ಅನ್ಯಾಯ… ಮಹಾ ಅನ್ಯಾಯ! | ಲಾಕ್ ಡೌನ್ ವೇಳೆ ಬಡವರಿಗೆ ನೀಡಿದ್ದ ಆಹಾರ ಕಿಟ್ ದೇವಸ್ಥಾನದಲ್ಲಿ ಅಕ್ರಮ ದಾಸ್ತಾನು   - Mahanayaka
11:27 AM Wednesday 11 - December 2024

ಅನ್ಯಾಯ… ಮಹಾ ಅನ್ಯಾಯ! | ಲಾಕ್ ಡೌನ್ ವೇಳೆ ಬಡವರಿಗೆ ನೀಡಿದ್ದ ಆಹಾರ ಕಿಟ್ ದೇವಸ್ಥಾನದಲ್ಲಿ ಅಕ್ರಮ ದಾಸ್ತಾನು  

11/02/2021

ಬೆಂಗಳೂರು: ಕೊರೊನಾ ಕಾಲದಲ್ಲಿ ಬಡವರಿಗೆ ನೀಡಲು ಸರ್ಕಾರ ನೀಡಿದ್ದ ದಿನಸಿ ಕಿಟ್ ಗಳನ್ನು ದೇವಸ್ಥಾನದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿರುವ ಘಟನೆ ವರದಿಯಾಗಿದ್ದು,  ಕೊಡಿಗೆಹಳ್ಳಿಯ ಗುಂಡಾಂಜನೇಯ ದೇವಸ್ಥಾನದ ಆವರಣದಲ್ಲಿ 8 ಸಾವಿರ ದಿನಸಿ ಕಿಟ್ ಗಳು  ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದೆ.

ಕೊವಿಡ್ ಸಮಯದಲ್ಲಿ ಬಡವರಿಗೆ ತಲುಪಬೇಕಾದ ರೇಷನ್ ಕಿಟ್ ಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ. ಯಲಹಂಕ ಮತ್ತು ಕೊಡಿಗೆ ಹಳ್ಳಿಯ ಬಿಬಿಎಂಪಿ ಅಧಿಕಾರಿಗಳು, ತಮ್ಮ ವ್ಯಾಪ್ತಿಯ ಜನರಿಗೆ ನೀಡಬೇಕಾಗಿದ್ದ ಕಿಟ್ ಗಳನ್ನು ನೀಡದೇ ದೇವಸ್ಥಾನದ ಆವರಣದಲ್ಲಿ ಅಕ್ರಮ ದಾಸ್ತಾನು ಇರಿಸಿದ್ದಾರೆ ಎಂದು ತಿಳಿದು ಬಂದಿದೆ.

8 ಸಾವಿರ ಕಿಟ್ ಗಳ ಪೈಕಿ 4-5 ಸಾವಿರ ಕಿಟ್ ಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ.  ಈ ಕಿಟ್ ನಲ್ಲಿ ಅಡುಗೆ ಎಣ್ಣೆ,  ಮಸಾಲಾ, ಹಿಟ್ಟು, ಸಕ್ಕರೆ ಪ್ಯಾಕೆಟ್ ಗಳಿವೆ. 8 ತಿಂಗಳಿನಿಂದ ಈ ವಸ್ತುಗಳು ಇಲ್ಲಿ ದಾಸ್ತಾನ ಮಾಡಲಾಗಿದೆ. ಈಗಾಗಲೇ ಇದರ ಅವಧಿ ಮುಗಿದು ಹೋಗಿದ್ದು, ಇಲಿ ಹೆಗ್ಗಣಗಳು ತಿಂದು ಹುಳಗಳು ಸೇರಿಕೊಂಡಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇಲಿ ಹೆಗ್ಗಣಗಳು ತಿಂದರೂ ಸರಿ, ಬಡವರಿಗೆ ಈ ಆಹಾರವನ್ನು ತಲುಪಿಸುವುದಿಲ್ಲ ಎನ್ನುವ ಮನಸ್ಥಿತಿಗಳ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕು. ಈ ವಿಚಾರವನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿ, ಸಂಬಂಧಪಟ್ಟವರ ಮೇಲೆ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ವ್ಯಾಪಕ ಒತ್ತಾಯ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ