ಆಕ್ಸಿಜನ್ ಸಿಲಿಂಡರ್ ಎಂದು ಅಗ್ನಿಶಾಮಕದಳದ ಸಿಲಿಂಡರ್ ಮಾರಾಟ ಮಾಡಿದ ಪಾಪಿಗಳು!
ನವದೆಹಲಿ: ಜನರು ಒಂದೆಡೆ ಕೊರೊನಾದಿಂದ ಸಾವನ್ನಪ್ಪುತ್ತಿದ್ದರೆ, ಇನ್ನೊಂದೆಡೆ ಹಣಕ್ಕಾಗಿ ಜನರ ಜೀವದ ಜೊತೆಗೆ ಆಟವಾಡುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲೊಬ್ಬರು ಮಹಿಳೆಗೆ ಆಕ್ಸಿಜನ್ ಸಿಲಿಂಡರ್ ಎಂದು ನಂಬಿಸಿ ಅಗ್ನಿಶಾಮಕದ ಸಿಲಿಂಡರ್ ಮಾರಾಟ ಮಾಡಿರುವ ಘಟನೆ ನಡೆದಿದ್ದು, ಜನರ ಹೆಣ ಬಿದ್ದರೂ ಸರಿ, ಹಣ ಮಾಡಬೇಕು ಎನ್ನುವ ದಂಧೆ ದೇಶಾದ್ಯಂತ ಎಗ್ಗಿಲ್ಲದೇ ನಡೆಯುತ್ತಿದೆ.
ದೆಹಲಿಯ ಉತ್ತಮ್ ನಗರ್ ಪ್ರದೇಶದಲ್ಲಿ ಗೀತಾ ಅರೋರಾ ಎಂಬ ಮಹಿಳೆಯ ಸಂಬಂಧಿಕರೊಬ್ಬರಿಗೆ ಕೊವಿಡ್ ಸೋಂಕು ಕಾಣಿಸಿಕೊಂಡಿತ್ತು. ಹಾಗಾಗಿ ಅವರು ಆಮ್ಲಜನ ಸಿಲಿಂಡರ್ ಗೆ ಹುಡುಕಾಡುತ್ತಿದ್ದಾಗ, ಆರೋಪಿಗಳಿಬ್ಬರು ಆಕ್ಸಿಜನ್ ಸಿಲಿಂಡರ್ ಎಂದು ನಂಬಿಸಿ ಅಗ್ನಿಶಾಮಕದ ಸಿಲಿಂಡರ್ ಗಳನ್ನು ಮಾರಾಟ ಮಾಡಿದ್ದಾರೆ. ಆಕ್ಸಿಜನ್ ಸಿಲಿಂಡರ್ ಹಾಗೂ ಅಗ್ನಿಶಾಮಕದ ಸಿಲಿಂಡರ್ ಗೆ ವ್ಯತ್ಯಾಸ ತಿಳಿಯದ ಮಹಿಳೆ ಈ ಸಿಲಿಂಡರ್ ಪಡೆದುಕೊಂಡು ಹೋಗಿದ್ದಾರೆ.
ಆದರೆ ಮನೆಗೆ ಹೋಗಿ ನೋಡಿದಾಗ ಅದು ಆಕ್ಸಿಜನ್ ಸಿಲಿಂಡರ್ ಅಲ್ಲ ಎನ್ನುವುದು ತಿಳಿದು ಬಂದಿದ್ದು, ಹೀಗಾಗಿ ಮಹಿಳೆ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು, ಸಂತ್ರಸ್ತೆ ನೀಡಿರುವ ಮಾಹಿತಿಗಳ ಆಧಾರದಲ್ಲಿ ವಿಕಾಸ್ ಪುರಿ ನಿವಾಸಿಗಳಾದ ಅಶುತೋಷ್ ಮತ್ತು ಆಯುಷ್ ಎಂಬವರನ್ನು ಬಂಧಿಸಿದ್ದಾರೆ. ಜೊತೆಗೆ 5 ಅಗ್ನಿಶಾಮಕ ದಳದ ಸಿಲಿಂಡರ್ ವಶಪಡಿಸಿಕೊಂಡಿದ್ದಾರೆ.