ಹಿಂದೂಗಳು ಕ್ರಿಸ್ಮಸ್ ನಲ್ಲಿ ಭಾಗವಹಿಸಿದರೆ ಬಟ್ಟೆ ಬಿಚ್ಚಿ ಥಳಿಸಲಾಗುವುದು | ಬಜರಂಗದಳದ ಮುಖಂಡನ ಹೇಳಿಕೆ
ಗುವಾಹಟಿ: ಯಾರಾದರೂ ಹಿಂದೂಗಳು ಕ್ರಿಸ್ಮಸ್ ಹಬ್ಬವನ್ನು ಆಚರಿಸಿದರೆ, ಅವರಿಗೆ ಸಾರ್ವಜನಿಕವಾಗಿ ಥಳಿಸುತ್ತೇವೆ ಎಂದು ಆರೆಸ್ಸೆಸ್ ನ ಅಂಗಸಂಸ್ಥೆ, ವಿಶ್ವ ಹಿಂದೂ ಪರಿಷತ್ ಭಾಗವಾಗಿರುವ ಬಜರಂಗದಳದ ಅಸ್ಸಾಂನ ಗುವಾಹಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಚು ನಾಥ್ ಬೆದರಿಕೆಯೊಡ್ಡಿದ್ದಾರೆ.
ಡಿಸೆಂಬರ್ 25ರಂದು ಚರ್ಚ್ ಗಳಿಗೆ ಹಿಂದೂಗಳು ಹೋಗಬಾರದು. ನಮ್ಮ ಮಾತನ್ನು ಮೀರಿ ಯಾರಾದರೂ ಹಿಂದೂಗಳು ಹೋದರೆ, ಅವರನ್ನು ಥಳಿಸಲಾಗುವುದು. ಮೇಘಾಲಯದ ಕ್ರಿಶ್ಚಿಯನ್ ವಿದ್ಯಾರ್ಥಿ ಸಂಘಟನೆ ಕೆಲವು ಹಿಂದೂ ದೇವಸ್ಥಾನಗಳನ್ನು ಬಲವಂತವಾಗಿ ಮುಚ್ಚಿಸಿವೆ, ಹಾಗಾಗಿ ಹಿಂದೂಗಳು ಕ್ರೈಸ್ತರ ಕಾರ್ಯಕ್ರಮಗಳಲ್ಲಿ ಮೋಜು ಮಸ್ತಿ ಮಾಡಬಾರದು ಎಂದು ಅವರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಮ್ಮ ಮಾತನ್ನು ಮೀರಿ ಯಾರಾದರು ಕ್ರಿಸ್ಮಸ್ ಹಬ್ಬದಲ್ಲಿ ಭಾಗವಹಿಸಿದರೆ, ಅಂತಹ ಹಿಂದೂಗಳ ಬಟ್ಟೆ ಬಿಚ್ಚಿ ಹೊಡೆಯಲಾಗುವುದು . ನಮಗೆ ಗೊತ್ತು, ಈ ರೀತಿಯ ಕೆಲಸ ಮಾಡಿದರೆ, ನಾಳೆ ‘ಗುಂಡಾದಾಲ್’ ಎಂದು ನಮ್ಮನ್ನು ಪತ್ರಿಕೆಗಳು ಕರೆಯುತ್ತವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಕ್ಯಾಚರ್ ಜಿಲ್ಲೆಯಲ್ಲಿ ಚಿಕ್ಕ ಜನಸಂಖ್ಯೆ ಹೊಂದಿರುವ ಕ್ರೈಸ್ತ ಸಮುದಾಯವು ಹಿಂದೂ ಸಮುದಾಯದೊಂದಿಗೆ ಅನ್ಯೋನ್ಯತೆಯಿಂದ ಇದೆ. ಪ್ರತಿ ವರ್ಷವೂ ಇಲ್ಲಿ ಹಿಂದೂ ಹಾಗೂ ಕ್ರೈಸ್ತರು ಇಲ್ಲಿನ ಸಿಲ್ಚಾರ್ ಬಳಿಯ ಅಂಬಿಕಾಪಟ್ಟಿಯ ಓರಿಯಂಟಲ್ ಶಾಲೆಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಡಿಸೆಂಬರ್ 25ರಂದು ಸಂತೋಷ, ಸಡಗರದಿಂದ ಆಚರಿಸುತ್ತಾರೆ. ಇದೀಗ ಬಜರಂಗದಳವು ಇಲ್ಲಿಗೆ ಎಂಟ್ರಿ ನೀಡುವ ಮೂಲಕ ಇಲ್ಲಿ ಸಾಮಾಜಿಕ ಸ್ವಾಸ್ತ್ಯ ಹದಗೆಡಿಸಲು ಮುಂದಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಇನ್ನೂ ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಸಿಲ್ಚಾರ್ ಪೊಲೀಸರು, ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನಾವು ಸಾಕಷ್ಟ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಈ ನಡುವೆ ಸಮಾಜದ ಸ್ವಾಸ್ತ್ಯ ಕೆಡಿಸುವ ಹೇಳಿಕೆ ನೀಡಿದ ವಿಚು ನಾಥ್ ವಿರುದ್ಧ ಕ್ರಮಕೈಗೊಳ್ಳಲು ದೇಶಾದ್ಯಂತ ಆಗ್ರಹಿಸಲಾಗಿದೆ.