ಕೋರೆಗಾಂವ್ ಎಂಬ ಶೋಷಿತರು ನಡೆಸಿದ ಶ್ರೇಷ್ಠ ಯುದ್ಧದ ಬಗ್ಗೆ - Mahanayaka
3:16 AM Tuesday 10 - December 2024

ಕೋರೆಗಾಂವ್ ಎಂಬ ಶೋಷಿತರು ನಡೆಸಿದ ಶ್ರೇಷ್ಠ ಯುದ್ಧದ ಬಗ್ಗೆ

raghottama hoba
01/01/2023

  • ರಘೋತ್ತಮ ಹೊಬ

ಭಾರತದ ಇತಿಹಾಸದಲ್ಲಿ ನಡೆದಿರುವ ವಿವಿಧ ಯುದ್ಧಗಳಲ್ಲಿ, ಬರೇ ಆ ರಾಜರು ಈ ರಾಜರ ವಿರುದ್ಧ, ಮಹಮ್ಮದೀಯರು ಬ್ರಿಟಿಷರ ವಿರುದ್ಧ, ಬ್ರಿಟಿಷರು ಫ್ರೆಂಚರ ವಿರುದ್ಧ, ಫ್ರೆಂಚರು ಡಚ್ಚರ ವಿರುದ್ಧ… ಹೀಗೆ ಸಾಮ್ರಾಜ್ಯಶಾಹಿಗಳು ನಡೆಸಿದ ಯುದ್ಧಗಳ ಬಗ್ಗೆಯಷ್ಟೆ ಚರಿತ್ರೆ ದಾಖಲಿಸಲಾಗಿದೆ. ಆದರೆ ಶೋಷಿತರು ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿದ, ನಡೆಸಿ ಗೆಲುವು ದಾಖಲಿಸಿದ ಬಗ್ಗೆ ಎಲ್ಲಿಯೂ ದಾಖಲಾಗಿಲ್ಲ! ಇತಿಹಾಸ ಕೃತಿಯ ಯಾವ  ಪುಟದಲ್ಲೂ ಅಂತಹದ್ದೊಂದು ಯುದ್ಧದ ಬಗ್ಗೆ ಉಲ್ಲೇಖವಿಲ್ಲ. ಯಾಕೆ? ಖಂಡಿತ ಅದು ಶೋಷಿತ ಸಮುದಾಯದ ಬಗೆಗಿನ ಇತಿಹಾಸಕಾರರ ದಿವ್ಯ ತಾತ್ಸಾರವಷ್ಟೆ!

ಈ ನಿಟ್ಟಿನಲ್ಲಿ ಶೋಷಿತರು ಶೋಷಕ ಶಕ್ತಿಗಳ ವಿರುದ್ಧ ಸಾರಿದ ಯುದ್ಧದ ಬಗ್ಗೆ ಹೇಳಲೇಬೇಕಾಗುತ್ತದೆ. ಖಂಡಿತ, ಆ ಯುದ್ಧ ಕೋರೇಗಾಂವ್ ಯುದ್ಧ. ಭೀಮಾ ನದಿಯ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೇಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ. ಹಾಗಿದ್ದರೆ ಆ  ಯುದ್ಧ ಯಾರ ವಿರುದ್ಧ ನಡೆಯಿತು? ಯಾರು ನಡೆಸಿದರು? ಎಂಬ ಪ್ರಶ್ನೆ ಮೂಡುತ್ತದೆ. ಈ ನಿಟ್ಟಿನಲ್ಲಿ 1818ರ ಹೊಸ ವರ್ಷದ ಸಂದರ್ಭದಲ್ಲಿ ನಡೆದ ಆ ಯುದ್ಧದ details ಹೇಳುವುದಕ್ಕೂ ಮುನ್ನ ಆ ಸಮಯದಲ್ಲಿ ಇದ್ದ ಸಾಮಾಜಿಕ ಸ್ಥಿತಿಗತಿಯನ್ನು ದಾಖಲಿಸುವುದು ಸೂಕ್ತವೆನಿಸುತ್ತದೆ.

ಹೌದು, 1818 ಅದು ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದ  ಕಾಲ. ಆಗಿನ  ಪೇಶ್ವೆ ಅಥವಾ  ಬ್ರಾಹ್ಮಣ ಮಂತ್ರಿ 2ನೇ ಬಾಜೀರಾಯನಾಗಿದ್ದ. ಹಾಗಿದ್ದರೆ ಪೇಶ್ವೆಗಳ ಆ ಕಾಲದಲ್ಲಿ ಸಾಮಾಜಿಕ ಪರಿಸ್ಥಿತಿ ಹೇಗಿತ್ತು? ಬಾಬಾಸಾಹೇಬ್ ಅಂಬೇಡ್ಕರರ ಪ್ರಕಾರವೇ ಹೇಳುವುದಾದರೆ “ಮರಾಠರ ರಾಜ್ಯದಲ್ಲಿ ಪೇಶ್ವೆಗಳ ಆಡಳಿತದಲ್ಲಿ, ಅಸ್ಪೃಶ್ಯರ ನೆರಳು ಹಿಂದೂವೊಬ್ಬನ ಮೇಲೆ ಬಿದ್ದು ಆತ ಮಲಿನವಾಗುವುದನ್ನು ತಪ್ಪಿಸಲು ಸಾರ್ವಜನಿಕ ಬೀದಿಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಒಂದು ವೇಳೆ by mistake ಅಸ್ಪೃಶ್ಯನೊಬ್ಬನನ್ನು ಹಿಂದೂವೊಬ್ಬ ಮುಟ್ಟಿದರೆ ಆಗ ಆ ಹಿಂದೂ ಮಲಿನಗೊಳ್ಳುವುದನ್ನು ತಪ್ಪಿಸಲು ಅಸ್ಪೃಶ್ಯನು ತನ್ನ ಕುತ್ತಿಗೆಗೆ ಅಥವಾ ಮುಂಗೈಗೆ ಕಪ್ಪು ದಾರವೊಂದನ್ನು ಕಟ್ಟಿಕೊಳ್ಳುವುದು ಆ ದಿನಗಳಲ್ಲಿ ಕಡ್ಡಾಯವಾಗಿತ್ತು. ಅಲ್ಲದೆ ಪೇಶ್ವೆಗಳ  ಆಗಿನ ರಾಜಧಾನಿಯಾದ ಪೂನಾದಲ್ಲಿ ಅಸ್ಪೃಶ್ಯನೋರ್ವ ನಡೆದ ದಾರಿಯಲ್ಲಿ ಹಿಂದೂಗಳು ನಡೆದು ಸದರಿ ಹಿಂದೂ ಮಲಿನಗೊಳ್ಳುವುದನ್ನು ತಡೆಯಲು ಅಸ್ಪೃಶ್ಯನು ತನ್ನ ನಡುವಿಗೆ ಹಗ್ಗವೊಂದನ್ನು ಬಿಗಿದು ಅದಕ್ಕೆ ಕಸಪೊರಕೆಯೊಂದನ್ನು ಕಟ್ಟಿ ತಾನು ನಡೆದ ದಾರಿಯನ್ನು ತಾನೇ ಗುಡಿಸಬೇಕಾಗಿತ್ತು! ಅದಲ್ಲದೆ ಅದೇ ಪೂನಾ ನಗರದಲ್ಲಿ ಅಕಸ್ಮಾತ್ ಅಸ್ಪೃಶ್ಯನೊಬ್ಬ ದಾರಿಯಲ್ಲಿ ಉಗಿದರೆ ಮತ್ತು ಆ ಉಗುಳನ್ನು ಹಿಂದೂವೊಬ್ಬ ತುಳಿದು ಆತ ಮಲಿನವಾಗುವುದನ್ನು ತಪ್ಪಿಸಲು ಅಸ್ಪೃಶ್ಯ ತನ್ನ ಕೊರಳಿಗೆ ಮಣ್ಣಿನ ಮಡಕೆಯೊಂದನ್ನು ನೇತುಹಾಕಿಕೊಳ್ಳಬೇಕಾಗುತ್ತಿತ್ತು ಮತ್ತು ಉಗಿಯಬೇಕೆಂದಾಗ ಆತ ಆ ಮಡಕೆಯಲ್ಲಿ ಉಗಿಯಬೇಕಾಗಿತ್ತು”! ಪೇಶ್ವೆಗಳ ಕಾಲದ ಅಸ್ಪೃಶ್ಯರ ಸ್ಥಿತಿಗತಿಯನ್ನು ಅಂಬೇಡ್ಕರರು ಹೀಗೆ ವಿವರಿಸುತ್ತಾ ಹೋಗುತ್ತಾರೆ.

ಹೀಗಿರುವಾಗ ಇಂತಹ ವಿಚಿತ್ರ ಸಾಮಾಜಿಕ ದುಸ್ಥಿತಿಯ ಸಂದರ್ಭದಲ್ಲಿ ಮಾಹಾರಾಷ್ಟ್ರದ ಅಸ್ಪೃಶ್ಯರಾದ ಮಹಾರರಿಗೆ ದೌರ್ಜನ್ಯಕೋರ ಇಂತಹ ಪೇಶ್ವೆಗಳ, ಮತ್ತವರ ಸಾಮ್ರಾಜ್ಯದ ವಿರುದ್ಧ ಹೋರಾಡುವ ಅದ್ಭುತ ಅವಕಾಶವೊಂದು ಬರುತ್ತದೆ. ಹೌದು, ಅದೇ ಕೋರೇಗಾಂವ್ ಯುದ್ಧ! ಅಂದಹಾಗೆ ಇದೇನು ಅಸ್ಪೃಶ್ಯರು ಮೇಲ್ಜಾತಿಗಳ ವಿರುದ್ಧ, ಅವರ ದೌರ್ಜನ್ಯದ ವಿರುದ್ಧ ನೇರಾನೇರ ಕಾದಾಟಕ್ಕಿಳಿದದ್ದಲ್ಲ. ಆದರೆ ಯಾವ ಜಾತಿ/ವರ್ಣವ್ಯವಸ್ಥೆಯಲ್ಲಿ ಶಸ್ತ್ರಹಿಡಿಯುವುದು  ಇಂತಹ ಜಾತಿಗೆ/ವರ್ಣಕ್ಕೆ ಎಂದು ಮೀಸಲಾಗಿತ್ತೋ ಅಂತಹ ಶ್ರೇಣೀಕೃತ ಜಾತಿವ್ಯವಸ್ಥೆಯ ಸಮಯದಲ್ಲಿ ಬ್ರಿಟಿಷರ ಪರವಾಗಿ, ಅವರ ಸೇನೆಯಲ್ಲಿ ಸೈನಿಕರಾಗಿಯಷ್ಟೆ ಅಸ್ಪೃಶ್ಯ ಮಹಾರರು ಕಾದಾಡಿದ್ದು.

ಹಾಗಿದ್ದರೆ ಆ ಹೋರಾಟ ಹೇಗಿತ್ತು? ಬಾಬಾಸಾಹೇಬ್ ಅಂಬೇಡ್ಕರರ ಬರಹಗಳು ಮತ್ತು ಭಾಷಣಗಳು, ಸಂಪುಟ 17, ಭಾಗ 3(ಇಂಗ್ಲೀಷ್ ಆವೃತ್ತಿ) ಪುಟ.4ರ ಪ್ರಕಾರ ಹೇಳುವುದಾದರೆ “ಭೀಮಾನದಿಯ ತೀರದಲ್ಲಿದ್ದ ಆ ಕೋರೇಗಾಂವ್ ರಣಾಂಗಣದಲ್ಲಿ ಬಾಂಬೆ ರೆಜಿಮೆಂಟ್‍ನ ಕೇವಲ 500 ಜನ ಮಹಾರ್ ಕಾಲ್ದಳದ ಸೈನಿಕರು ಪೂನಾದ 250 ಅಶ್ವದಳದವರ ನೆರವಿನೊಂದಿಗೆ, ಜೊತೆಗೆ ಮದ್ರಾಸ್‍ನ 24 ಗನ್‍ಮೆನ್‍ಗಳ ಸಹಾಯದಿಂದ 20000 ಅಶ್ವದಳವಿದ್ದ, 8000ದಷ್ಟು ಕಾಲ್ದಳವಿದ್ದ ಪೇಶ್ವೆಯ ಬೃಹತ್ ಸೇನೆಯ ವಿರುದ್ಧ 1818 ಜನವರಿ 1ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಸತತ 12ಗಂಟೆಗಳು ಯಾವುದೇ ವಿಶ್ರಾಂತಿ-ಆಯಾಸವಿಲ್ಲದೆ, ಆಹಾರ-ನೀರಿನ ಪರಿವಿಲ್ಲದೆ ಕ್ಯಾಪ್ಟನ್ ಎಫ್.ಎಫ್.ಸ್ಟಾಂಟನ್‍ನ ನೇತೃತ್ವದಲ್ಲಿ ಹೋರಾಡಿ ಅಭೂತಪೂರ್ವ ಗೆಲುವು ಸಾಧಿಸುತ್ತಾರೆ”!

ಸವಿಸ್ತಾರವಾಗಿ ಹೇಳುವುದಾದರೆ ಕ್ಯಾಪ್ಟನ್ ಸ್ಟಾಂಟನ್‍ನ ನೇತೃತ್ವದಲ್ಲಿ ಸಿರೂರ್‍ನಿಂದ 1818 ಡಿಸೆಂಬರ್ 31ರ ರಾತ್ರಿ ಹೊರಟ ಮಹಾರ್ ಸೇನೆ ಸತತ 27 ಕಿ.ಮೀ ನಡೆದು ಮಾರನೇ ದಿನ 1ನೇ ತಾರೀಖು ಬೆಳಿಗ್ಗೆ ಕೋರೇಗಾಂವ್ ರಣಾಂಗಣವನ್ನು ತಲುಪುತ್ತದೆ. ಅದೇ ಸಮಯದಲ್ಲಿ ಮೂರೂ ದಿಕ್ಕುಗಳಿಂದಲೂ ತಲಾ 600ರಷ್ಟಿದ್ದ ಪೇಶ್ವೆಯ ಕಾಲ್ದಳದ 3 ತುಕಡಿಗಳು ಕ್ಯಾಪ್ಟನ್ ಸ್ಟಾಂಟನ್‍ನ ಪಡೆಯನ್ನು ಸುತ್ತುವರೆಯುತ್ತವೆ. ಅಲ್ಲದೆ ಪೇಶ್ವೆಯ ಈ ಸೈನ್ಯದ ಬೆಂಬಲಕ್ಕೆ ಬೃಹತ್ ಅಶ್ವದಳ, ರಾಕೆಟ್‍ದಳ ಬೇರೆ! ಒಟ್ಟಾರೆ ಸಂದಿಗ್ಧ ಸ್ಥಿತಿಯಲ್ಲಿ ಬ್ರಿಟಿಷ್ ಸೇನೆಯು ಪೇಶ್ವೆಗಳ ಕಾಲ್ದಳ ಮತ್ತು ಫಿರಂಗಿದಳಗಳಿಂದ ಸಂಪೂರ್ಣ ವೃತ್ತಾಕಾರ ಮಾದರಿಯಲ್ಲಿ ಸುತ್ತುವರಿಯಲ್ಪಡುತ್ತದೆ. ಹೇಗೆಂದರೆ ಪಕ್ಕದಲ್ಲೇ ಇದ್ದ ಭೀಮಾನದಿಗೆ ಹೋಗುವ ದಾರಿಗಳೆಲ್ಲ ಬಂದ್ ಆಗುವ ಮಟ್ಟಿಗೆ! ಕಡೆಗೆ ವಿಧಿಯಿಲ್ಲದೆ ಎರಡೂ ದಳಗಳೂ ಕೋರೇಗಾಂವ್ ಗ್ರಾಮವನ್ನು ಪ್ರವೇಶಿಸುತ್ತವೆ. ಕೋರೇಗಾಂವ್ ಗ್ರಾಮವನ್ನು ಪ್ರವೇಶಿಸಿದ್ದೇ ತಡ ಎರಡೂ ಪಡೆಗಳೂ ಬೀದಿಬೀದಿಗಳಲ್ಲಿ, ಮನೆ-ಗುಡಿಸಲುಗಳ ಮುಂದೆ ಕೈಕೈ ಮಿಲಾಯಿಸುತ್ತಾ ನೇರಾ-ನೇರ ಕಾದಾಟಕ್ಕಿಳಿಯುತ್ತವೆ. ಅದರಲ್ಲೂ ಬಹುತೇಕ ಮಹಾರರೇ ತುಂಬಿದ್ದ ಬ್ರಿಟಿಷ್ ಸೈನ್ಯಕ್ಕೆ ಬಹಳ ಹಾನಿಯಾಗುತ್ತದೆ. ಆದರೂ ಎದೆಗುಂದದ ಮಹಾರ್ ಸೈನಿಕರು ಅತ್ಯುತ್ಕೃಷ್ಟ ಧೈರ್ಯದಿಂದ ಮುನ್ನುಗ್ಗುತ್ತಲೇ ಹೋಗುತ್ತಾರೆ. ಪಡೆಯ ನೇತೃತ್ವ ವಹಿಸಿದ್ದ ಕ್ಯಾಪ್ಟನ್ ಸ್ಟಾಂಟನ್‍ನಂತೂ “ಕಡೆಯ ಸೈನಿಕನಿರುವ ತನಕ, ಕಡೆಯ ಬುಲೆಟ್ ಇರುವ ತನಕ ಹೋರಾಡುತ್ತಲೇ ಇರಿ” ಎಂದು ಹುರಿದುಂಬಿಸುತ್ತಲೇ ಇರುತ್ತಾನೆ. ಪರಿಣಾಮವಾಗಿ ಮಹಾರ್ ಸೈನಿಕರು ಅತ್ಯಮೋಘ ಧೈರ್ಯದಿಂದ, ಎಲ್ಲಾ ದುರಾದೃಷ್ಟಗಳ ನಡುವೆ ಹೋರಾಡುತ್ತ ವೀರಾವೇಶದಿಂದ  ಮುನ್ನುಗ್ಗುತ್ತಾರೆ. ಅಂದಹಾಗೆ ಮಹಾರ್ ಸೈನಿಕರ ಅಂತಹ ಮುನ್ನುಗ್ಗುವಿಕೆಯಲ್ಲಿ ಅದೆಂತಹ, ಅದೆಷ್ಟು ಶತಮಾನಗಳ ನೋವಿನ ಆಕ್ರೋಶವಿತ್ತು? ತತ್ಫಲವಾಗಿ ಬಹುಸಂಖ್ಯೆಯಲ್ಲಿದ್ದರೂ ಕೂಡ ಪೇಶ್ವೆಯ ಸೈನ್ಯ ಹಿಮ್ಮೆಟ್ಟಿ ಸೋತು ರಾತ್ರಿ 9 ಗಂಟೆಗೆ ಧಾಳಿಯನ್ನು ನಿಲ್ಲಿಸುತ್ತದೆ ಹಾಗೂ ವಿಧಿಯಿಲ್ಲದೆ ಕೋರೇಗಾಂವ್‍ನಿಂದ ರಾತ್ರೋರಾತ್ರಿ ಕಾಲ್ಕೀಳುತ್ತದೆ!

ಒಟ್ಟಾರೆ ಅತ್ಯಮೋಘ ಧೈರ್ಯ ಮತ್ತು ಶಿಸ್ತುಬದ್ಧ ಶೌರ್ಯವನ್ನು ಪ್ರದರ್ಶಿಸಿದ ಮಹಾರ್ ಸೈನಿಕರು ಶೋಷಕ ಪೇಶ್ವೆಗಳ ವಿರುದ್ಧ ಅಭೂತಪೂರ್ವ ಜಯ ದಾಖಲಿಸುತ್ತಾರೆ. ಅಂದಹಾಗೆ ಈ ಯುದ್ಧದ ನಂತರ ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತ ಕೊನೆಗೊಳ್ಳುತ್ತದೆ. ಹಾಗೆಯೇ ಅಸ್ಪೃಶ್ಯರ ದಯನೀಯ ಸ್ಥಿತಿ ಕೂಡ ಸುಧಾರಣೆ ಕಾಣಲು ಆರಂಭಿಸುತ್ತದೆ. ಈ ಯುದ್ಧದಲ್ಲಿ ಜಯ ತಂದುಕೊಟ್ಟು ಮಡಿದ 22 ಮಹಾರ್ ಸೈನಿಕರ ಸ್ಮರಣಾರ್ಥ ಕೋರೇಗಾಂವ್‍ನಲ್ಲಿ ಮಹಾರ್ ಸೈನಿಕರು ಪ್ರಥಮ ಗುಂಡು ಸಿಡಿಸಿದ ಸ್ಥಳದಲ್ಲೇ 65 ಅಡಿ ಎತ್ತರದ  ಒಂದು ಶಿಲಾ ಸ್ಮಾರಕ ಕೂಡ 1821 ಮಾರ್ಚ್ 26ರಂದು ನಿರ್ಮಾಣಗೊಳ್ಳುತ್ತದೆ. ಹಾಗೂ ಆ ಸ್ಮಾರಕದಲ್ಲಿ ಮಡಿದ 22 ಸೈನಿಕರ ಜೊತೆಗೆ ಗಾಯಗೊಂಡವರ ಹೆಸರನ್ನೂ ಕೆತ್ತಿಸಲಾಗುತ್ತದೆ.

ಒಂದು ವಾಸ್ತವ, ಅದೆಂದರೆ “ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು” ಎಂದು ಹೇಳಿದ ಬಾಬಾಸಾಹೇಬ್ ಅಂಬೇಡ್ಕರರಿಗೆ ತನ್ನ ಜನರ ಇಂತಹ ಅದ್ಭುತ ಐತಿಹಾಸಿಕ ಜಯದ ಬಗ್ಗೆ ಬಹಳ ಹೆಮ್ಮೆ ಇತ್ತು. ಆ ಕಾರಣಕ್ಕಾಗಿ ಕೋರೆಗಾಂವ್‍ನಲ್ಲಿನ ಮಹಾರ್ ಸೈನಿಕರ ಈ ಸ್ಮಾರಕಕ್ಕೆ ಅಂಬೇಡ್ಕರರು ಪ್ರತೀ ವರ್ಷ ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದರು. ಅಲ್ಲದೆ ಅಗಲಿದ ಯೋಧರಿಗೆ ಬಾಬಾಸಾಹೇಬರು ತಮ್ಮ ಅಭೂತಪೂರ್ವ ನಮನ ಸಲ್ಲಿಸುತ್ತಿದ್ದರು. ಯಾಕೆಂದರೆ ಬಾಬಾಸಾಹೇಬರಿಗೆ ತಿಳಿದಿತ್ತು ಕೋರೇಗಾಂವ್‍ನಲ್ಲಿ ಮಹಾರ್ ಸೈನಿಕರು ಹೋರಾಡಿದ್ದು ಒಂದು ಸಾಮ್ರಾಜ್ಯದ ವಿರುದ್ಧವಲ್ಲ ವ್ಯವಸ್ಥೆಯ ವಿರುದ್ಧ, ಯಾವ ವ್ಯವಸ್ಥೆ ತಮ್ಮನ್ನು ಕೀಳಾಗಿ ಕಾಣುತ್ತಿತ್ತೋ ಪ್ರಾಣಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿತ್ತೋ ಅಂತಹ ದೌರ್ಜನ್ಯಕೋರ ಸಂಸ್ಕೃತಿಯ ವಿರುದ್ಧ ಎಂದು.

ಒಂದು ವೇಳೆ ಕೋರೇಗಾಂವ್ ಯುದ್ಧ ನಡೆಯದಿದ್ದರೆ ಪೇಶ್ವೆಗಳ ಅಟ್ಟಹಾಸ ಮತ್ತೂ ಮುಂದುವರಿದಿರುತ್ತಿತ್ತು. ಅಂದಹಾಗೆ ಅಂತಹ ಅಟ್ಟಹಾಸದ ವಾತಾವರಣದಲ್ಲಿ ಆ ಯುದ್ಧ ನಡೆದು 73 ವರ್ಷಗಳ ನಂತರ(1891) ಹುಟ್ಟಿದ ಬಾಬಾಸಾಹೇಬ್ ಅಂಬೇಡ್ಕರರು ಶಿಕ್ಷಣ ಪಡೆಯಲಾಗುತ್ತಿತ್ತೇ? ವಿದೇಶಿ ವ್ಯಾಸಂಗಕ್ಕೆ ತೆರಳಲಾಗುತ್ತಿತ್ತೆ? ಸಂವಿಧಾನ ಶಿಲ್ಪಿಯಾಗಲು ಸಾಧ್ಯವಿತ್ತೆ? ಈ ನಿಟ್ಟಿನಲ್ಲಿ ಕೋರೇಗಾಂವ್ ಯುದ್ಧ ಅಸ್ಪೃಶ್ಯರ ಹೋರಾಟದ ಇತಿಹಾಸದಲ್ಲಿ ಒಂದು ಅಪರೂಪದ ಮೈಲುಗಲ್ಲಾಗಿ ಉಳಿಯುತ್ತದೆ. ಹಾಗೆಯೇ ಸ್ಫೂರ್ತಿಯ ಸಂಕೇತವೂ ಅದಾಗುತ್ತದೆಯೆಂದರೆ ಅತಿಶಯೋಕ್ತಿಯೇನಲ್ಲ.

(ಈ ಲೇಖನ 2014 ಬಿಡುಗಡೆಯಾದ ನನ್ನ ಮೂರನೇ ಕೃತಿ “ಎದೆಗೆ ಬಿದ್ದ ಗಾಂಧಿ” ಯಲ್ಲಿ ಪ್ರಕಟವಾಗಿದೆ. – ರಹೊಬ)


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ