ಅಂಬರೀಶ್ ಅವರು ಸಹಜವಾಗಿ ಬದುಕು ನಡೆಸಿದರು - ಸಿಎಂ ಬೊಮ್ಮಾಯಿ - Mahanayaka
7:37 PM Wednesday 11 - December 2024

ಅಂಬರೀಶ್ ಅವರು ಸಹಜವಾಗಿ ಬದುಕು ನಡೆಸಿದರು – ಸಿಎಂ ಬೊಮ್ಮಾಯಿ

basavaraj bomayi
28/03/2023

ಬೆಂಗಳೂರು: ಅಂಬರೀಶ್ ಅಂದರೆ ಒಂದು ಶಕ್ತಿ. ಅವರ ವ್ಯಕ್ತಿತ್ವದಲ್ಲೇ ಆ ಶಕ್ತಿ ಇತ್ತು. ಅಂಬರೀಶ್ ಎಲ್ಲಿಯೇ ಹೋದರೂ ಸಂತೋಷ ಇರುತ್ತಿತ್ತು. ಗಂಭೀರ ಚರ್ಚೆ ಸಮಯದಲ್ಲೂ ಅಂಬರೀಶ್ ಬಂದರೆ ಸಮಸ್ಯೆಗೆ ಪರಿಹಾರ ಸಿಗುತ್ತೆ ಅನ್ನೋ ಸಂತೋಷ ಇರುತ್ತಿತ್ತು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಅವರು ಇಂದು ಕಂಠೀರವ ಸ್ಟುಡಿಯೋದಲ್ಲಿ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಸ್ಮಾರಕ ಉದ್ಘಾಟನೆ ಮಾಡಿ ಮಾತನಾಡಿದರು.

ಒಬ್ಬ ವ್ಯಕ್ತಿಗೆ ಆತ್ಮಸಾಕ್ಷಿಯಾಗಿ ಬದುಕು ನಡೆಸೋದು ಕಷ್ಟವಾದರೂ ಅಂಬರೀಶ್ ಅವರು ಸಹಜವಾಗಿ ಬದುಕನ್ನು ನಡೆಸಿದರು. ಅಂಬರೀಶ್ ತನಗೆ ಸರಿ ಅನ್ನಿಸಿದ್ದನ್ನು ಮಾಡುತ್ತಿದ್ದರು. ಆತ ತನ್ನ ಜೀವನದಲ್ಲಿ ಪಶ್ಚಾತ್ತಾಪ ಪಟ್ಟಿದ್ದೇ ಇಲ್ಲ. ಆತ ಚಲನಚಿತ್ರದಲ್ಲೂ ಕಷ್ಟ ಪಟ್ಟು ನಟನೆ ಮಾಡುತ್ತಿರಲಿಲ್ಲ. ಆತ ಸಹಜವಾಗಿ ತನ್ನ ಬದುಕಿನಲ್ಲಿ ಮುಂದೆ ಬಂದಿದ್ದರು. ಆತ ಯಾವುದನ್ನೂ ಬಯಸಿ ಪಡೆದುಕೊಂಡವನಲ್ಲ. ತನಗೆ ಸಿಕ್ಕಿದ್ದನ್ನೇ ಶ್ರೀಮಂತಗೊಳಿಸಿದರು. ಸಿನಿಮಾ ರಂಗದಲ್ಲಿ ಬಹಳಷ್ಟು ಜನರಿಗೆ ಸಹಾಯ ಸಿಕ್ಕಿದ್ದರೆ ಅದು ಅಂಬರೀಶ್ ಅವರಿಂದ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕ:
ಅಂಬರೀಶ್ ರಾಜಕಾರಣಕ್ಕೆ ಬಂದಿದ್ದೂ ಆಕಸ್ಮಿಕವಾಗಿ. ಆತ ಯಾಕೆ ರಾಜಕಾರಣಕ್ಕೆ ಬಂದಿದ್ದು ಎಂದು ನನಗೆ ಗೊತ್ತು. ನಾವೆಲ್ಲರೂ ಸೇರಿ ರಾಮನಗರ ಉಪಚುನಾವಣೆಯಲ್ಲಿ ನಿಲ್ಲಿಸಿದ್ವಿ. 22 ದಿನ ಆತನ ಜತೆಯಲ್ಲೇ ಪ್ರಚಾರ ಮಾಡಿದ್ದೂ ನನಗೆ ನೆನಪಿದೆ. ಆತ ಸೋಲು ಗೆಲುವನ್ನು ಸಮನಾಗಿ ತೆಗೆದುಕೊಂಡಿದ್ದರು. ಯಾವುದೇ ಸ್ಥಾನಕ್ಕೆ ವ್ಯಾಮೋಹ ಇಲ್ಲೇ ಕೆಲಸ ಮಾಡಿದ್ದರು. ಕಾವೇರಿ ವಿಚಾರದಲ್ಲಿ ಒಂದು ಕ್ಷಣವೂ ಯೋಚನೆ ಮಾಡದೇ ರಾಜೀನಾಮೆ ಕೊಟ್ಟ ಸಂಸದ ಅಂಬರೀಶ್ ಒಬ್ಬರೇ. ಪ್ರಧಾನಿ ಮತ್ತೆ ಕರೆದರೂ ಅತ್ತ ತಿರುಗಿಯೂ ನೋಡಲಿಲ್ಲ. ಹಾಗಾಗಿ ಆತನ ನೆನಪು ಸದಾ ಚಿರಸ್ಥಾಯಿ ಆಗಿ ಉಳಿದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಾವು 37 ವರ್ಷದ ಗೆಳೆಯರು:
ನಾನು ಅಂಬರೀಶ್ ಸುಮಾರು 37 ವರ್ಷಗಳಿಂದ ಗೆಳೆಯರು. ಹಲವಾರು ಸಂದರ್ಭಗಳಲ್ಲಿ ಭೇಟಿ ಆಗದಿದ್ದರೂ ಕೂಡ ನಮ್ಮ ಪ್ರೀತಿ ವಿಶ್ವಾಸ ಹಾಗೇ ಇತ್ತು. ನಾನು ಚುನಾವಣೆಗೆ ನಿಂತ ಕ್ಷೇತ್ರದಲ್ಲಿ ಆತ ಗೊತ್ತಿಲ್ಲದೇ ವಿರೋಧ ಅಭ್ಯರ್ಥಿಯ ಪ್ರಚಾರಕ್ಕೆ ಬರುತ್ತಿದ್ದ. ಅಲ್ಲಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಎಂದು ಗೊತ್ತಾದ ಕೂಡಲೇ ನನ್ನ ಗೆಳೆಯನ ವಿರುದ್ಧ ನಾನು ಪ್ರಚಾರ ಮಾಡುವುದಿಲ್ಲ ಎಂದು ಅರ್ಧಕ್ಕೆ ವಾಪಸ್ ಹೋದರು. ಆತ ಜೀವಕ್ಕೆ ಜೀವ ಕೊಡುವ ಗೆಳೆಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಂದಿನ ದಿನದ ತಮ್ಮ ಸ್ನೇಹವನ್ನು ನೆನೆಸಿಕೊಂಡರು.

ಆತ ಡಾಕ್ಟರ್ ಮಾತು ಕೇಳಲಿಲ್ಲ:
ಅಂಬರೀಶ್ ಆಸ್ಪತ್ರೆ ಸೇರುವ 2 ದಿನ ಮುಂಚೆ ನಾವು ಭೇಟಿ ಮಾಡಿದ್ದೆವು. ಡಾಕ್ಟರ್ ಸಹ ಬಂದದ್ದರು. ಆದರೆ ಅಂಬರೀಶ್ ಡಾಕ್ಟರ್ ಮಾತು ಕೇಳಲಿಲ್ಲ. ಸಿಂಗಪೂರ್ ನಲ್ಲಿದ್ದಾಗಲೂ ಆತ ನನ್ನೊಂದಿಗೆ ಮಾತನಾಡಿದ್ದರು. ಆತ ಉತ್ಸಾಹಪೂರ್ವಕವಾಗಿ ಬದುಕಿದ್ದರು. ಸುಮಲತಾ ಅವರ ಸಂತೋಷದಲ್ಲಿ ನಾವೆಷ್ಟು ಪಾಲುದಾರರೋ ಅವರ ದುಃಖದಲ್ಲೂ ನಾವು ಇರುತ್ತೀವಿ. ಅಂಬರೀಶ್ ಪುತ್ರ ಅಭಿಷೇಕ್ ಕೂಡ ಡಬಲ್ ರೆಬೆಲ್ ಇದಾನೆ. ರಾಜ್ಯದ ಜನರು ಅವನಿಗೂ ಆಶೀರ್ವಾದ ಮಾಡಬೇಕು. ಅಂಬರೀಶ್ ಗೆ ಕೊಟ್ಟ ಪ್ರೀತಿಗಿಂತ ಡಬಲ್ ಪ್ರೀತಿಯನ್ನು ಅಭಿಷೇಕ್ ಗೆ ಕೊಡಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಮ್ಯೂಸಿಯಂ ಕೂಡ ಮಾಡುತ್ತೀವಿ:
ಈಗ ಸ್ಮಾರಕ ಪೂರ್ತಿಯಾಗಿದೆ. ಹಾಗಾಗಿ ಅದನ್ನು ಉದ್ಘಾಟನೆ ಮಾಡಿದ್ದೇವೆ. ಮ್ಯೂಸಿಯಂ ಕೂಡ ಕೆಲವೇ ತಿಂಗಳಲ್ಲಿ ಪೂರ್ತಿಯಾಗಲಿದ್ದು, ನಾವೇ ಬಂದು ಅದನ್ನು ಉದ್ಘಾಟನೆ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಒರಟನಾದರೂ ಹೃದಯದಿಂದ ಮೃದು:
ಈ ನಡುವೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಅಂಬರೀಶ್ ನಮ್ಮನ್ನು ಅಗಲಿದ್ದರೂ ಅವರ ನೆನಪು ಸದಾ ಕಾಲ ನಮ್ಮಲ್ಲಿರುತ್ತದೆ. ಸಾವಿನ ನಂತರವೂ ಅಂಬರೀಶ್ ಬದುಕುತ್ತಿದ್ದಾರೆ. ಅವರ ಸವಿನೆನಪಿಗಾಗಿ ಸ್ಮಾರಕ ಹಾಗೂ ಮ್ಯೂಸಿಯಂ ಅನ್ನು ಸರ್ಕಾರ ಮಾಡುತ್ತಿದೆ. ನನ್ನ ಅತ್ಯಂತ ಆತ್ಮೀಯ ಮಿತ್ರನ ಸ್ಮಾರಕಕ್ಕೆ ನಾನೇ ಅಡಿಗಲ್ಲು ಹಾಕಿ ನಾನೇ ಉದ್ಘಾಟನೆ ಮಾಡುತ್ತಿರುವುದು ನನ್ನ ಯೋಗಾಯೋಗ. ಸರಳ ಹೃದಯಿ ಮಾತಿನಲ್ಲಿ ಒರಟನಾದರೂ ಹೃದಯದಿಂದ ಮೃದು. ಆತ ಕೊಡುಗೈ ದಾನಿ. ಆತನ ಸ್ಮಾರಕವನ್ನು ಜನರು ಬಂದು ನೋಡಿ ಅಭಿಮಾನ ಪಡಬೇಕು ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಸಂಸದ ಸದಾನಂದ ಗೌಡ, ರಾಘವೇಂದ್ರ ರಾಜ್ ಕುಮಾರ್, ಸಚಿವ ಗೋಪಾಲಯ್ಯ, ಚಲನಚಿತ್ರ ಮಂಡಳಿ ಅಧ್ಯಕ್ಷ ಭಾಮಾ ಹರೀಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ