ಕಾರಿಗೆ ಐರಾವತ ಬಸ್ ಡಿಕ್ಕಿ: ಅಂತ್ಯಕ್ರಿಯೆಗೆಂದು ತೆರಳುತ್ತಿದ್ದ ಒಂದೇ ಕುಟುಂಬದ ನಾಲ್ವರು ಸಾವು

ಮಂಡ್ಯ: ಕಾರಿಗೆ ಐರಾವತ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಜೆ.ಪಿ.ನಗರದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು–ಮೈಸೂರು ಎಕ್ಸ್ ಪ್ರೆಸ್ ಹೈವೇನಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಬಳಿಯ ಹೈವೇ ಎಕ್ಸಿಟ್ ನಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಸತ್ಯಾನಂದ ರಾಜೇ ಆರಸ್ (51) ಅವರ ಪತ್ನಿ ನಿಶ್ಚಿತಾ (45), ಚಂದ್ರು(62) ಅವರ ಪತ್ನಿ ಸುವೇದಿನಿ ರಾಣಿ(50) ಎಂಬವರು ಮೃತಪಟ್ಟಿದ್ದಾರೆ.
ಎಕ್ಸ್ ಪ್ರೆಸ್ ಹೈವೇಯಿಂದ ಎಕ್ಸಿಟ್ ಆಗುವಾಗ ಕಾರು ಚಾಲಕನಿಗೆ ಗೊಂದಲವಾಗಿದೆ. ಹೀಗಾಗಿ ಮತ್ತೆ ಎಕ್ಸ್ ಪ್ರೆಸ್ ಹೈವೇಗೆ ಚಾಲಕ ಕಾರು ತಿರುಗಿಸಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೆಎಸ್ ಆರ್ ಟಿಸಿ ಐರಾವತ ಬಸ್ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಪಂಚ್ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಡಿಐಜಿ ಬೋರಲಿಂಗಯ್ಯ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಅಂತ್ಯಕ್ರಿಯೆಗೆ ತೆರಳುತ್ತಿದ್ದರು:
ಸತ್ಯಾನಂದರಾಜೇ ಅರಸ್ ಅವರ ಮಾವ ತೀರಿ ಹೋಗಿದ್ದರು. ಈ ಹಿನ್ನೆಲೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಕಾರಿನಲ್ಲಿದ್ದವರು ಪಿರಿಯಾಪಟ್ಟಣ ತಾಲೂಕಿನ ಸಿಗೂರು ಗ್ರಾಮಕ್ಕೆ ತೆರಳುತ್ತಿದ್ದ ವೇಲೆ ಈ ದುರ್ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7