ಹೆದರಿ ಓಡಿದ್ದ ಗ್ರಾಮಸ್ಥರು 96ರ ಅಜ್ಜಿ ಮಾಡಿದ ಆ ಕೆಲಸ ಕಂಡು ಎಲ್ಲರೂ ಲಸಿಕೆ ಹಾಕಿಸಿಕೊಂಡ್ರು!

ನವದೆಹಲಿ: ಸರ್ಕಾರಿ ಅಧಿಕಾರಿಗಳು ಕೊರೊನಾ ಲಸಿಕೆ ಹಾಕಲು ಬಂದಿದ್ದ ವೇಳೆ ಊರಿನ ಯುವಕ-ಯುವತಿಯರು ಸೇರಿದಂತೆ ಎಲ್ಲರೂ ಓಡಿದ್ದು, ಈ ವೇಳೆ 96 ವರ್ಷದ ವೃದ್ಧೆಯೊಬ್ಬರು ತಾನೇ ಲಸಿಕೆ ಹಾಕಿಸಿಕೊಂಡು ಎಲ್ಲರಿಗೂ ಧೈರ್ಯ ತುಂಬಿ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಿದ ಘಟನೆ ಉತ್ತರ ಪ್ರದೇಶದ ಕಸ್ ಗಂಜ್ ಜಿಲ್ಲೆಯ ನಗ್ಲಾ ಕಧೇರಿ ಗ್ರಾಮದ್ಲಿ ನಡೆದಿದೆ.
96 ವರ್ಷ ವಯಸ್ಸಿನ ಆಧಾರ್ ಕುಮಾರಿ ಅವರು ಈ ಧೈರ್ಯವಂತ ಮಹಿಳೆಯಾಗಿದ್ದಾರೆ. ತನಗಿಂತ ಕಿರಿಯ ವಯಸ್ಸಿನವರು ಕೊರೊನಾ ಲಸಿಕೆ ಬಗ್ಗೆ ಆತಂಕಿತರಾಗಿದ್ದರೆ, ತಾನೇ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಯಾವುದೇ ಅಂಜಿಕೆ ಇಲ್ಲದೇ ಆಧಾರ್ ಕುಮಾರಿ ಅಧಿಕಾರಿಗಳ ಬಳಿಗೆ ಬಂದಿದ್ದಾರೆ. ಅಜ್ಜಿಗೆ ಲಸಿಕೆ ಹಾಕುವುದನ್ನು ಊರಿನ ಜನರು ಸಂದಿಗೊಂದಿಯಲ್ಲಿ ಅಡಗಿ ಕುಳಿತು ನೋಡುತ್ತಿದ್ದರು. ಈ ವೇಳೆ ಆಧಾರ್ ಕುಮಾರಿ ಅವರು ಜೋರಾಗಿ ಎಲ್ಲರನ್ನೂ ಕರೆದು, ನೋಡಿ ಏನೂ ಆಗಲ್ಲ ಎಂದು ಧೈರ್ಯ ತುಂಬಿದ್ದಾರೆ.
ಆಧಾರ್ ಕುಮಾರಿ ಅವರಿಗೆ ಲಸಿಕೆ ಹಾಕಿಸಿಕೊಂಡರೂ ಏನೂ ಆಗಲಿಲ್ಲ ಎನ್ನುವುದು ತಿಳಿಯುತ್ತಿದ್ದಂತೆಯೇ ಎಲ್ಲ ಗ್ರಾಮಸ್ಥರಿಗೆ ಧೈರ್ಯ ಬಂದಿದ್ದು,18 ವರ್ಷ ಮೇಲ್ಪಟ್ಟ ಇಲ್ಲಿನ ಎಲ್ಲ 176 ನಿವಾಸಿಗಳು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.
ಇನ್ನೂ 96ರ ವಯಸ್ಸಿನ ಆಧಾರ್ ಕುಮಾರಿ ಅವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಮುಂದಾಗದೇ ಇರುತ್ತಿದ್ದರೆ, ಈ ಲಸಿಕೆ ಅಭಿಯಾನವೇ ನಡೆಯುತ್ತಿರಲಿಲ್ಲ. ಹೀಗಾಗಿ ಅಜ್ಜಿಗೆ ತಹಶೀಲ್ದಾರ್ ಅಜಯ್ ಕುಮಾರ್, ಆರೋಗ್ಯಾಧಿಕಾರಿ ಸೊರೋನ್ ಹಾಗೂ ಅವರ ತಂಡ ಧನ್ಯವಾದ ಹೇಳಿದ್ದಾರೆ.