ಅಕ್ರಮ ಸಂಬಂಧ ಅವನ ಪ್ರಾಣವನ್ನೇ ತೆಗೆಯಿತು | ಆಸ್ತಿ ಮೇಲೆ ಕಣ್ಣಿಟ್ಟಿದ್ದಾಕೆ ಮಾಡಿದ್ದೇನು ಗೊತ್ತಾ? - Mahanayaka
10:02 AM Wednesday 12 - March 2025

ಅಕ್ರಮ ಸಂಬಂಧ ಅವನ ಪ್ರಾಣವನ್ನೇ ತೆಗೆಯಿತು | ಆಸ್ತಿ ಮೇಲೆ ಕಣ್ಣಿಟ್ಟಿದ್ದಾಕೆ ಮಾಡಿದ್ದೇನು ಗೊತ್ತಾ?

09/03/2021

ಕಾಂಚೀಪುರಂ: ಹ್ಯುಂಡೈ ಉದ್ಯೋಗಿಯೋರ್ವನನ್ನು  ಬರ್ಬರವಾಗಿ ಹತ್ಯೆ ಮಾಡಿ, ಆತನ ಶವವನ್ನು ಕಬ್ಬಿಣದ ಬ್ಯಾರೆಲ್ ನಲ್ಲಿ ಇರಿಸಿ, ಅದರ ಬಾಯಿಯನ್ನು ಕಾಂಕ್ರೀಟ್ ಹಾಕಿ ಮುಚ್ಚಿ ಬಾವಿಗೆ ಎಸೆದ ಘಟನೆ ನಡೆದಿದ್ದು, ಈ ಘಟನೆಯ ಬೆನ್ನಲ್ಲೇ ಹತ್ಯೆಗೀಡಾದ ಹ್ಯುಂಡೈ ಉದ್ಯೋಗಿಯ ಅಕ್ರಮ ಸಂಬಂಧ ಸೇರಿದಂತೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ.

ಹ್ಯುಂಡೈನ ಶ್ರೀ ಪೆರುಂಬತ್ತೂರು ಶಾಖೆಯ ಉದ್ಯೋಗಿಯಾಗಿದ್ದ ಪುದುಕೊಟ್ಟೈ ಕೊಂಡಾಯರಪಟ್ಟಿ ಮೂಲದ ಕೊಂಚಿ ಅಡಕನ್ ಎಂಬಾತ 2019ರ ಆಗಸ್ಟ್ ನಲ್ಲಿ ಕೆಲಸಕ್ಕೆ ಹೋಗಿದ್ದಾತ ಮರಳಿ ಬಾರದೇ ನಾಪತ್ತೆಯಾಗಿದ್ದ.

ಕೊಂಚಿ ಅಡಕನ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಆತನ ಪತ್ನಿ ಪಳನಿಯಮ್ಮ  ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದರೂ ಕೊಂಡಿ ಅಡಕನ್ ಪತ್ತೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ  ಪಳನಿಯಮ್ಮ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಸಂದರ್ಭ  ಪೊಲೀಸರು,  ಕೊಂಚಿ ಅಡಕನ್  ಕೌಟುಂಬಿಕ ಸಮಸ್ಯೆಯಿಂದಾಗಿ  ದೇಶ ತೊರೆದಿರಬಹುದು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.


Provided by

ಈ ನಡುವೆ ಕೊಂಚಿ ಅಡಕನ್ ಖಾತೆಯಿಂದ ಅವರ ಸೋದರಳಿಯ ಪತ್ನಿ ಚಿತ್ರಾಳ ಖಾತೆಗೆ  1.5 ಕೋಟಿ ರೂ.  ದೊಡ್ಡ ಮೊತ್ತವನ್ನು ವರ್ಗಾಯಿಸಲಾಗಿದೆ.  ಈ ವಿಚಾರ ಪತ್ನಿ ಪಳನಿಯಮ್ಮ ಗಮನಕ್ಕೆ ಬಂದಿದ್ದು, ಈ ಮಾಹಿತಿಯನ್ನು ಅವರು ಪೊಲೀಸರಿಗೆ ನೀಡಿದ್ದಾರೆ.

ಪತ್ನಿ ನೀಡಿದ ಮಾಹಿತಿಯ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಶಾಕ್ ಕಾದಿತ್ತು.  ಚಿತ್ರಾ ತಮ್ಮ ಕ್ರೂರ ಕೃತ್ಯಗಳನ್ನು ಒಂದೊಂದಾಗಿ ಬಾಯಿ ಬಿಟ್ಟಿದ್ದಾಳೆ.  ಹತ್ಯೆಗೀಡಾದ ಕೊಂಚಿ ಅಡಕನ್ ಹಾಗೂ ಚಿತ್ರಾಗೆ ಮದುವೆಗೂ ಮೊದಲೇ ದೈಹಿಕ ಸಂಬಂಧವಿತ್ತು.  ಮದುವೆಯ ಬಳಿಕವೂ ಈ ಸಂಬಂಧವನ್ನು ಮುಂದುವರಿಸಬೇಕು ಎಂದು ಕೊಂಚಿ ಅಡಕನ್ ಗೆ ಒತ್ತಡ ಹಾಕಿದ್ದಾಳೆ.

ಆದರೆ ಚಿತ್ರಾಳ ಆಸೆಗೆ ಕೊಂಚಿ ನಿರಾಕರಿಸಿದ್ದನು. ವಾಸ್ತವವಾಗಿ ಕೊಂಡಿ ಅಡಕನ್ ನ ದೇಹ ಸೌಂದರ್ಯ ನೋಡಿ ಚಿತ್ರಾ ಈ ರೀತಿಯ ಒತ್ತಡವನ್ನು ಹಾಕಿರಲಿಲ್ಲ. ಆತನ ಬಳಿ ಅಪಾರವಾದ ಆಸ್ತಿ ಇದ್ದು, ಅದನ್ನು ಹೇಗಾದರೂ ತನ್ನ ಹೆಸರಿಗೆ ಮಾಡಬೇಕು ಎನ್ನುವುದು ಚಿತ್ರಾಳಾ ಪ್ಲಾನ್ ಆಗಿತ್ತು.

ಅಡಕನ್ ನನ್ನು ಹತ್ಯೆ ಮಾಡುವ ದಿನವೂ ಚಿತ್ರಾಳ ಪ್ಲಾನ್ ಬೇರೆಯೇ ಆಗಿತ್ತು. ಅಡಕನ್ ನನ್ನು ಬರಲು ಹೇಳಿ,  ಗೂಂಡಾಗಳನ್ನು ನಿಯೋಜಿಸಿದ್ದ ಚಿತ್ರಾ. ಆತನನ್ನು ಬೆದರಿಸಿ ಹಣ ಸುಲಿಗೆ ಮಾಡಲು ಯತ್ನಿಸಿದ್ದಾಳೆ. ಆದರೆ, ಈ ಬೆದರಿಕೆಗಳಿಗೆ ಅಡಕನ್ ಬಗ್ಗಲಿಲ್ಲ. ಇದರಿಂದ ಆಕ್ರೋಶಗೊಂಡ ಚಿತ್ರಾ, ಅಡಕನ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದು, ಬಳಿಕ ಆತನನ್ನು ಕಬ್ಬಿಣದ ಬ್ಯಾರಲ್ ನಲ್ಲಿ ತುಂಬಿಸಿ ಕಾಂಕ್ರೀಟ್ ನಿಂದ ಬ್ಯಾರೆಲ್ ನ್ನು ಮುಚ್ಚಿದ್ದಾಳೆ.

ಇದೀಗ ಚಿತ್ರಾಳ ಹೇಳಿಕೆಯ ಆಧಾರದಲ್ಲಿ  ಆಕೆಯ ಪುತ್ರ ರಂಜಿತ್, ಮತ್ತು ಗೂಂಡಾಗಳಾದ ಎಲುಮಲೈ, ವಿವೇಕಾನಂದನ್, ಟಾರ್ಜನ್, ಸತೀಶ್ ಮತ್ತು ಸುಬ್ರಮಣಿಯನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾರೆಲನ್ನು ಬಾವಿಯಿಂದ ಹೊರ ತೆಗೆದಿರುವ ಪೊಲೀಸರು ಅವಶೇಷವನ್ನು ಪತ್ತೆ ಮಾಡಿದ್ದಾರೆ.

ಇತ್ತೀಚಿನ ಸುದ್ದಿ