3 ನೂತನ ಉಪ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆ: ಸಚಿವರಿಗೆ ಖಡಕ್ ವಾರ್ನಿಂಗ್ ನೀಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮೂರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಗೆ ಹಲವು ಸಚಿವರು ಸರ್ಕಸ್ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಪ ಮುಖ್ಯಮಂತ್ರಿ ಚರ್ಚೆ ಹುಟ್ಟು ಹಾಕಿರುವ ಸಚಿವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಗುರುವಾರ ನಡೆದ ಕರ್ನಾಟಕ ಹಾಗೂ ತೆಲಂಗಾಣದ ಕಾಂಗ್ರೆಸ್ ಸರ್ಕಾರ ಸಚಿವರ ಸಭೆಯಲ್ಲಿ ಖರ್ಗೆ ಈ ಎಚ್ಚರಿಕೆ ನೀಡಿದ್ದು, ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರದಲ್ಲಿ ಯಾವೊಬ್ಬ ಸಚಿವರೂ ಇನ್ನು ಮುಂದೆ ಬಹಿರಂಗ ಹೇಳಿಕೆ ನೀಡಬಾರದು ಎಂದು ಹೇಳಿದ್ದಾರೆ.
ಕಳೆದ ನಾಲ್ಕೈದು ತಿಂಗಳುಗಳಿಂದ ಕರ್ನಾಟಕದಲ್ಲಿ ಕೆಲವು ಸಚಿವರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ವಿಚಾರದಲ್ಲಿ ಅನಗತ್ಯ ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದರಿಂದ ಪಕ್ಷ ಹಾಗೂ ಸರಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಈ ರೀತಿಯ ಸೂಕ್ಷ್ಮ ವಿಚಾರಗಳನ್ನು ಎಲ್ಲಿ ಚರ್ಚಿಸಬೇಕು, ಯಾರೊಂದಿಗೆ ಚರ್ಚಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸೂಕ್ತ. ಈ ವಿಷಯದಲ್ಲಿ ಹೈಕಮಾಂಡ್ ಈಗಾಗಲೇ ತನ್ನ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಿದ ಬಳಿಕವೂ ಒಂದಿಬ್ಬರು ಮತ್ತೆ ಅದೇ ವಿಷಯಗಳನ್ನು ಕೆಣಕುವ ಮೂಲಕ ಗೊಂದಲದ ವಾತಾವರಣ ಮುಂದುವರಿಸಲು ಪ್ರಯತ್ನಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಸಚಿವರೂ ನಿಮಗೆ ಕೊಟ್ಟ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಬದಲು ಡಿಸಿಎಂ ಹುದ್ದೆ ವಿಚಾರದಲ್ಲಿ ಬಹಿರಂಗ ಹೇಳಿಕೆ ನೀಡಿ ಪಕ್ಷದೊಳಗೆ ಗೊಂದಲದ ವಾತಾ ವರಣ ನಿರ್ಮಿಸುವುದು ಸರಿಯಲ್ಲ, ಜವಾಬ್ದಾರಿ ಅರಿತು ನಡೆದುಕೊಳ್ಳುವಂತೆ ಖರ್ಗೆ, ಸಚಿವರಿಗೆ ಚಾಟಿ ಬೀಸಿದರು.