ಸೂಕ್ತ ಕಾಲದಲ್ಲಿ ಎಐಸಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ: ಸಿಎಂ ಆಗುವ ಬಗ್ಗೆ ಡಿಕೆಶಿ ಹೇಳಿದ್ದೇನು?

d k shivakumar
03/06/2023

ಚುನಾವಣೆಯಲ್ಲಿ ಈ ಕ್ಷೇತ್ರದ ಜನ ಕೇವಲ ಡಿ.ಕೆ. ಶಿವಕುಮಾರ್ ಗೆ ಗೆಲುವು ಕೊಟ್ಟಿಲ್ಲ. ರಾಜ್ಯಕ್ಕೆ, ದೇಶಕ್ಕೆ ಹಾಗೂ ಎಲ್ಲ ಪಕ್ಷಗಳಿಗೆ ಒಂದು ಸಂದೇಶ ಕೊಟ್ಟಿದ್ದಾರೆ. ಹೀಗಾಗಿ ಕ್ಷೇತ್ರದ ಮಹಾಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕನಕಪುರಕ್ಷೇತ್ರದ ಕಲ್ಲಹಳ್ಳಿ, ಶಿವನಹಳ್ಳಿ, ಹಾರೋಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನನ್ನು ಮುಖ್ಯಮಂತ್ರಿ ಮಾಡಲು ನೀವು ಬಹಳ ಆಸೆಯಿಂದ ಕೆಲಸ ಮಾಡಿದ್ದಿರಿ. ನೀವು ಆತಂಕ, ನಿರಾಸೆಪಡುವ ಅಗತ್ಯವಿಲ್ಲ. ಸೂಕ್ತ ಕಾಲದಲ್ಲಿ ಎಐಸಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ನಾವು ಶಾಂತಿಯಿಂದ, ಶ್ರದ್ಧೆಯಿಂದ ಕೆಲಸ ಮಾಡಬೇಕಿದೆ ಎಂದರು.

ಈಗ ನಾನು, ಸಿದ್ದರಾಮಯ್ಯ, ಸಚಿವ ಸಂಪುಟ ಸಚಿವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕಿದೆ. ನಾನು ಸಿದ್ದರಾಮಯ್ಯನವರು ನಾಡ ದೇವತೆ ಚಾಮುಂಡೇಶ್ವರಿ ಸನ್ನಿದಿಯಲ್ಲಿ ಪ್ರಾರ್ಥನೆ ಮಾಡಿ ನಾವು ಕೊಟ್ಟಿರುವ ಮಾತು ಉಳಿಸಿಕೊಳ್ಳುವ ಹಾಗೂ ಗ್ಯಾರಂಟಿ ಯೋಜನೆ ಜಾರಿ ಮಾಡಲು ಸಾಮರ್ಥ್ಯ ಕೊಡುವಂತೆ ಕೇಳಿಕೊಂಡಿದ್ದೆವು ಎಂದರು.

ಈ ಚುನಾವಣೆಯಲ್ಲಿ ನಾನು ಹೆಚ್ಚು ಪ್ರಚಾರ ಮಾಡದೇ ಇದ್ದರೂ ನಿಮಗೆ ನೀವೇ ಅಭ್ಯರ್ಥಿಯಾಗಿ ಮತ ನೀಡಿದ್ದೀರಿ. 1,23,000 ಮತಗಳ ಅಂತರದ ದಾಖಲೆಯ ಜಯ ತಂದುಕೊಟ್ಟಿದ್ದೀರಿ. ಆಮೂಲಕ ನನ್ನನ್ನು ಮಗ, ಸೋದರನಂತೆ ಹರಸಿ ಬೆಳೆಸಿದ್ದೀರಿ ಎಂದರು.

ನೀವು ನನಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ಬಂದರೂ ನಿಮ್ಮನ್ನು ಭೇಟಿ ಮಾಡಲು ಆಗಿರಲಿಲ್ಲ. ಹೀಗಾಗಿ ನಾನೇ ನಿಮ್ಮನ್ನು ಭೇಟಿ ಮಾಡಿ ಕೃತಜ್ಞತೆ ತಿಳಿಸಲು ಬಂದಿದ್ದೇನೆ. ನಾನು ಇಂದು ಉಪಮುಖ್ಯಮಂತ್ರಿಯಾಗಿದ್ದರೂ ಇಂದು ನಿಮ್ಮಲ್ಲಿ ಒಬ್ಬನಾಗಿ, ನಿಮ್ಮಂತೆಯೇ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ. ಅಧಿಕಾರದ ಮದ ನನ್ನ ತಲೆಗೆ ಏರುವುದಿಲ್ಲ ಎಂದರು.

ನಿಮ್ಮ ಋಣ ತೀರಿಸಿ, ನಿಮ್ಮ ಸೇವೆ ಯಾವ ರೀತಿ ಮಾಡಬೇಕು ಎಂದು ಅನೇಕ ನಾಯಕರಿಂದ ಸಲಹೆ ಪಡೆಯುತ್ತಿದ್ದೇನೆ. ಕನಕಪುರ ಕ್ಷೇತ್ರದ ಅಭಿವೃದ್ಧಿ ಹಾಗೂ ಮಾದರಿ ಕ್ಷೇತ್ರ ಮಾಡಲು ತೀರ್ಮಾನಿಸಿದ್ದೇನೆ. ಈ ಹಿಂದೆ ಈ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು ಆದರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ರದ್ದು ಮಾಡಿ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು. ನನ್ನ ತಾಲೂಕಿನಲ್ಲಿ ಆಸ್ಪತ್ರೆ ನೀಡುವುದು ಈ ಕ್ಷೇತ್ರಕ್ಕೆ ನನ್ನ ಮೊದಲ ಕಾರ್ಯಕ್ರಮ. ಇಲ್ಲಿನ ಜನ ವಿದ್ಯೆ ಹಾಗೂ ಆರೋಗ್ಯ ಸೌಲಭ್ಯಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುವುದು ನನ್ನ ಗುರಿ ಎಂದರು.

ಕನಕಪುರ ರಸ್ತೆ ಅಭಿವೃದ್ದಿಗೆ ನಾನು ಹಾಗೂ ಸುರೇಶ್ ಅವರು ಗುತ್ತಿಗೆದಾರರನ್ನು ಭೇಟಿ ಮಾಡಿ ಈ ಕಾಮಗಾರಿ ಮುಕ್ತಾಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಾನು ಈ ಕ್ಷೇತ್ರದ ಎಲ್ಲಾ ಜನರ ಜೇಬಿಗೆ ಹಣ ಹಾಕಲು ಸಾಧ್ಯವಿಲ್ಲ. ಆದರೆ ನಿಮ್ಮ ಆಸ್ತಿ ಮೌಲ್ಯ ಹೆಚ್ಚಾಗುವಂತೆ ಮಾಡುತ್ತೇನೆ. ಕೆರೆ ತುಂಬಿಸಲು ಆದ್ಯತೆ ನೀಡಲಾಗಿದೆ. ಕಳೆದ ಬಾರಿ ಕೆರೆ ತುಂಬಿಸಿ ಬತ್ತಿಹೋಗಿದ್ದ ಕೊಳವೆ ಬಾವಿಗೆ ಮರು ಜೀವ ನೀಡಲಾಗಿದೆ. ರೇಷ್ಮೇ, ಹೈನುಗಾರಿಕೆ, ತೋಟಗಾರಿಕೆಯಲ್ಲಿ ಆರ್ಥಿಕ ಶಕ್ತಿ ನೀಡಲು ಪ್ರಯತ್ನ ಮಾಡಿದ್ದೇವೆ ಎಂದರು.

ಮುಂದಿನ ದಿನಗಳಲ್ಲಿ ಕನಕಪುರ ಹಾಗೂ ರಾಮನಗರ ಜಿಲ್ಲೆಗೆ ಪ್ರತಿ ವಾರ ಒಂದು ದಿನ ಮೀಸಲಿಡುತ್ತೇನೆ. ಇಲ್ಲಿ ಪ್ರತ್ಯೇಕ ಕಚೇರಿ ಆರಂಭಿಸುತ್ತೇನೆ. ನಾನು ನಿಮ್ಮನ್ನು ಭೇಟಿ ಮಾಡಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಡಿಕೆಶಿ ಹೇಳಿದ್ರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version