ವೋಟಿಗಾಗಿ ನಮ್ಮ ಮನೆಗೆ ಬಂದು ನಮ್ಮ ಕಾಲಿಗೆ ಬೀಳುತ್ತಾರೆ, ಆದ್ರೆ…: ವಿಶ್ವಕರ್ಮ ಪರಿಷತ್ ಕಿಡಿ - Mahanayaka
4:26 AM Thursday 20 - February 2025

ವೋಟಿಗಾಗಿ ನಮ್ಮ ಮನೆಗೆ ಬಂದು ನಮ್ಮ ಕಾಲಿಗೆ ಬೀಳುತ್ತಾರೆ, ಆದ್ರೆ…: ವಿಶ್ವಕರ್ಮ ಪರಿಷತ್ ಕಿಡಿ

vishwakarma
21/09/2022

ಸೆಪ್ಟೆಂಬರ್ 17 ರಂದು ಉಭಯ ಜಿಲ್ಲೆಗಳಲ್ಲಿಯೂ ಸರಕಾರಿ ಪ್ರಾಯೋಜತ್ವದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮವು ನಡೆಯಿತು. ಆದ್ರೆ ಈ ಕಾರ್ಯಕ್ರಮ ಸಮಾಜ ಬಾಂಧವರಲ್ಲಿ ಬೇಸರ, ಗೊಂದಲ ಮತ್ತು ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಅಖಿಲ ಭಾರತ ವಿಶ್ವಕರ್ಮ ಪರಿಷತ್ ನ ರಾಜ್ಯ ಸಂಚಾಲಕ ಉದಯ್ ಜಿ. ಆಚಾರ್ಯ ಕಿಡಿಕಾರಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,

ಆಮಂತ್ರಣ ಪತ್ರಿಕೆಯಲ್ಲಿ ಪ್ರೋಟೋಕಾಲ್ ಪ್ರಕಾರ ಜಿಲ್ಲೆಯ ಜನಪ್ರತಿನಿಧಿಗಳು, ಇಲಾಖೆಯ, ಪ್ರಾಧಿಕಾರ ಮತ್ತು ನಿಗಮ ಮಂಡಳಿಗಳು ಮತ್ತು ಅಕಾಡೆಮಿಗಳ ಮುಖ್ಯಸ್ಥರುಗಳ, ಹೆಸರುಗಳನ್ನು ನಮೂದಿಸಲಾಗಿತ್ತು. ಆದರೆ ಬೇಸರದ ಸಂಗತಿ ಏನೆಂದರೆ ಅಲ್ಲಿಯ ಸ್ಥಳೀಯ ಶಾಸಕರು, ಮೇಯರ್, ಉಪಮೇಯರ್ ಮತ್ತು ತಹಶೀಲ್ದಾರರು ಬಿಟ್ಟರೆ ಬೇರೆ ಯಾರೂ ಬರಲಿಲ್ಲ. ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರೇ ಇರಲಿಲ್ಲ. ಈ ಕಾರ್ಯಕ್ರಮವನ್ನು ಆಯೋಜಿಸಬೇಕಿದ್ದ ಜಿಲ್ಲಾಧಿಕಾರಿಯವರೇ ಇರಲಿಲ್ಲ. ಇನ್ನು ಸ್ಥಳೀಯ ಶಾಸಕರ ಉಪಸ್ಥಿತಿಗಾಗಿ ಕಾದು ಕಾದು 3 ಗಂಟೆಗೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ 5 ಗಂಟೆಗೆ ಪ್ರಾರಂಭವಾಗಿತ್ತು. ಇದರಿಂದ ಸಮಾಜಕ್ಕೆ ಏನೂ ಪ್ರಯೋಜನವಿರಲಿಲ್ಲ. ಇಷ್ಟೊಂದು ತಾತ್ಸಾರದಿಂದ ಇಂಥ ಕಾಟಾಚಾರದ ಕಾರ್ಯಕ್ರಮವನ್ನು ಮಾಡುವ ಅಗತ್ಯವಿತ್ತೇ ಎನ್ನುವ ಯೋಚನೆಯೊಂದಿಗೆ ಸಮಾಜ ಬಾಂಧವರಲ್ಲಿ ಹಲವಾರು ಪ್ರಶ್ನೆಗಳು ಮೂಡಿವೆ ಎಂದರು.

ವೋಟಿಗಾಗಿ ನಮ್ಮ ಮನೆಗೆ ಬಂದು ನಮ್ಮ ಕಾಲಿಗೆ ಬೀಳುತ್ತಾರೆ, ಗೆದ್ದ ಮೇಲೆ ಈ ತರಹದ ವರ್ತನೆ ಯಾಕೆ..? ಎಂದ ಅವ್ರು ಪ್ರಬಲ ಸಮುದಾಯದ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಪ್ರೋಟೋಕಾಲ್ ಇಲ್ಲದಿದ್ದರೂ ಎಲ್ಲ ನಾಯಕರು ಸೇರುತ್ತಾರೆ ಹಾಗಾದರೆ ವಿಶ್ವಕರ್ಮ ಸಮಾಜಕ್ಕೆ ನಿರ್ಲಕ್ಷ್ಯ ತಾರತಮ್ಯ ಯಾಕೆ, ಆಡಳಿತದಲ್ಲಿರುವ ಪಕ್ಷಕ್ಕೆ ವಿಶ್ವಕರ್ಮರು ಬಹಳ ಸೌಮ್ಯ, ಮೃದು, ಬಹಳ ತಾಳ್ಮೆ ಸ್ವಭಾವದವರು ಇವರನ್ನು ಹೇಗೆ ಬೇಕಾದರೂ ನಮ್ಮ ಮಾತಿನ ಮೋಡಿಯಿಂದ ಮೂರ್ಖರನ್ನಾಗಿ ಮಾಡಬಹುದು ಮತ್ತು ಇವರನ್ನು ಸಂಭಾಳಿಸಬಹುದು, ಇವರು ನಮ್ಮ ವೋಟ್ ಬ್ಯಾಂಕ್ ಎಂಬ ಕಲ್ಪನೆ ಇದ್ದಿರಬಹುದು ಎಂದು ಭಾವಿಸಿರಬಹುದು ಎಂದು ಕಿಡಿಕಾರಿದ್ದಾರೆ.

ಇತ್ತೀಚಿನ ಸುದ್ದಿ