ಅಂಬೇಡ್ಕರ್ ವಾದದ ಆಚರಣೆ ಮತ್ತು ಸಿ.ಜಿ.ಲಕ್ಷ್ಮೀಪತಿ
- ಧಮ್ಮಪ್ರಿಯಾ. ಬೆಂಗಳೂರು
ನನಗೆ ಈ ವ್ಯಕ್ತಿಯ ಹೆಸರು ಪದವಿ ಕಾಲೇಜಿನಲ್ಲಿದ್ದಾಗಲೇ ಬಹಳ ಚಿರಪರಿಚಿತವಾಗಿತ್ತು. ಎಂ ಎ ಸ್ನಾತಕೋತ್ತರ ಪದವಿ ಓದುವಾಗ ನನಗೆ ಒಂದು ಪುಸ್ತಕ ದೊರೆಯಿತು. ಆ ಪುಸ್ತಕದ ಶಿರೋನಾಮೆಯೇ ಓದುಗರ ಮನಸ್ಸನ್ನು ಸೆಳೆಯುವಂತಿತ್ತು. ಪುಸ್ತಕದ ಮುನ್ನುಡಿ ನನ್ನನ್ನು ಓದಿಸಲು ಪ್ರಾರಂಬಿಸಿಬಿಟ್ಟಿತು. ಓದುತ್ತಾ ಓದುತ್ತಾ ಗಾಂಧೀಜಿಯವರ ಬದುಕನ್ನು ವಿಭಿನ್ನವಾಗಿ ನನ್ನ ಮನದಾಳದಲ್ಲಿ ಚಿತ್ರಿಸುತ್ತಿತ್ತು. ಅಲ್ಲಿಯವರೆವಿಗೂ ನಾನು ಓದಿಕೊಂಡಿದ್ದ ಗಾಂಧೀಜಿಯ ಬದುಕನ್ನು ಇನ್ನೊಂದು ದಿಕ್ಕಿನಲ್ಲಿ ಯೋಚನೆ ಮಾಡಲು ನನ್ನನ್ನು ಪ್ರೇರೇಪಿಸಿತು.
ಹೀಗೆ ಪುಸ್ತಕ ರೂಪದಲ್ಲಿ ಪರಿಚಯವಾದ ಒಬ್ಬ ಬರಹಗಾರರು, ಸಮಾಜದ ಬಗ್ಗೆ ಕಾಳಜಿಯುಳ್ಳ ಚಿಂತಕರು, ಸಾಮಾಜಿಕ ಅಸಮಾನತೆ ತೊಲಗಬೇಕು ಎಂದು ಬಯಸುವ ಚಿಕಿತ್ಸಕರು ಬಹಳ ವಿರಳ. ಇವರ ಹೆಸರು ನಮಗೆ ಚಿರಪರಿಚಿತ. ಇವರು ಪರಿಚಯವಾಗಿದ್ದು ಕೇವಲ ಒಂದಿಷ್ಟು ದಿನಗಳ ಹಿಂದೆಯಷ್ಟೇ. ಆದರೆ ಇವರು ಪರಿಚಯವಾದ ನಂತರ ಸ್ವಲ್ಪ ಮಟ್ಟಿಗೆ ಮಾತನಾಡಲಾರಂಭಿಸಿದೆ. ನಿಮ್ಮ ಬೆತ್ತಲೆವೃಕ್ಷ ನನಗೆ ಬಹಳ ಇಷ್ಟವಾದ ಪುಸ್ತಕ ಎಂದಾಕ್ಷಣ ಅವರ ಮುಖದಲ್ಲಿ ನಗು ಮೂಡಿತು. ನಿಮಗೆ ಓದುವ ಹವ್ಯಾಸವಿದ್ದರೆ ನನ್ನ “ಕ್ಯಾಸ್ಟ್ ಕೆಮಿಸ್ಟ್ರಿ” ಓದಿ ಎನ್ನುತ್ತಾ ನಲ್ಮೆಯ ಗೆಳೆಯನಿಗೆ ಎಂದು ಬರೆದು ಕೊಟ್ಟರು. ನಂತರ ಅವರ ಲೋಕದೃಷ್ಠಿ ಓದಲು ತಿಳಿಸರು. ಇವೆಲ್ಲ ಪುಸ್ತಕಗಳನ್ನು ನನಗೆ ನೆನಪಿನ ಕಾಣಿಕೆಯಾಗಿ ಕೊಟ್ಟಾಗ ಬಹಳ ಸಂತೋಷವಾಯಿತು.
ಪುಸ್ತಕ ಪ್ರೀತಿ ನಮ್ಮನ್ನು ಒಳ್ಳೆಯ ಭಾವಜೀವಿಗಳನ್ನಾಗಿಸಿತು. ನಂತರ ನಿತ್ಯ ಸಂಜೆ ಮಾತನಾಡುವುದು ನಮ್ಮ ಹವ್ಯಾಸವಾಯಿತು. ಒಂದು ದಿನ ನನ್ನದೊಂದು ಪುಸ್ತಕವನ್ನು ನಿಮಗೆ ಕೊಡಬೇಕಾಗಿದೆ ಎಂದು ಅಂಬೇಡ್ಕರ್ ವಾದದ ಆಚರಣೆ ಎನ್ನುವ ಒಂದು ಪುಸ್ತಕವನ್ನು ನನಗೆ ಕೊಟ್ಟು ಇದನ್ನು ಓದಿ ನನಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಹೇಳಿದರು. ಬಾಬಾಸಾಹೇಬರ ಸಿದ್ಧಾಂತಗಳು ನಮ್ಮ ಬದುಕಿನ ದಾರಿ ದೀಪವಾಗಿವೆ ಎಂದು ಅರಿತಿದ್ದ ನನಗೆ ಈ ಪುಟ್ಟ ಪುಸ್ತಕವನ್ನು ಓದುತ್ತಿದ್ದಂತೆ ನಾವು ಮೊದಲು ಮಾನಸಿಕವಾಗಿ ಸದೃಢರಾಗಬೇಕು ಎಂದು ಅರ್ಥವಾಗತೊಡಗಿತು. ನನಗೆ ಅಲ್ಲಿಯವರೆವಿಗೂ ಕೇವಲ ವ್ಯಕ್ತಿಯಾಗಿ ಕಾಣುತ್ತಿದ್ದ ಬಾಬಾಸಾಹೇಬರು ಈ ಪುಸ್ತಕವನ್ನು ಓದಿದ ಮೇಲೆ ಒಂದು ಯುಗದ ಶಕ್ತಿಯಾಗಿ, ನೊಂದ ಜನರ ಬದುಕಾಗಿ, ಮಾನಸಿಕ ವೈರುಧ್ಯಗಳನ್ನು ಬಿಡಿಸಿಕೊಳ್ಳುವ ಒಂದು ಸರಳ ಸೂತ್ರವಾಗಿ ಕಾಣತೊಡಗಿದರು.
ಬಾಬಾಸಾಹೇಬರು ಹೇಳುವಂತೆ “ದೈಹಿಕ ಗುಲಾಮಗಿರಿ ಕೆಟ್ಟದ್ದು ನಿಜ, ಆದರೆ ಮಾನಸಿಕ ಗುಲಾಮಗಿರಿ ಅದಕ್ಕಿಂತಲೂ ಹೀನಾಯವಾದದ್ದು, ಮಾನಸಿಕ ಗುಲಾಮಗಿರಿಗೆ ಸಿಕ್ಕವರ ಬದುಕು ಹಂದಿ ನಾಯಿಗಳಿಗೂ ಕಡೆ” ಎಂದಿದ್ದಾರೆ.
ಬಾಬಾಸಾಹೇಬರನ್ನು ಅರಿತವರಿಗಿಂತ ಅವರ ಸಿದ್ಧಾಂತಗಳನ್ನು ಬಂಡವಾಳ ಮಾಡಿಕೊಂಡು ಸುಖವುಂಡವರೇ ಹೆಚ್ಚು. ಅವರ ಹೆಸರು ಹೇಳುತ್ತಿದ್ದಂತೆ ಎಲ್ಲಿಲ್ಲದ ಅಭಿಮಾನ ಕೆಲವರಲ್ಲಿ ಉಕ್ಕಿ ಹರಿದು ಬಿಡುತ್ತದೆ. ಬಾಬಾಸಾಹೇಬರ ಮೂಲ ಆಶಯಗಳು ಮತ್ತು ಸಿದ್ಧಾಂತಗಳು ಏನು ಎಂದು ಒಮ್ಮೆ ಕೇಳಿದರೆ ಸುಮ್ಮನಾಗಿಬಿಡುತ್ತಾರೆ. ತಕ್ಷಣ ಬೇರೆ ಕೆಲಸಕ್ಕೆ ಬಾರದ ಚರ್ಚೆಗಳಿಗೆ ಇಳಿದು ಬಾಬಾಸಾಹೇಬರ ಮೂಲ ಆಶಯಗಳಿಗೆ ತಿಲಾಂಜಲಿಯಿಡುವ ಚಿಂತಕರೇ ನಮ್ಮ ಮದ್ಯೆ ಇರುತ್ತಾರೆ. ಅಂತಹ ನೆಪ ಮಾತ್ರದ ಚಿಂತಕರಿಗೆ ಬಾಬಾಸಾಹೇಬರ ನಿಜಸ್ವರೂಪ, ಅವರ ವಿಚಾರಧಾರೆಯನ್ನು ತಿಳಿಸುವ ಒಂದು ಸಣ್ಣ ಪ್ರಯತ್ನವೇ ಡಾ. ಸಿ ಜಿ ಲಕ್ಷ್ಮೀಪತಿ ಯವರ ಅಂಬೇಡ್ಕರ್ ವಾದದ ಆಚರಣೆ ಎಂದರೆ ತಪ್ಪಾಗಲಾರದು.
ಈ ಪುಸ್ತಕದಲ್ಲಿನ ಅಧ್ಯಾಯಗಳು ಅಂಬೇಡ್ಕರ್ ವಿಚಾರಗಳನ್ನು ಕುರಿತು ಬರೆದ ಬರಹಗಳು ಎನ್ನುವುದಕ್ಕಿಂತ, ಅವರ ಅನುಯಾಯಿಗಳು ಬಾಬಾಸಾಹೇಬರನ್ನು ಹೇಗೆ ಅರ್ಥೈಸಿಕೊಳ್ಳಬೇಕು, ಇಂದು ಯಾವ ದಿಕ್ಕಿಗೆ ಸಾಗಿದ್ದಾರೆ ಎಂದು ಮನವರಿಕೆ ಮಾಡುವುದಾಗಿದೆ. ಲಕ್ಷ್ಮೀಪತಿಯವರು ಸಾಮಾಜಿಕ ಅಸಮಾನತೆಯನ್ನು ತೊಲಗಿಸುವಲ್ಲಿ ಬಾಬಾಸಾಹೇಬರ ಮೂಲ ಆಶಯಗಳನ್ನು ನಿಜವಾಗಿಯೂ ಅರಿತವರು. ಬಾಬಾಸಾಹೇಬರ ವಿಚಾರಗಳು ಒಂದು ಕಾಲಕ್ಕೆ ಮಾತ್ರ ಸೀಮಿತವಾಗಿರದೆ ಸರ್ವಕಾಲಕ್ಕೂ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಾ ಪ್ರಸ್ತುತತೆಗೆ ಸಿದ್ಧಾಂತಗಳನ್ನು ಅಳವಡಿಸಬೇಕು ಎಂದು ತಿಳಿಸಿಕೊಡಲಾಗಿದೆ. ಇದು ಕೇವಲ ಒಂದು ಪುಸ್ತಕ ಎನ್ನುವುದಕ್ಕಿಂತ ಮಹಾನಾಯಕನ ಸಿದ್ಧಾಂತಗಳನ್ನು ಅರಿತುಕೊಳ್ಳುವ ಒಂದು ಪೀಠಿಕೆ, ಮುನ್ನುಡಿಯಾಗಿದೆ. ಏನೂ ಅರಿಯದವರಿಗೊಂದು ಸಣ್ಣ ಕೈಪಿಡಿ ಎಂದರೂ ತಪ್ಪಾಗಲಾರದು.
ಅಂಬೇಡ್ಕರ್ ವಾದ ಎನ್ನುವುದೇ ಜಾಗತೀಕ ಮಟ್ಟಕ್ಕೆ ಒಂದು ಬೌದ್ಧಿಕ ಶಕ್ತಿ. ಶೋಷಣೆಯಿಂದ ಬಿಡುಗಡೆ, ವಿಭಿನ್ನ ಆಯಾಮಗಳ ಚಿಂತನಾ ಕ್ರಮ. ಹೊಸ ಆಲೋಚನೆಗಳ ವಿಭಿನ್ನ ಕ್ರಮಗಳು ಎನ್ನುವುದನ್ನು ಬಹಳ ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದಾರೆ. ಬಾಬಾಸಾಹೇಬರೇ ಹೇಳುವಂತೆ ಅಧಿಕಾರವೆಂಬುದು ಶೋಷಿತರ ವಿಮೋಚನೆಯ ಮೂಲ ಮಂತ್ರ ಎನ್ನುವ ಮಾತು ಬಹಳ ಸತ್ಯವಾದದ್ದು. ಇದು ಸನಾತನಿಗಳಿಗೆ ಅರ್ಥವಾದಂತೆ ಅಂಬೇಡ್ಕರ್ ವಾದಿಗಳಿಗೆ ಅರ್ಥವಾಗದಾಯಿತು. ಸನಾತನಿಗಳು ಅಂಬೇಡ್ಕರ್ ವಾದವನ್ನು ಉಂಡು ಅಧಿಕಾರದ ಗದ್ದುಗೆ ಏರಿದರು. ನಿಮ್ನವರ್ಗಗಳನ್ನು ಅಧಿಕಾರದಿಂದ ದೂರವಿಡುವ ಹುನ್ನಾರವಾಗಿ “ರಾಜಕೀಯ ಅಧಿಕಾರವೆಂಬುದು ಪಾಪಿಗಳ ಪರಮೋಚ್ಚ ಹೀನಾಯ ಸ್ಥಿತಿಯ ಕಟ್ಟಕಡೆಯ ಹಂತವಾಗಿದೆ” ಎಂದರು. ಇದರ ಮೂಲಕ ಶೇಕಡ 85 ರಷ್ಟು ಜನರನ್ನು ರಾಜಕೀಯ ಅಧಿಕಾರದಿಂದ ದೂರವಿಡಲಾಯಿತು. ಮನುವಾದಿಗಳು ಮಾಡಿದ ಕುತಂತ್ರವು ಮಾನಸಿಕ ಗುಲಾಮಗಿರಿಗೆ ಜನ ಸಾಮಾನ್ಯರನ್ನು ದೂಡುತ್ತಾ ಇಂದಿಗೂ ಅಸಮಾನಯಲ್ಲೇ ಬದುಕುವ ವ್ಯವಸ್ಥೆ ನಿರ್ಮಾಣವಿದೆ ಎಂದು ತಿಳಿಸಿಕೊಟ್ಟಿದ್ದಾರೆ.
ಇನ್ನು ಶಿಕ್ಷಣ ಕ್ಷೇತ್ರಕ್ಕೆ ಬಂದಾಗ ಬಡವರ ಮಕ್ಕಳಿಗೆ ಸರ್ಕಾರಿ ಶಾಲೆಗಳು, ಶ್ರೀಮಂತರ ಮಕ್ಕಳಿಗೆ ಖಾಸಗೀ ಮತ್ತು ಉತ್ತಮ ಸೌಕರ್ಯ ಹೊಂದಿರುವ ಶಾಲೆಗಳು ಎಂದು ಶ್ರೇಣೀಕರ ವ್ಯವಸ್ಥೆಯನ್ನು ಹಾಗೆಯೇ ಕಾಪಾಡುವಂತೆ ಸೂಚಿಸಲಾಗಿದೆ. ಇವೆರಡರ ಮಧ್ಯದಲ್ಲಿ ತರರತಮ್ಯಗಳು ಹೆಚ್ಚಾಗಿ ಶ್ರೇಷ್ಠತೆ ಮತ್ತು ಕನಿಷ್ಠತೆಯ ಮನೋಭಾವ ಬೆಳೆದಿದೆ ಎಂದು ತಿಳಿಯಬಹುದಾಗಿದೆ. ಇಂತಹ ಮನೋಭಾವದಿಂದ ಹೊರಬರುವ ಪ್ರಯತ್ನವನ್ನು ಅಂಬೇಡ್ಕರ್ ವಾದಿಗಳು ನಿರ್ಮಾಣಮಾಡಬೇಕು. ಇದು ಇವರುಗಳ ಆದ್ಯ ಕರ್ತವ್ಯವಾಗಿದೆ. ಈ ದೇಶದ ದಲಿತರು ತಮಗೆ ಅರಿವಿಲ್ಲದವರಂತೆ ಇಂದಿಗೂ ದೇವರು, ದಿಂಡಿರು, ಭಜನೆ, ಹೋಮ, ಹವನ,ಶಾಸ್ತ್ರ, ಪುರಾಣ ಮುಂತಾದವುಗಳಲ್ಲಿ ಮಾನಸಿಕವಾಗಿ ಬಂದಿಯಾಗಿದ್ದಾರೆ. ಈಗೆ ಮಾನಸಿಕವಾಗಿ ಗುಲಾಮರಾದಾಗ ಅಂಬೇಡ್ಕರ್ ವಾವೆಂಬುದು ಹೇಗೆ ಗಟ್ಟಿಗೊಳ್ಳಲು,ತನ್ನ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಲು ಸಾಧ್ಯ.? ಅಲ್ಲದೆ ಮುಂದೆ ಶೋಷಿತ ಜನಾಂಗಕ್ಕೆ ಬಿಡುಗಡೆಯೆಂಬುದು ಹೇಗೆ ಸಾಧ್ಯವಾಗುತ್ತದೆ ಎಂಬುದು ಚಿಂತಕರ ಗಂಭೀರ ಪ್ರಶ್ನೆಯಾಗಿದೆ.
ಆದರೆ, “ನನ್ನ ಜನ ಈ ದೇಶವನ್ನು ಆಳುವ ದೊರೆಗಳಾಗಬೇಕು ನಾನು ಅದನ್ನು ಕಣ್ಣಾರೆ ಕಾಣಬೇಕು” ಎಂದು ಹೇಳುತ್ತಿದ್ದ ಬಾಬಾಸಾಹೇಬರ ಕನಸನ್ನು ಇಂದು ನಾವುಗಳು ನುಚ್ಚುನೂರು ಮಾಡಿದ್ದೆವೆ. ಇವರ ಹೆಸರು ಹೇಳಿಕೊಂಡು, ಬಾಬಾಸಾಹೇಬರು ಕೊಟ್ಟ ಸವಲತ್ತುಗಳನ್ನು ದುರುಪಯೋಗ ಪಡಿಸಿಕೊಂಡು, ಪರಪಕ್ಷದ ಹಿತ್ತಿಲ ಕೊಟ್ಟಿಗೆಯೊಳಗೆ ಹೋಗಿ ಪಕ್ಷದ ನಿಷ್ಠೆಗಾಗಿ ದುಡಿಯುವ ನಾಯಕರಾಗಿದ್ದಾರೆಯೇ ಹೊರತು ಬಾಬಾಸಾಹೇಬರ ಆಶಯದಂತೆ ಆಳುವ ದೊರೆಗಳಾಗುತ್ತಿಲ್ಲ. ಕಾರಣ ಬಾಬಾಸಾಹೇಬರ ಮೂಲ ಸಿದ್ಧಾಂತಗಳು ಇಂದಿನ ಜನ ನಾಯಕರಿಗೆ, ಅಂಬೇಡ್ಕರ್ ವಾದಿಗಳಿಗೆ ಅರ್ಥವೇ ಆಗುತ್ತಿಲ್ಲ ಎನ್ನುವುದಾಗಿದೆ. ಇನ್ನು ಧರ್ಮದ ವಿಚಾರವಾಗಿ ಮಾತನಾಡುವಾಗ ಅಂಬೇಡ್ಕರ್ ವಾದಿಗಳು, ದಿನ ನಿತ್ಯವೂ ಬೆಳಿಗ್ಗೆಯಿಂದ ಸಂಜೆವರೆಗೂ, ಮನೆಗೆ ಅಡಿಪಾಯ ಹಾಕುವುದರಿಂದ ಗೃಹಪ್ರವೇಶದ ವರೆವಿಗೂ ವೈದಿಕ ಪರಂಪರೆಯ ವಾರಸುದಾರರಂತೆ ವರ್ತಿಸುತ್ತಾರೆ. ಇದು ಅಂಬೇಡ್ಕರ್ ರವರ ಸಿದ್ಧಾಂತಗಳಿಗೆ ಎಳ್ಳುನೀರು ಬಿಟ್ಟಂತೆ ಎನ್ನುವುದನ್ನು ಅರಿಯಬೇಕಾಗಿದೆ.
ಸಾಮಾಜಿಕ ಅಸಮಾನತೆಯ ಬೇರು ಜಾತಿ ವ್ಯವಸ್ಥೆಯಲ್ಲಿದೆ,
ಜಾತಿವ್ಯವಸ್ಥೆಯ ಬೇರು ವರ್ಣಾಶ್ರಮ ಧರ್ಮದಲ್ಲಿದೆ,
ವರ್ಣಾಶ್ರಮದ ಬೇರು ಮನುಧರ್ಮಶಾಸ್ತ್ರದಲ್ಲಿದೆ,
ಮನುಧರ್ಮ ಶಾಸ್ತ್ರದ ಬೇರು ಬ್ರಾಹ್ಮಣ ವಾದದಲ್ಲಿದೆ,
ಬ್ರಾಹ್ಮಣ ವಾದದ ಬೇರು ರಾಜಕೀಯ ಅಧಿಕಾರದಲ್ಲಿದೆ.
ಇಂತಹ ರಾಜಕೀಯ ಅಧಿಕಾರವೆಂಬುದು ಶೋಷಿತ ಜನಾಂಗಕ್ಕೆ ಸಿಕ್ಕಿದ್ದೇ ಆದರೆ ಸಮಾಜದಲ್ಲಿನ ಅಸಮಾನತೆ, ಶೋಷಣೆ ಎಲ್ಲವೂ ತನ್ನಷ್ಟಕ್ಕೆ ತಾನೇ ದೂರವಾಗುತ್ತವೆ. ಆದರೆ ಇವರ ಸಿದ್ಧಾಂತವನ್ನು ಅಂಬೇಡ್ಕರ್ ವಾದಿಗಳು ಗಾಳಿಗೆ ತೂರುತ್ತಾ ಬಾಬಾಸಾಹೇಬರನ್ನೇ ಮಾರಾಟ ಮಾಡಲು ಹೊರಟಿದ್ದಾರೆ. ಇಂತಹ ಹಲವಾರು ವಿಚಾರಗಳನ್ನು “ಅಂಬೇಡ್ಕರ್ ವಾದದ ಆಚರಣೆ” ಪುಸ್ತಕ ಓದಿದ ಪ್ರತಿಯೊಬ್ಬ ಓದುಗರಿಗೂ ಸೂಕ್ಷ್ಮವಾಗಿ ಅರ್ಥವಾಗುತ್ತದೆ. ಆದ್ದರಿಂದು ಇದು ಅಂಬೇಡ್ಕರ್ ವಾದಿಗಳಿಗೊಂದು ಪುಟ್ಟ ಕೈಪಿಡಿ ಎಂತಲೂ ಹೇಳಬಹುದು.
ಅಂಬೇಡ್ಕರ್ ವಾದ ಎನ್ನುವುದು ನಿಂತ ನೀರಿನಂತಲ್ಲಾ. ಸಮಯ ಸಂದರ್ಭಕ್ಕೆ ತಕ್ಕಂತೆ ವಿಭಿನ್ನ ನೆಲೆಗಳಲ್ಲಿ ನೊಂದ ಜನರ ವಿಮೋಚನೆಗಾಗಿ ಬಳಸುವ ಒಂದು ಸಾಧನ,ವಿಮೋಚನೆಯ ಮೂಲ ಮಂತ್ರ, ನೊಂದ ಜನರಿಗೊಂದು ಅಸ್ತ್ರ ಎನ್ನಬಹುದು. ಅದಕ್ಕಾಗಿ ಬಾಬಾಸಾಹೇಬರ ಸಿದ್ಧಾಂತವನ್ನು ದಾದಾಸಾಹೇಬ್ ಕಾನ್ಷಿರಾಂ ಸಾಹೇಬರು ಬಿಗಿದಪ್ಪಿಕೊಂಡರು. ಅದನ್ನು ಜನ ಸಾಮಾನ್ಯರಿಗೆ ತಲುಪಿಸಲು ಶ್ರಮಿಸಿದರು. ಅಲ್ಲಿಯವರೆವಿಗೂ ಶೇಕಡಾ 90%ರಷ್ಟು ಮಂದಿ ಬಾಬಾಸಾಹೇಬರ ಮೂರ್ತಿ ಪೂಜೆಯ ಆರಾಧಕರಾಗಿದ್ದರು ಎಂದರೆ ತಪ್ಪಾಗಲಾರದು. ನಿಮ್ನವರ್ಗಗಳಿಗೆ ವಿಮೋಚನೆಯ ಹಾದಿ ಕಾಣಿಸಿದ್ದು ಮಾನ್ಯ ಕಾನ್ಷಿರಾಂ ಸಾಹೇಬರ ಅಧ್ಯಯನ ಮತ್ತು ಸಂಘಟನೆಯ ಪ್ರತಿಫಲ ಎನ್ನಬಹುದು. ಆದರೆ ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಇವರಿಬ್ಬರ ಸಿದ್ಧಾಂತಗಳ ಗುರಿ ಮತ್ತು ಸಾಧನೆಯನ್ನು ಮರೆತು ಕೇವಲ ಮಾರಾಟದ ವಿವಿಧ ಮಜಲುಗಳಾಗಿ ರೂಪುಗೊಂಡಿವೆಯೇನೋ ಅನಿಸುತ್ತಿದೆ.
ಮಾನ್ಯ ಸಿ ಜಿ ಲಕ್ಷ್ಮೀಪತಿ ಯವರ ಇಂತಹ ಒಂದು ಪ್ರಯತ್ನಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಬಾಬಾಸಾಹೇಬರ ಅನುಯಾಯಿಗಳಿಗೆ ಈ ಪುಸ್ತಕ ಬೇರೆ ಪುಸ್ತಕಗಳ ಅಧ್ಯಯನಕ್ಕೆ ಒಂದು ರೀತಿಯ ಪದಕೋಶವಿದ್ದಂತೆ. ಬಾಬಾಸಾಹೇಬರನ್ನು ಅರಿಯುವ ಒಂದು ಮಾರ್ಗಸೂಚಿಕೆಯಿದ್ದಂತೆ ಎಂದು ಹೇಳಬಹುದು. ಈ ಪುಸ್ತಕದಲ್ಲಿ ವೈಜ್ಞಾನಿಕ ಆಲೋಚನೆ, ವಿಮೋಚನೆಯ ದಾರಿ, ಮಾನಸಿಕ ಸದೃಢತೆ, ಶಿಕ್ಷಣದಲ್ಲಿನ ಕ್ರಾಂತಿ, ಸಮಾಜದ ಅಭಿವೃದ್ಧಿಯ ವಿವಿಧ ಮಜಲುಗಳ ನೋಟಕ್ರಮ, ಸಾಮಾಜಿಕ ವ್ಯವಸ್ಥೆಯನ್ನು ಸರಿದೂಗಿಸುವ, ಮಾನಸಿಕ ಗುಲಾಮಗಿರಿತನವನ್ನು ತೊಡೆದುಹಾಕುವ ಬಹಳ ಮಹತ್ತರವಾದ ಒತ್ತಿಗೆಯಾಗಿದೆ. ಮಾನ್ಯರ ಬರಹಗಳು ಓದುಗರ ಆಲೋಚನೆಯ ಕ್ರಮಗಳನ್ನು ಅವರ ಬೌದ್ಧಿಕ ಮಟ್ಟದ ಹೊಸ ಚಿಂತನೆಯ ಉದಯಕ್ಕೆ ನಾಂದಿಯಿದ್ದಂತೆ ಎನ್ನಬಹುದು.
ಈ ಪುಸ್ತಕವನ್ನು ನನ್ನ ಆಲೋಚನೆಯ ಮಟ್ಟಕ್ಕೆ ನಾನು ಅರ್ಥೈಸಿಕೊಂಡಿದ್ದೇನೆ. ನನ್ನ ಗ್ರಹಿಕೆಯಲ್ಲಿ ಏನಾದರು ಲೋಪದೋಷಗಳಿದ್ದಲ್ಲಿ ಕ್ಷಮೆಯಿರಲಿ. ಇಂತಹ ಪುಸ್ತಕವನ್ನು ನನ್ನ ಕೈಗಿತ್ತ ಶ್ರೀಯುತ ಸಿ ಜಿ ಲಕ್ಷ್ಮೀಪತಿಯವರಿಗೆ ನಾನು ಅಭಾರಿಯಾಗಿರುತ್ತೇನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw