ಮಂಗಳೂರು ವಿಮಾನ ನಿಲ್ದಾಣ ಇನ್ನಿಲ್ಲ! | ಅದಾನಿ ತೆಕ್ಕೆ ಸೇರಿಕೊಂಡ ವಿಮಾನ ನಿಲ್ದಾಣ
ಮಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ದೇಶದ ಎಲ್ಲ ಸೊತ್ತುಗಳೂ ಅಂಬಾನಿ –ಅದಾನಿ ತೆಕ್ಕೆಗೆ ಹೋಗುತ್ತಿದೆ. ಮಂಗಳೂರಿಗರು ಗರ್ವದಿಂದ ಹೇಳುತ್ತಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇನ್ನಿಲ್ಲವಾಗಿದ್ದು, ಖಾಸಗಿ ಸೊತ್ತಾಗಿ ಮಾರ್ಪಾಡಾಗಿದೆ.
ಹೌದು..! ಅಂತಾರಾಷ್ಟ್ರೀಯ ಮಂಗಳೂರು ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯ ಭಾಗವಾಗಿ ವಿಮಾನ ನಿಲ್ದಾಣದ ನಿರ್ವಹಣೆಗಾಗಿ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಈ ಹಸ್ತಾಂತರ ಪ್ರಕ್ರಿಯೆ ನಡೆದಿರುವುದು ಯಾವಾಗ ಗೊತ್ತಾ? ನಿನ್ನೆ ಮಧ್ಯರಾತ್ರಿ 12 ಗಂಟೆಗೆ.
ಈ ಹಸ್ತಾಂತರ ಪ್ರಕ್ರಿಯೆ ಮುಗಿದ ಬಳಿಕ ಮಂಗಳೂರು ವಿಮಾನ ನಿಲ್ದಾಣವು ಅದಾನಿ ಏರ್ ಪೋರ್ಟ್ ಆಗಿ ಬದಲಾಗಿದ್ದು, ವಿಮಾನ ಹಾರಾಟ ಹೊರತುಪಡಿಸಿ ಉಳಿದೆಲ್ಲಾ ನಿರ್ವಹಣೆ ಅದಾನಿ ಸಮೂಹ ಸಂಸ್ಥೆಯ ಪಾಲಾಗಿದೆ.
ಅದಾನಿ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣವನ್ನು 50 ವರ್ಷಗಳ ಕಾಲ ಲೀಸ್ ಗೆ ನೀಡಲಾಗಿದೆ. ಒಂದು ವರ್ಷ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಅದಾನಿ ಸಂಸ್ಥೆ ಜೊತೆಯಾಗಿ ಕಾರ್ಯನಿರ್ವಹಿಸಲಿದೆ.
ಅಂತೂ ಮಂಗಳೂರು ಮೂಲದ ಬ್ಯಾಂಕ್ ಗಳನ್ನು ಉತ್ತರ ಭಾರತದ ಖಾಸಗಿ ವ್ಯಕ್ತಿಗಳ ನಷ್ಟಗೊಳಗಾದ ಬ್ಯಾಂಕ್ ಗಳ ಜೊತೆಗೆ ವಿಲೀನ ಮಾಡಿ ಆಗಿದೆ, ಈಗ ವಿಮಾನ ನಿಲ್ದಾಣವೂ ಹೋಗಿದೆ ಎನ್ನುವ ನೋವಿನ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ವಿಮಾನ ನಿಲ್ದಾಣ ನಿರ್ವಹಣೆ ಚೆನ್ನಾಗಿಯೇ ನಡೆಯುತ್ತಿದ್ದರೂ ಖಾಸಗಿಯವರಿಗೆ ಯಾಕೆ ನೀಡಲಾಗಿದೆ? ಇಡೀ ಭಾರತವನ್ನು ಕೇವಲ ಇಬ್ಬರು ಉದ್ಯಮಿಗಳಿಗೆ ಲೀಸ್ ಗೆ ಕೇಂದ್ರ ಸರ್ಕಾರ ನೀಡುತ್ತಿದೆಯೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.