ಉಜಿರೆ: ಅಜ್ಜನ ಜೊತೆಗೆ ಮಾತನಾಡಿದ ಅನುಭವ್ | ಅಪಹರಣ ಹೇಗೆ ನಡೆಯಿತು ಎಂದು ಬಿಚ್ಚಿಟ್ಟ ಅನುಭವ್ ನ ತಾತ
ಮಂಗಳೂರು: ಉಜಿರೆಯ ರಥಬೀದಿಯಲ್ಲಿ 8 ವರ್ಷದ ಬಾಲಕ ಅನುಭವ್ ನ ಅಪಹರಣ ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಬಾಲಕ ಅನುಭವ್ ತನ್ನ ತಾತ ಎ.ಕೆ.ಶಿವನ್ ಅವರ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ್ದಾನೆ.
ತಾತಾ ಎ.ಕೆ.ಶಿವನ್ ಅವರ ಕಣ್ಣೆದುರೇ ಅನುಭವ್ ನ ಅಪಹರಣ ನಡೆದಿತ್ತು. ಅಪಹರಣ ನಡೆದ ಬಳಿಕ ಬಾಲಕನನ್ನು ನೆನೆದು ಒದ್ದಾಡಿದ್ದ ಇಡೀ ಮನೆಯವರು ಇದೀಗ, ಬಾಲಕ ಸುರಕ್ಷಿತವಾಗಿದ್ದಾನೆ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ತನ್ನ ತಾತನಲ್ಲಿ ಮಾತನಾಡಿದ ಅನುಭವ್ “ನಾನು ಆರಾಮವಾಗಿದ್ದೇನೆ, ಬೆಳಗ್ಗೆ ತಿಂಡಿ ತಿಂದೆ” ಎಂದು ಹೇಳಿದ್ದಾನೆ. ಇನ್ನೂ ಅಪಹರಣ ಹೇಗೆ ನಡೆಯಿತು ಎಂದು ಮಾಧ್ಯಮಗಳಿಗೆ ತಿಳಿಸಿರುವ ಶಿವನ್, “ಗುರುವಾರ ಸಂಜೆ ಮನೆಯ ಮುಂಭಾಗದಲ್ಲಿ ನಾನು ಮಕ್ಕಳೊಂದಿಗೆ ವಾಕಿಂಗ್ ಮುಗಿಸಿಕೊಂಡು ಮನೆಗೆ ಬಂದಿದ್ದೇನೆ. ನಾನು ಮಗುವಿನಿಂದ 10 ಹೆಜ್ಜೆ ಮುಂದೆ ಇದ್ದೆ. ಇಬ್ಬರು ಕಾರಿನ ಹೊರಗೆ ಇದ್ದರು. ಅವರಲ್ಲಿ ಒಬ್ಬ ಮಗು(ಅನುಭವ್)ವನ್ನು ಹಿಡಿದುಕೊಂಡ. ಆಗ ಒಮ್ಮೆ ಮಗು ಕೊಸರಾಡಿ ತಪ್ಪಿಸಿಕೊಂಡ. ಆಗ ಮತ್ತೊಬ್ಬ ಮಗುವನ್ನು ಹಿಡಿದು ಕಾರಿನೊಳಗೆ ಎಳೆದುಕೊಂಡ. ನಾನು ಅಲ್ಲಿಗೆ ಓಡುವಷ್ಟರಲ್ಲಿ ಅವರು ಕಾರು ಚಲಾಯಿಸಿಕೊಂಡು ಹೋಗಿದ್ದಾರೆ ಎಂದಿದ್ದಾರೆ.
ಅಪಹರಣದ ವೇಳೆ ಕಾರಿನಲ್ಲಿ ನಾಲ್ಕು ಜನರಿದ್ದರು ಎಂದು ಶಿವನ್ ಹೇಳಿದ್ದಾರೆ. ಇಲ್ಲಿಯವರೆಗೆ ಅವರು ಯಾರನ್ನೂ ನೋಡಿದ ನೆನಪಿ ಇಲ್ಲ ಎಂದು ಅವರು ಹೇಳಿದ್ದಾರೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿ.ಹನುಮಂತ(21), ಗಂಗಾಧರ್(25), ಖಾಸಗಿ ಕಂಪೆನಿಯ ಉದ್ಯೋಗಿ ಹೆಚ್.ಪಿ.ರಂಜಿತ್(22) ಮೆಕ್ಯಾನಿಕ್ ಕಮಲ್(23), ಟೈಲರ್ ಮಂಜುನಾಥ್(24), ಪೈಂಟರ್ ಮಹೇಶ್(26) ಸೇರಿದಂತೆ 6 ಆರೋಪಿಗಳನ್ನು ಬಂಧಿಸಿದ್ದಾರೆ.