ಸರ್ಕಾರಿ ಅಧಿಕಾರಿಗಳಿಗೆ ಕ್ಯಾಮರಾದ ಭಯವೇಕೆ?: ಪ್ರಾಮಾಣಿಕತೆ ಇದ್ದರೆ ಭಯ ಇರಲ್ಲ!
ಬೆಂಗಳೂರು: ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ಗಳಲ್ಲಿ ವಿಡಿಯೋ ತೆಗೆಯುವುದನ್ನು ನಿಷೇಧಿಸುವ ಸರ್ಕಾರದ ಆದೇಶವನ್ನು ರದ್ದುಗೊಳಿಸಲಾಗಿದ್ದರೂ, ಅನೇಕ ಚರ್ಚೆಗಳಿಗೆ ಕಾರಣವಾಗಿದ್ದು, ಸರ್ಕಾರ ಅಧಿಕಾರಿ ಸ್ನೇಹಿಯೋ, ಜನ ಸ್ನೇಹಿಯೋ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ದರ್ಪ, ದಬ್ಬಾಳಿಕೆ, ಲಂಚಾವತಾಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದು, ಇದರಿಂದಾಗಿ ಹಲವಾರು ಅಧಿಕಾರಿಗಳು ಸಿಕ್ಕಿ ಬಿದ್ದಿದ್ದಾರೆ. ಹಲವರ ಅಮಾನತು ಕೂಡ ಆಗಿವೆ. ಇದೇ ಕಾರಣಕ್ಕೆ ಅಧಿಕಾರಿಗಳು ಸರ್ಕಾರಿ ಕಚೇರಿಗಳಲ್ಲಿ ಮೊಬೈಲ್ ನಲ್ಲಿ ಚಿತ್ರೀಕರಿಸುವಂತಿಲ್ಲ ಎನ್ನುವ ನಿಯಮವನ್ನು ಹೇರಿದೆ. ಈ ಆದೇಶವನ್ನು ಹೊರಡಿಸಿದ್ದು ಯಾಕೆ ಎನ್ನುವುದರ ಹಿಂದಿನ ಕಾರಣ ಬಯಲಾಗಬೇಕು ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಸರ್ಕಾರ ಆದೇಶವನ್ನು ಹೊರಡಿಸಿ ತಡ ರಾತ್ರಿ ವಾಪಸ್ ಪಡೆದುಕೊಂಡಿದೆ. ಈ ಆದೇಶವನ್ನು ಹೊರಡಿಸಿದ್ದರ ಹಿಂದಿನ ಉದ್ದೇಶ ಏನು? ಒಂದು ಜವಾಬ್ದಾರಿಯುತ ಸರ್ಕಾರ, ಒಂದು ಆದೇಶವನ್ನು ಹೊರಡಿಸುವ ಮೊದಲು ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸದೇ ಏಕಾಏಕಿ ಆದೇಶ ಹೊರಡಿಸುವುದು ಹೇಗೆ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಸರ್ಕಾರಿ ಅಧಿಕಾರಿಗಳಿಗೆ ಸರ್ಕಾರದಿಂದ ಎಲ್ಲ ಸೌಲಭ್ಯಗಳು ಸಿಗುತ್ತಿವೆ. ಉತ್ತಮ ವೇತನವಿದ್ದರೂ, ಕೆಲವು ನೌಕರರು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಉದಾಸೀನ ತೋರುತ್ತಿರುವ ಬಗ್ಗೆ ರಾಜ್ಯದ ವಿವಿಧೆಡೆಗಳಲ್ಲಿ ವರದಿಯಾಗುತ್ತಿವೆ. ಕೈ ತುಂಬಾ ಸಂಬಳವಿದ್ದರು, ಲಂಚಕ್ಕೆ ಕೈಯೊಡ್ಡುವ ನಾಚಿಗೆಟ್ಟವರು ಕೂಡ ಇದ್ದಾರೆ. ಇಂತಹವರನ್ನು ಬಯಲಿಗೆಳೆಯ ಬೇಕಾದರೆ, ಪಾರದರ್ಶಕವಾದ ವ್ಯವಸ್ಥೆ ಸರ್ಕಾರಿ ಕಚೇರಿಗಳಲ್ಲಿರಬೇಕು. ಆದರೆ, ಸರ್ಕಾರ ಇಂತಹವರ ಪರವಾಗಿ ನಿಂತು ಆದೇಶ ಹೊರಡಿಸಿದ್ದು ಎಷ್ಟು ಸರಿ? ಎನ್ನುವಂತಾಗಿದೆ. ಇಂತಹದ್ದೊಂದು ಆದೇಶ ಹೊರಡಿಸಲು ಸರ್ಕಾರಕ್ಕೆ ಮನವಿ ಮಾಡಿದವರನ್ನು ವಿಚಾರಣೆ ನಡೆಸುವ ಅಗತ್ಯವಿದೆ. ಅವರ ಉದ್ದೇಶ ಅರಿಯುವ ಅಗತ್ಯವಿದೆ. ಪ್ರಾಮಾಣಿಕವಾಗಿ ಕರ್ತವ್ಯ ಸಲ್ಲಿಸುವ ಅಧಿಕಾರಿಗಳಿಗೆ ಮೊಬೈಲ್ ಕ್ಯಾಮರಗಳ ಭಯ ಇರದು ಎಂದು ವ್ಯಾಪಕ ಚರ್ಚೆಯಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka