15 ವರ್ಷದ ಆದಿವಾಸಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ರಾಂಚಿ: 15 ವರ್ಷದ ಆದಿವಾಸಿ ಬಾಲಕಿಯನ್ನುಐವರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಘಟನೆ ಜಾರ್ಖಂಡ್ ನ ಖುಂಟಿ ಜಿಲ್ಲೆಯಲ್ಲಿ ನಡೆದಿದ್ದು, ಜಾತ್ರೆಗೆ ತೆರಳುತ್ತಿದ್ದ ವೇಳೆ ನಡು ದಾರಿಯಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿಯು ತನ್ನ ಹಳ್ಳಿಯಿಂದ ಸೋಮವಾರ ರಾತ್ರಿ 9:30ರ ವೇಳೆಗೆ ಜಾತ್ರೆಗೆ ತೆರಳಿದ್ದು, ಈ ವೇಳೆ ತನ್ನ ಸ್ನೇಹಿತೆ ಹಾಗೂ ಇತರ ನಾಲ್ಕು ಗಂಡು ಮಕ್ಕಳು ಜೊತೆಗಿದ್ದರು. ಈ ವೇಳೆ ಏಕಾಏಕಿ ಐವರ ತಂಡ ಇವರ ಮೇಲೆ ದಾಳಿ ನಡೆಸಿದ್ದು, ಹುಡುಗರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜೊತೆಗಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಿ ತಪ್ಪಿಸಿಕೊಂಡಿದ್ದಾರೆ. ಈ 15 ವರ್ಷದ ಬಾಲಕಿ ದುಷ್ಕರ್ಮಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.
ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಇತರರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಲಕಿಯನ್ನು ರಕ್ಷಿಸಲು ಮುಂಜಾನೆ 12:30ರ ಸುಮಾರಿಗೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ, ಆರೋಪಿಗಳ ಬಂಧನ ಅಥವಾ ಪತ್ತೆ ಪೊಲೀಸರಿಂದ ಸಾಧ್ಯವಾಗಿಲ್ಲ.
ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ವಿವಿಧ ಮಕ್ಕಳ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಯನ್ನು ಪ್ರತಿಪಕ್ಷಗಳು ತೀವ್ರ ವಿರೋಧಿಸಿದ್ದು, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿವೆ.