ಜ್ಞಾನವಾಪಿ ಮಸೀದಿಯ ಎಎಸ್ ಐ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ - Mahanayaka

ಜ್ಞಾನವಾಪಿ ಮಸೀದಿಯ ಎಎಸ್ ಐ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ

26/07/2023

  1. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಡೆಸಿದ ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆಗೆ ಅಲಹಾಬಾದ್ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಿದ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.
    ಇದೀಗ ಮತ್ತೆ ಗುರುವಾರ ಮಧ್ಯಾಹ್ನ ಪ್ರಕರಣದ ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ. ಜ್ಞಾನವಾಪಿ ಮಸೀದಿ ಸಂಕೀರ್ಣದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಸ್‌ಎಫ್‌ಎ ನಖ್ವಿ, ಮಸೀದಿಗೆ ಯಾವುದೇ ಹಾನಿಯಾಗದಂತೆ ಕಾನೂನು ಪ್ರಕಾರ ಸರ್ವೆ ಮಾಡಲಾಗುವುದು ಎಂದು ಎಎಸ್‌ಐ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ನಾವು ಉತ್ತರ ನೀಡುತ್ತೇವೆ. ನಾಳೆ ಮಧ್ಯಾಹ್ನ 3.30 ಕ್ಕೆ ನ್ಯಾಯಾಲಯವು ಮತ್ತೆ ವಿಚಾರಣೆ ನಡೆಸಲಿದೆ. ಸದ್ಯಕ್ಕೆ ಜಿಲ್ಲಾ ನ್ಯಾಯಾಲಯದ ಆದೇಶದ ಸಮೀಕ್ಷೆಗೆ ತಡೆ ನೀಡಲಾಗಿದೆ. ಮುಸ್ಲಿಂ ಕಕ್ಷಿದಾರರಿಗೆ ಅಲಹಾಬಾದ್ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಲು ಕಾಲಾವಕಾಶ ನೀಡುವುದಕ್ಕಾಗಿ ವಿವಾದಿತ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಜುಲೈ 26 ರಂದು ಸಂಜೆ 5 ಗಂಟೆಯವರೆಗೆ ಜಾರಿಗೊಳಿಸಬಾರದು ಎಂದು ಸುಪ್ರೀಂಕೋರ್ಟ್ ಜುಲೈ 24 ರಂದು ಆದೇಶಿಸಿದೆ.
    ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಸಂಕೀರ್ಣದ ಸರ್ವೆ ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಆರಂಭವಾಗಿತ್ತು. ಇದರ ಬೆನ್ನಲ್ಲೇ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿ ಮಂಗಳವಾರ ಹೈಕೋರ್ಟ್ ಮೆಟ್ಟಿಲೇರಿತ್ತು. ಆಗ್ರಾ ಮತ್ತು ಲಕ್ನೋದ ಸುಮಾರು 20 ಅಧಿಕಾರಿಗಳನ್ನು ಒಳಗೊಂಡ ಎಎಸ್‌ಐ ತಂಡವು ಆಡಳಿತ ಅಧಿಕಾರಿಗಳ ಸಹಾಯದೊಂದಿಗೆ ಸೋಮವಾರ ಬೆಳಿಗ್ಗೆ ವೈಜ್ಞಾನಿಕ ಸಮೀಕ್ಷೆಯನ್ನು ಕೈಗೊಳ್ಳಲು ಅಗತ್ಯವಾದ ಸಲಕರಣೆಗಳೊಂದಿಗೆ ಆವರಣವನ್ನು ಪ್ರವೇಶಿಸಿತು. ಅದೇ ವೇಳೆ ಫಿರ್ಯಾದಿಯನ್ನು ಪ್ರತಿನಿಧಿಸುವ ವಕೀಲರಿಗೂ ಆವರಣದೊಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು. ಬೆಳಗ್ಗೆ ಮುಸ್ಲಿಂ ಕಡೆಯಿಂದ ಯಾವ ವಕೀಲರೂ ಬರಲಿಲ್ಲ.
    ನಾಲ್ವರು ಹಿಂದೂ ಮಹಿಳಾ ಅರ್ಜಿದಾರರ ಅರ್ಜಿಯನ್ನು ಅನುಮತಿಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಾ ಅಜಯ ಕೃಷ್ಣ ವಿಶ್ವೇಶ ಅವರು ತಮ್ಮ ಆದೇಶದಲ್ಲಿ, ವಿವಾದಿತ ಕಟ್ಟಡದ 3 ಗುಮ್ಮಟಗಳ ಕೆಳಗೆ ಗ್ರೌಂಡ್ ಪೆನೆಟ್ರೀಟಿಂಗ್ ರಾಡಾರ್ (GPR) ಸಮೀಕ್ಷೆಯನ್ನು ನಡೆಸುವಂತೆ ಮತ್ತು ಅಗತ್ಯವಿದ್ದರೆ ಉತ್ಖನನವನ್ನು ನಡೆಸುವಂತೆ ಎಎಸ್‌ಐಗೆ ಸೂಚಿಸಿದ್ದಾರೆ. ಮಹಿಳಾ ಅರ್ಜಿದಾರರು ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸಂಕೀರ್ಣದ ಹೊರ ಗೋಡೆಯ ಮೇಲೆ ಮಾ ಶೃಂಗಾರ್ ಗೌರಿಯನ್ನು ಪೂಜಿಸುವ ಹಕ್ಕನ್ನು ಕೋರಿ ಮೊಕದ್ದಮೆ ಹೂಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ