ಭಾರತೀಯ ಶೇರು ಮಾರುಕಟ್ಟೆ ಕುಸಿತ: ಮೋದಿ ವಿರುದ್ಧ ಅಖಿಲೇಶ್ ಯಾದವ್ ಕಿಡಿ

ಭಾರತೀಯ ಶೇರು ಮಾರುಕಟ್ಟೆ ಸತತವಾಗಿ ಪತನಗೊಳ್ಳುತ್ತಿರುವ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಮಂಗಳವಾರ ತೀಕ್ಷ್ಣ ವಾಗ್ದಾಳಿ ನಡೆಸಿದ್ದು, ಇದರಿಂದ ಮಧ್ಯಮ ವರ್ಗದ ಹೂಡಿಕೆ ಕೊಚ್ಚಿಕೊಂಡು ಹೋಗುತ್ತಿದೆ ಎಂದು ಅಖಿಲೇಶ್ ಯಾದವ್ ಹರಿಹಾಯ್ದಿದ್ದಾರೆ. ಹೂಡಿಕೆದಾರರು ಇನ್ನು ಬಿಜೆಪಿ ಬೇಡ ಎಂದು ಹೇಳುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್ , “ಭಾರತೀಯ ಶೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಶೇರು ಮೌಲ್ಯ ಪತನದಿಂದ ಮಧ್ಯಮ ವರ್ಗದ ಜನರ ಹೂಡಿಕೆ ಕೊಚ್ಚಿಕೊಂಡು ಹೋಗುತ್ತಿದೆ. ವಿಶ್ವದೆಲ್ಲೆಡೆಯಿಂದ ಹೂಡಿಕೆದಾರರನ್ನು ಆಹ್ವಾನಿಸಲು ಪೈಪೋಟಿಗೆ ಬಿದ್ದಿರುವ ಡಬಲ್ ಎಂಜಿನ್ ಸರಕಾರಗಳು, ಇತರರಿಗೆ ಮರು ಭರವಸೆ ನೀಡಲು ವಂಚಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೂ ಮುನ್ನ, ಮೊದಲು ದೇಶೀಯ ಹೂಡಿಕೆದಾರರ ಸುರಕ್ಷತೆಯನ್ನು ಖಾತರಿಗೊಳಿಸಬೇಕು” ಎಂದು ಆಗ್ರಹಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ನಿಫ್ಟಿ ತನ್ನ ಕಳಪೆ ಪ್ರದರ್ಶನವನ್ನು ಮುಂದುವರಿಸಿರುವುದರಿಂದ, ಈ ವರ್ಷ ಥಾಯ್ಲೆಂಡ್ ಹಾಗೂ ಫಿಲಿಪ್ಪೀನ್ಸ್ ನಂತರ ಭಾರತದ ಶೇರು ಮಾರುಕಟ್ಟೆ ವಿಶ್ವದ ಮೂರನೆ ದುರ್ಬಲ ಶೇರು ಮಾರುಕಟ್ಟೆಯಾಗಿ ಹೊರ ಹೊಮ್ಮಿದೆ ಎಂಬ ವರದಿಗಳು ಬರುತ್ತಿವೆ ಎಂದುಅಖಿಲೇಶ್ ಯಾದವ್ ತಮ್ಮ ಪೋಸ್ಟ್ ನಲ್ಲಿ ಹೇಳಿದ್ದಾರೆ.
“ಒಂದು ಕಡೆ 80 ಕೋಟಿ ಜನರು ಸರಕಾರಿ ಪಡಿತರದ ಮೇಲೆ ಅವಲಂಬಿತರಾಗುವಂತೆ ಮಾಡಲಾಗಿದೆ. ಮತ್ತೊಂದೆಡೆ, ಶೇರು ಮಾರುಕಟ್ಟೆಯಲ್ಲಿ ತಮ್ಮ ಉಳಿತಾಯ ಹೂಡಿಕೆ ಮಾಡಿರುವವರನ್ನು ದಿವಾಳಿಯಾಗಿಸಲಾಗಿದೆ. ಇಂತಹ ಆತಂಕಕಾರಿ ಪರಿಸ್ಥಿತಿಯಲ್ಲೂ ಸುಳ್ಳು ಪ್ರತಿಪಾದನೆಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಹಾಗೂ ವಂಚಿಸುವ ಕೆಲಸವನ್ನು ಬಿಜೆಪಿ ಸರಕಾರ ಮುಂದುವರಿಸಿದೆ” ಎಂದು ಅವರು ಆರೋಪಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj