ಅಕ್ಕ-ತಂಗಿಯರಿಬ್ಬರನ್ನೂ ವಿವಾಹವಾಗಿದ್ದ ವ್ಯಕ್ತಿ ಅರೆಸ್ಟ್ | ಹಳೆಯ ಸಿನಿಮಾ ಸ್ಟೋರಿಯಂತಿದೆ ಈ ಪ್ರಕರಣ!

umapathi marriage
17/05/2021

ಕೋಲಾರ: ಅಕ್ಕ-ತಂಗಿ ಇಬ್ಬರನ್ನೂ ಮದುವೆಯಾದ ಕೋಲಾರದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದು, ವಿವಾಹ ಮಾಡಿಸಿದ್ದ ಪೂಜಾರಿ ಸಹಿತ ಒಟ್ಟು 7 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗುವಿನ ಉಮಾಪತಿ ಎಂಬವರು ಸಹೋದರಿಯಾಗಿರುವ ಸುಪ್ರಿಯಾ ಹಾಗೂ ಲಲಿತಾ ಎಂಬವರನ್ನು  ಮೇ 7ರಂದು ಒಂದೇ ವೇದಿಕೆಯಲ್ಲಿ ವಿವಾಹವಾಗಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಫೋಟೋ ವೈರಲ್ ಆಗುತ್ತಿದ್ದಂತೆಯೇ ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರಿಗೂ ಫೋಟೋ ತಲುಪಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳಕ್ಕೆ ಆಗಮಿಸಿದ ಮುಳಬಾಗಿಲು ತಹಶೀಲ್ದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪರಿಶೀಲನೆ ನಡೆಸಿದಾಗ, ವಿವಾದ ಸಹೋದರಿಯರ ಪೈಕಿ ಲಲಿತಾಗೆ 16 ವರ್ಷವಷ್ಟೇ ಆಗಿದ್ದು, ಆಕೆ ಇನ್ನೂ ಅಪ್ರಾಪ್ತ ವಯಸ್ಸಿನವಳು ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ವರ ಉಮಾಪತಿ ಹಾಗೂ ಆತನ ತಂದೆ -ತಾಯಿ,  ಹುಡುಗಿಯ ತಂದೆ-ತಾಯಿ ಹಾಗೂ ಪೂಜೆ ಮಾಡಿಸಿದ ಪೂಜಾರಿ ಹಾಗೂ ಲಗ್ನ ಪತ್ರಿಕೆ ಮುದ್ರಿಸಿದವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಉಮಾಪತಿ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ.

ಅಕ್ಕಾ -ತಂಗಿಯ ಮದುವೆ ನಡೆದದ್ದು ಹೇಗೆ?

ಅಪ್ರಾಪ್ತ ವಯಸ್ಸಿನ ಲಲಿತಾಳ ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಇತ್ತ ತಂಗಿಗೆ ವಿವಾಹ ನಡೆದರೆ, ಅಕ್ಕನಿಗೆ ಎಲ್ಲಿ ಮದುವೆಯಾಗುವುದಿಲ್ಲವೋ ಎನ್ನುವ ಭಯದಿಂದ  ತಂಗಿ ಲಲಿತಾ, ತನ್ನನ್ನು ಮದುವೆಯಾಗಬೇಕಾದರೆ, ಆತ ತನ್ನ ಅಕ್ಕನನ್ನೂ ಮದುವೆಯಾಗಬೇಕು ಎನ್ನುವ ಷರತ್ತು ಹಾಕಿದ್ದಳು. ಈ ಷರತ್ತಿಗೆ ಪೋಷಕರು ಹಾಗೂ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದರು. ಹಿರಿಯರ ಸಮ್ಮುಖದಲ್ಲಿಯೇ  ಮೇ 7ರಂದು ಈ ವಿವಾಹವಾಗಿತ್ತು. ಉಮಾಪತಿ ಎಂಬವರು ಇಬ್ಬರು ಯುವತಿಯರನ್ನೂ ವಿವಾಹವಾಗಿದ್ದರು.

ಇತ್ತೀಚಿನ ಸುದ್ದಿ

Exit mobile version