ಮಹಿಳೆಯರನ್ನು ಪರಿಚಯ ಮಾಡಿಕೊಂಡು ಚಿನ್ನ ದೋಚುತ್ತಿದ್ದ ಆರೋಪಿ ಅರೆಸ್ಟ್!
16/09/2023
ಚಾಮರಾಜನಗರ: ಬಸ್ ನಿಲ್ದಾಣದಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ಚಿನ್ನ ಎಗರಿಸುತ್ತಿದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುಪುರ ಮೂಲದ ಸೆಲ್ವಿ(60) ಬಂಧಿತ ಆರೋಪಿ. ಬಂಧಿತಳಿಂದ 57 ಗ್ರಾಂ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಕಳೆದ ತಿಂಗಳು ಮಾದಪ್ಪನ ಬೆಟ್ಟದಲ್ಲಿ ವೃದ್ಧೆಯೊಬ್ಬರನ್ನು ಪರಿಚಯ ಮಾಡಿಕೊಂಡು ಜ್ಯೂಸ್ ಕುಡಿಸಿ ಪ್ರಜ್ಞೆ ತಪ್ಪಿಸಿ ಚಿನ್ನದ ಸರವನ್ನು ಈಕೆ ಎಗರಿಸಿದ್ದಳು.
ಇನ್ನೊಂದು ಘಟನೆಯಲ್ಲಿ ಕಿರುಗಾವಲು ಗ್ರಾಮದ ಮಹಿಳೆಯೊಬ್ಬಳು ಬಸ್ಸು ಹತ್ತುವಾಗ ಕತ್ತಿನಿಂದ ಚಿನ್ನ ಎಗರಿಸಿ ಪರಾರಿಯಾಗಿದ್ದಳು. ಇದೀಗ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ಸರ ಎಗರಿಸಲು ಹೊಂಚು ಹಾಕುತ್ತಿದ್ದಾಗ ಪೊಲೀಸರು ಸೆಲ್ವಿಯನ್ನು ಬಂಧಿಸಿದ್ದಾರೆ. ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.