ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಕರ್ನಾಟಕ ಮೂಲದ ನಾಲ್ವರು ಯುವತಿಯರು ಸಾವು

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ನಡೆದ ಭೀಕರ ಅಪಘಾತದಲ್ಲಿ ಬಾಗಲಕೋಟೆ ಜಿಲ್ಲೆಯ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಬುಧವಾರ ರಾತ್ರಿ ಮಹಾರಾಷ್ಟ್ರದ ಜತ್ತ ಬಳಿಯ ನಾಗಾಸಪಾಟಾ ಖಾಸಗಿ ವೊಲ್ವೊ ಬಸ್ ಗೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಬಾಗಲಕೋಟೆಯ ನಾಲ್ವರು ಯುವತಿಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರು ಮಹಾರಾಷ್ಟ್ರದ ಶಿವಾನಿ ಅಂಬೇಕರ್ ಎಂಬುವರ ಮದುವೆಗೆ ತೆರಳುತ್ತಿದ್ದ ವೇಳೆ ಈ ದುರಂತ ನಡೆದಿದೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಕನಮಡಿ ಗ್ರಾಮದ ಅನುಸೂಯಾ ಮೋರೆ (56), ಲೋಕಾಪುರ ಗ್ರಾಮದ ನಿವೇದಿತಾ (17) ರೆಹಮತ್ ಪುರದ ಭಾಗ್ಯಶ್ರೀ ಅಂಬೇಕರ್ (18) ಹಾಗೂ ಅಡಿಹುಡಿ ಗ್ರಾಮದ ಉಜ್ವಲಾ ಸಿಂಧೆ (19) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಮೃತರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಅಡಿಹುಡಿ, ರೆಹಮತ್ ಪುರ, ಮುಧೋಳ ತಾಲ್ಲೂಕಿನ ಲೋಕಾಪುರ, ವಿಜಯಪುರ ಜಿಲ್ಲೆಯ ಕನಮಡಿ ಮೂಲದವರು ಎಂದು ತಿಳಿದು ಬಂದಿದೆ.
ಅಪಘಾತದ ತೀವ್ರತೆಗೆ ಕ್ರೂಸರ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ವಾಹನಕ್ಕೆ ಬೆಂಕಿ ಹತ್ತಿಕೊಂಡಿತ್ತು. ಸ್ಥಳದಲ್ಲಿದ್ದವರು ರಕ್ಷಣೆಗೆ ಧಾವಿಸಿದರೂ, ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth