಲೂ ದುರಹಂಕಾರವಿದೆ. ಐದೂ ವರ್ಷಗಳು ಕೆಲಸ ಮಾಡದಿದ್ದರೂ, ಚುನಾವಣೆ ಸಮೀಪಿಸಿದಾಗ ಹಣ ಹಾಗೂ ಇತರೆ ಆಮಿಷಗಳನ್ನು ಹಂಚಿ ಜಯಗಳಿಸಬಹುದು ಎಂದು ಅವು ಭಾವಿಸಿವೆ. ಈ ದುರಹಂಕಾರವನ್ನು ಮುರಿಯಲು ಪೊರಕೆಯೊಂದೇ ಪರಿಹಾರ. ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾದ ನಂತರ ಇಲ್ಲಿನ ಜನರಲ್ಲಿ ಬದಲಾವಣೆಗಳಾಗಿವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಸೀರೆ, ಕುಕ್ಕರ್, ಟಿವಿ, ಫ್ರಿಜ್ ಮುಂತಾದವುಗಳನ್ನು ಪಡೆದ ಜನರು ಕೂಡ ಕರ್ನಾಟಕದಲ್ಲಿ ದೆಹಲಿ ಮಾದರಿಯ ಸರ್ಕಾರಿ ಶಾಲೆ, ಆಸ್ಪತ್ರೆಗಳು ಯಾಕಿಲ್ಲ ಎಂದು ಕೇಳುತ್ತಿದ್ದಾರೆ” ಎಂದು ಹೇಳಿದರು.
“ಆಮ್ ಆದ್ಮಿ ಪಾರ್ಟಿ ಇಡೀ ದೇಶದಲ್ಲಿ ಜನರ ಪ್ರೀತಿ, ವಿಶ್ವಾಸ ಗಳಿಸುತ್ತಿದೆ. ಇದನ್ನು ಗಮನಿಸಿದ ಬಿಜೆಪಿಯ ನರೇಂದ್ರ ಮೋದಿ ಹಾಗೂ ಅಮಿತ್ ಶಾರವರಿಗೆ ಅರವಿಂದ್ ಕೇಜ್ರಿವಾಲ್ ಹಾಗೂ ಭಗವಂತ್ ಮಾನ್ರವರ ಬಗ್ಗೆ ಭಯ ಶುರುವಾಗಿದೆ. ಕೇಜ್ರಿವಾಲ್ ಹಾಗೂ ಮಾನ್ ಬಗ್ಗೆ ಭಯಕ್ಕಿಂತಲೂ ಮುಖ್ಯವಾಗಿ ಕರ್ನಾಟಕದ ಜನತೆಯ ಬಗ್ಗೆ ಬಿಜೆಪಿಯವರಿಗೆ ಭಯ ಶುರುವಾಗಿದೆ. ಕರ್ನಾಟಕ ಸರ್ಕಾರವು 24,000 ಶಾಲಾ ತರಗತಿ ಕೊಠಡಿಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ. ಆದರೆ ವಾಸ್ತವವಾಗಿ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ನೀಡಲೂ ಸರ್ಕಾರಕ್ಕೆ ಸಾಧ್ಯವಾಗಿಲ್ಲ. 192 ರೂಪಾಯಿ ಮೊತ್ತದ ಶೂಗಳನ್ನು 320 ರೂಪಾಯಿಗೆ ಖರೀದಿಸಿ, ಅದರಲ್ಲೂ ಕಮಿಷನ್ ಹೊಡೆದಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
“ಆಮ್ ಆದ್ಮಿ ಪಾರ್ಟಿಯು ದೆಹಲಿ ಎಂಬ ಸಣ್ಣ ರಾಜ್ಯದಲ್ಲೇ 500ಕ್ಕೂ ಹೆಚ್ಚು ಮೊಹಲ್ಲಾ ಕ್ಲಿನಿಕ್ಗಳನ್ನು ತೆರೆದಿದೆ. ಆದರೆ ಅದನ್ನು ನಕಲು ಮಾಡಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರವು ಇಡೀ ಕರ್ನಾಟಕಕ್ಕೆ ಕೇವಲ 483 ನಮ್ಮ ಕ್ಲಿನಿಕ್ಗಳನ್ನು ಘೋಷಿಸಿದೆ. ಆಮ್ ಆದ್ಮಿ ಪಾರ್ಟಿಯು ದೆಹಲಿಯಲ್ಲಿ 200 ಯೂನಿಟ್ ಉಚಿತ ಕರೆಂಟ್ ನೀಡುತ್ತಿದೆ. ಕಾಂಗ್ರೆಸ್ ಪಕ್ಷವು ಇದನ್ನೇ ನಕಲು ಮಾಡಿ ಇಲ್ಲಿ ಭರವಸೆ ನೀಡುತ್ತಿದೆ. ಕಾಂಗ್ರೆಸ್ ಪಕ್ಷವೇ ಆಡಳಿತದಲ್ಲಿರುವ ಹಿಮಾಚಲ ಪ್ರದೇಶ, ರಾಜಸ್ಥಾನ, ಛತ್ತೀಸ್ಗಡ ಮತ್ತಿತರ ರಾಜ್ಯಗಳಲ್ಲಿ ಉಚಿತ ವಿದ್ಯುತ್ ಏಕಿಲ್ಲ? ಕಾಂಗ್ರೆಸ್ಗೆ ಧೈರ್ಯ ಹಾಗೂ ಬದ್ಧತೆಯಿದ್ದರೆ ಆ ರಾಜ್ಯಗಳಲ್ಲಿ ಯೋಜನೆಯನ್ನು ಜಾರಿಗೆ ತಂದು ನಂತರ ಕರ್ನಾಟಕದಲ್ಲಿ ಭರವಸೆ ನೀಡಲಿ. ಇತ್ತೀಚಿನ ದಿನಗಳಲ್ಲಿ ಚುನಾವಣೆ ಸಮೀಪಿಸಿದಾಗ ಶಾಲೆಗಳ ಬಗ್ಗೆ ಮಾತನಾಡುತ್ತಿರುವ ಜೆಡಿಎಸ್ನ ಎಚ್.ಡಿ.ಕುಮಾರಸ್ವಾಮಿಯವರು ತಾವು ಮುಖ್ಯಮಂತ್ರಿಯಾಗಿದ್ದಾರೆ ನಿರ್ಮಿಸಿದ ಒಂದೇ ಒಂದು ಸರ್ಕಾರಿ ಶಾಲೆಯನ್ನು ತೋರಿಸಲಿ” ಎಂದು ಪೃಥ್ವಿ ರೆಡ್ಡಿ ಸವಾಲು ಹಾಕಿದರು.
“ಬಿಜೆಪಿಯವರು ಡಬಲ್ ಎಂಜಿನ್ ಸರ್ಕಾರ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ನಿಜವಾದ ಡಬಲ್ ಎಂಜಿನ್ಗಳೆಂದರೆ ಅರವಿಂದ್ ಕೇಜ್ರಿವಾಲ್ ಹಾಗೂ ಭಗವಂತ್ ಮಾನ್ ಎಂಬ ಎರಡು ಎಂಜಿನ್ಗಳನ್ನು ಹೊಂದಿರುವ ಆಮ್ ಆದ್ಮಿ ಪಾರ್ಟಿ. ಇದು ಜೀರೋ ಪರ್ಸೆಂಟ್ ಕಮಿಷನ್ ಎಂಜಿನ್ಗಳು. ನೀವು ರಕ್ತ ನೀಡಿದರೆ ನಾನು ಸ್ವಾತಂತ್ರ್ಯ ನೀಡುತ್ತೇನೆ ಎಂದು ಸುಭಾಷ್ ಚಂದ್ರ ಬೋಸ್ರವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಹೇಳಿದ್ದರು. ಆದರೆ ಆಮ್ ಆದ್ಮಿ ಪಾರ್ಟಿಯು ಕಾರ್ಯಕರ್ತರಿಂದ ರಕ್ತ ಕೇಳುತ್ತಿಲ್ಲ. ನೀವು ಪಕ್ಷಕ್ಕಾಗಿ ಸಮಯ ಹಾಗೂ ಶ್ರಮ ನೀಡಿದರೆ, ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರಲಿದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಹಾಸ್ಯನಟ ಟೆನಿಸ್ ಕೃಷ್ಣ, ರಾಜ್ಯ ಸಮಿತಿ ಉಪಾಧ್ಯಕ್ಷ ವಿಜಯ್ ಶರ್ಮಾ, ರಾಜ್ಯ ಕಾರ್ಯದರ್ಶಿ ಸಂಚಿತ್ ಸಹನಿ ಮತ್ತಿತರರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw