ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ

19/08/2023
ಕೇರಳದ ಕಣ್ಣೂರು ಜಿಲ್ಲೆಯ ಕಣಿಚಾರ್ ಪ್ರದೇಶದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಎರಡು ಫಾರ್ಮ್ ಗಳಲ್ಲಿರುವ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಮಲೆಯಂಪಾಡಿಯಲ್ಲಿರುವ ಖಾಸಗಿ ಫಾರ್ಮ್ ಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿರುವುದನ್ನು ಜಿಲ್ಲಾ ಪಶುಸಂಗೋಪನಾ ಅಧಿಕಾರಿಗಳು ದೃಢಪಡಿಸಿದ ಬೆನ್ನಲ್ಲೇ ಜಿಲ್ಲಾಧಿಕಾರಿ ಈ ಸೂಚನೆ ನೀಡಿದ್ದಾರೆ.
ಇನ್ನೂ ಈ ಪ್ರದೇಶದಿಂದ ಸುಮಾರು 10 ಕಿ.ಮೀ. ವ್ಯಾಪ್ತಿಯಲ್ಲಿರುವ ಇನ್ನೊಂದು ಫಾರ್ಮ್ ನಲ್ಲಿರುವ ಹಂದಿಗಳನ್ನೂ ಕೊಲ್ಲಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ತಾನು ಶಿಷ್ಟಾಚಾರದ ನಿಯಮದಂತೆ ಈ ಸೂಚನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.
ಈ ಪ್ರದೇಶಗಳಲ್ಲಿ ಹಂದಿ ಮಾರಾಟ ಹಾಗೂ ಸಾಗಾಟವನ್ನು ಮೂರು ತಿಂಗಳ ಕಾಲ ನಿಷೇಧ ಮಾಡಲಾಗಿದ್ದು, ಫಾರ್ಮ್ ನಲ್ಲಿ ಸೋಂಕಿಗೊಳಗಾಗಿರುವ ಹಂದಿಗಳನ್ನು ಮಾರಾಟ ಮಾಡಲಾಗಿದೆಯೇ ಎಂದು ಶೀಘ್ರವೇ ವರದಿ ನೀಡಲು ಅವರು ಸೂಚನೆ ನೀಡಿದ್ದಾರೆ.