ಬೀವಾರ್ ನಲ್ಲಿ ಮುಸ್ಲಿಂ ಯುವಕರ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ: ಕೋಮುವಾದಿ ಸಂಘಟನೆಗಳಿಂದ ಘರ್ಷಣೆ

ರಾಜಸ್ಥಾನದ ಬೀವಾರ್ ಜಿಲ್ಲೆಯ ವಿಜಯನಗರ ಎಂಬಲ್ಲಿ ಕೆಲವು ಮುಸ್ಲಿಂ ಯುವಕರು ಅಪ್ರಾಪ್ತ ಯುವತಿಯರನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಮತ್ತು ಲೈಂಗಿಕ ದುರ್ಬಳಕೆಗೆ ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಕೋಮುವಾದಿ ಸಂಘಟನೆಗಳು ಜಿಲ್ಲೆಯ ಹಲವಾರು ನಗರಗಳಲ್ಲಿ ಘರ್ಷಣೆಯ ಸ್ಥಿತಿಯನ್ನು ನಿರ್ಮಿಸಿವೆ. ಇವು ಮೆರವಣಿಗೆ ನಡೆಸಿರುವುದಲ್ಲದೇ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ. ಮಾತ್ರವಲ್ಲ, ಯುವಕರ ನೆಪದಲ್ಲಿ ಇಡೀ ಮುಸ್ಲಿಂ ಸಮುದಾಯವನ್ನು ಹೊಣೆ ಮಾಡಿ ಭಾಷಣ ಮಾಡುತ್ತಿವೆ.
ನಿಮ್ಮ ಮನೆ ಮಾಲಕತ್ವದ ದಾಖಲೆಗಳನ್ನು ಸಾಬೀತುಪಡಿಸಿ ಎಂದು ಇದೀಗ ಸ್ಥಳೀಯ ಮುನ್ಸಿಪಾಲಿಟಿಯು ಆರೋಪಿತ ಮುಸ್ಲಿಂ ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿದೆ. ಮಾತ್ರ ಅಲ್ಲ ಈ ಮನೆಗಳಲ್ಲಿ ಒಂದನ್ನು ಈಗಾಗಲೇ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ.
ಇದೇ ವೇಳೆ ಸ್ಥಳೀಯ ಮಸೀದಿ ಮತ್ತು ಕಬರಸ್ತಾನಗಳಿಗೂ ಕೂಡ ನೋಟಿಸು ಜಾರಿಗೊಳಿಸಿದೆ. ಹಾಗೆಯೇ ಸಮಾಧಿ ಸ್ಥಳದ ಗೇಟ್ ಗೆ ಸೀಲ್ ಹಾಕಿದೆ.
ಆರೋಪಿತ ಯುವಕರು 19ರಿಂದ 21 ವಯಸ್ಸಿನ ಒಳಗಿನವರು ಎಂದು ತಿಳಿದುಬಂದಿದೆ. ಐದು ಹೆಣ್ಣು ಮಕ್ಕಳ ಕುಟುಂಬದವರು ನೀಡಿದ ದೂರಿನಂತೆ 11 ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಮ್ಮನ್ನು ಸೋಶಿಯಲ್ ಮೀಡಿಯಾದ ಮೂಲಕ ಯುವಕರು ಸಂಪರ್ಕಿಸಿದ್ದಾರೆ, ಚೀನಾ ನಿರ್ಮಿತ ಮೊಬೈಲ್ ಅನ್ನು ಕೊಟ್ಟಿದ್ದಾರೆ ಮತ್ತು ಲೈಂಗಿಕವಾಗಿ ದುರುಪಯೋಗಪಡಿಸಿದ್ದಾರೆ ಎಂದು ಈ ಹೆಣ್ಣು ಮಕ್ಕಳು ಆರೋಪಿಸಿದ್ದಾರೆ. ಈಗಾಗಲೇ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಮೂವರು ಮಂದಿ ಅಪ್ರಾಪ್ತರು ಎಂದು ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj