2 ಲಕ್ಷ ಲಂಚ ಪಡೆದು ಸಿಕ್ಕಿ ಬಿದ್ದ ಕೃಷಿ ಅಧಿಕಾರಿಯ ಬ್ಯಾಗ್ ನಲ್ಲಿತ್ತು 13 ಲಕ್ಷ ರೂ.!

shankharaiah
06/04/2025

ಚಿಕ್ಕಬಳ್ಳಾಪುರ: ಗುತ್ತಿಗೆದಾರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಕೃಷಿ ಅಧಿಕಾರಿಯೊಬ್ಬ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ  ನಗರದ ಹೊರವಲಯದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಹಾಯಕ ಕೃಷಿ ಇಲಾಖೆಯ ಕಚೇರಿಯಲ್ಲಿ ಕೃಷಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಶಂಕರಯ್ಯ ಎಂಬಾತ ಲೋಕಾಯುಕ್ತರ  ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾನೆ.

ಗುತ್ತಿಗೆದಾರನಿಗೆ ಬಿಲ್ ಪಾವತಿ ಮಾಡಲು ಕೃಷಿ ಅಧಿಕಾರಿ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಲಂಚ ಕೊಡಲು ಸಾಧ್ಯವಾಗದ ಗುತ್ತಿಗೆದಾರ ವಿಚಾರವನ್ನು ಲೋಕಾಯುಕ್ತ ಪೊಲೀಸರ ಗಮನಕ್ಕೆ ತಂದಿದ್ದಾರೆ.

ಶನಿವಾರ ಮಧ್ಯಾಹ್ನ 2 ಲಕ್ಷ ರೂ.ಗಳನ್ನು ಕೃಷಿ ಅಧಿಕಾರಿ ಶಂಕರಯ್ಯನಿಗೆ ನೀಡುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಆ್ಯಂಟೋನಿ ಜಾನ್, ಡಿವೈಎಸ್ ಪಿ ವೀರೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗುರು, ಲಿಂಗರಾಜ್, ಸಂತೋಷ್, ನಾಗರಾಜ್, ರಮೇಶ್ ಮತ್ತಿತರರು ಭಾಗಿಯಾಗಿದ್ದರು.

ಇನ್ನೂ ಗುತ್ತಿಗೆದಾರನಿಂದ ಲಂಚ ಪಡೆದ ಅಧಿಕಾರಿಯ ಬ್ಯಾಗ್ ನಲ್ಲಿ ಸುಮಾರು 13 ಲಕ್ಷ ರೂ. ನಗದು ಪತ್ತೆಯಾಗಿದೆ. ಈ ಹಣವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version