ನಟಿ ಸಂಜನಾ ಗಲ್ರಾನಿಗೆ ವಂಚನೆ: ಅಪರಾಧಿಗೆ 61.50 ಲಕ್ಷ ರೂ. ದಂಡ, 6 ತಿಂಗಳು ಜೈಲು

ಬೆಂಗಳೂರು: ನಟಿ ಸಂಜನಾ ಗಲ್ರಾನಿ ಅವರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ರಾಹುಲ್ ತೋನ್ಸೆಗೆ ಬೆಂಗಳೂರಿನ ನ್ಯಾಯಾಲಯ 61.50 ಲಕ್ಷ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.
ರಾಹುಲ್ ತೋನ್ಸೆ ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋಗಳ ವ್ಯವಸ್ಥಾಪಕ ನಿರ್ದೇಶಕನಾಗಿದ್ದಾನೆ. ಈತ ಸಂಜನಾಗೆ ನಾನು ಹೇಳಿದ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ ಎಂದು ಹೇಳಿದ್ದ. ರಾಹುಲ್ ಮಾತು ಕೇಳಿ 2018–19 ರಲ್ಲಿ 45 ಲಕ್ಷ ರೂ.ಗಳನ್ನು ಸಂಜನಾ ಹೂಡಿಕೆ ಮಾಡಿದ್ದರು. ಆದರೆ ನಂತರ ಯಾವುದೇ ವ್ಯವಹಾರ ಆಗದೇ ವಂಚನೆ ಮಾಡಿದ್ದ. ನಂತರ ಹೂಡಿಕೆ ಮಾಡಿದ್ದ ಹಣವನ್ನು ಮರಳಿಸುವಂತೆ ಒತ್ತಾಯ ಮಾಡಿದರೂ ರಾಹುಲ್ ಎರಡು ಚೆಕ್ ನೀಡಿದ್ದ. ಚೆಕ್ನಿಂದಲೂ ಹಣ ವಾಪಸ್ ಆಗದ ಹಿನ್ನೆಲೆ ಸಂಜನಾ ಇಂದಿರಾನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.
ಸಂಜನಾ ಗಲ್ರಾನಿ ಅವರ ಸ್ನೇಹಿತ ಬನಶಂಕರಿ 3ನೇ ಹಂತದ ನಿವಾಸಿ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 33ನೇ ಎಸಿಜೆಎಂ ನ್ಯಾಯಾಲಯ ನ್ಯಾಯಾಧೀಶ ಪಿಎಸ್ ಸಂತೋಷ್ ಕುಮಾರ್ ಶಿಕ್ಷೆ ವಿಧಿಸಿ ಆದೇಶ ಪ್ರಕಟಿಸಿದ್ದಾರೆ.
ದಂಡದ ಮೊತ್ತದಲ್ಲಿ 10 ಸಾವಿರ ರೂ. ಕೋರ್ಟ್ ಶುಲ್ಕವನ್ನು ಕಡಿತಗೊಳಿಸಿ ಉಳಿದ 61.40 ಲಕ್ಷ ರೂ.ವನ್ನು ದೂರುದಾರೆ ಸಂಜನಾಗೆ ನೀಡಬೇಕು. ನಿಗದಿತ ಸಮಯದ ಒಳಗಡೆ ದಂಡದ ಮೊತ್ತವನ್ನು ಪಾವತಿ ಮಾಡಿದರೆ 6 ತಿಂಗಳ ಶಿಕ್ಷೆಯನ್ನು ಮಾಫಿ ಮಾಡಲಾಗುತ್ತದೆ. ಇಲ್ಲವಾದರೆ 6 ತಿಂಗಳು ಜೈಲು ಮತ್ತು ದಂಡವನ್ನು ಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: