ಚೈತ್ರಾಗೆ ಆಶ್ರಯ ನೀಡಿದ್ದ ಕಾಂಗ್ರೆಸ್ ವಕ್ತಾರೆ, RSS ಮುಖಂಡನ ವಿರುದ್ಧವೂ ಕ್ರಮಕೈಗೊಳ್ಳಿ: WIM ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲಾ ಆಗ್ರಹ
ಬೈಂದೂರಿನ ಉದ್ಯಮಿ ಹಾಗೂ ಬಿಜೆಪಿ ಪಕ್ಷದ ಮುಖಂಡರೊಬ್ಬರಿಗೆ ಪಕ್ಷದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಏಳು ಕೋಟಿ ರೂಪಾಯಿಗಳನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಚೈತ್ರಾ ಕುಂದಾಪುರ ಎಂಬ ನಕಲಿ ಹಿಂದೂ ಹೋರಾಟಗಾರ್ತಿಯನ್ನು ಬಂಧಿಸಿರುವ ಪೋಲೀಸರ ಕ್ರಮ ಸ್ವಾಗತಾರ್ಹ ವಿಮೆನ್ ಇಂಡಿಯಾ ಮೂವ್ಮೆಂಟ್ ಉಡುಪಿ ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲಾ ತಿಳಿಸಿದ್ದಾರೆ.
ದ್ವೇಷಭಾಷಣದ ಮೂಲಕ ಕುಖ್ಯಾತಿ ಹೊಂದಿದ್ದ ಚೈತ್ರ ರೌಡಿಸಂನಲ್ಲೂ ಗುರುತಿಸಿಕೊಂಡಿದ್ದರು. ಇದೀಗ ವಂಚನೆ ಪ್ರಕರಣದಲ್ಲೂ ಸಿಕ್ಕಿಬಿದ್ದಿರುವುದು ಅತಿಶಯೋಕ್ತಿ ಅಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ ಇನ್ನಷ್ಟು ಪ್ರಕರಣಗಳು ಬಯಲಾಗಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಈ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಗೆ ಪೊಲೀಸರಿಂದ ತಪ್ಪಿಸಲು ಆಶ್ರಯ ನೀಡಿದ ಕಾಂಗ್ರೆಸ್ ವಕ್ತಾರೆ, ವಂಚನೆಗೊಳಗಾದ ಉದ್ಯಮಿ ಮತ್ತು ಸ್ವತಃ ಚೈತ್ರಾಳೇ ತಿಳಿಸಿರುವಂತೆ ಈ ವಂಚನೆಯ ಹಿಂದಿರುವ ಪ್ರಭಾವಿ RSS ಮುಖಂಡನನ್ನೂ ಸಮಗ್ರ ತನಿಖೆಗೊಳಪಡಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಎಂದು ನಾಝಿಯಾ ನಸ್ರುಲ್ಲಾ ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.