ಅಂಬೇಡ್ಕರ್ ಬರೆದ ಸಂವಿಧಾನ ದೇಶದ ನಾಗರಿಕರ ಸಕಲ ಸಮಸ್ಯೆಗಳಿಗೆ ಏಕೈಕ ಔಷಧಿ: ಸ್ಪೀಕರ್ ಯು.ಟಿ.ಖಾದರ್

ಮಂಗಳೂರು: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ದೇಶದ ನಾಗರಿಕರ ಸಕಲ ಸಮಸ್ಯೆಗಳಿಗೆ ಪರಿಹಾರ ಕೊಡುವ ಏಕೈಕ ಔಷಧಿಯಾಗಿದೆ ಎಂದು ವಿಧಾನ ಸಭಾ ಸಭಾಪತಿ ಯು.ಟಿ.ಖಾದರ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇವರ ಸಂಯಕ್ತಾಶ್ರಯದಲ್ಲಿ ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಈ ದೇಶದ ಜನತೆ ಘನತೆ ಗೌರವ ಸಾಮಾಜಿಕ ನ್ಯಾಯ ಮತ್ತು ಸಮಾನತೆಯಿಂದ ಬದುಕಬೇಕಾದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನದಿಂದ ಸಾಧ್ಯವಾಯಿತು, ಸಮಾಜದ ಮುಂದಿನ ಭವಿಷ್ಯ ಆಗಿರುವಂತಹ ವಿದ್ಯಾರ್ಥಿಗಳು ಈ ದೇಶದ ಸಂವಿಧಾನವನ್ನು ಓದಿ, ಅರ್ಥ ಮಾಡಿಕೊಂಡು ನಿಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ಬರೆದ ಸಂವಿಧಾನ ದೇಶದ ನಾಗರಿಕರ ಸಕಲ ಸಮಸ್ಯೆಗಳಿಗೆ ಪರಿಹಾರ ಕೊಡುವ ಏಕೈಕ ಔಷಧಿ ಎಂದು ಅವರು ಅಭಿಪ್ರಾಯಪಟ್ಟರು.
ಸಂಸದರಾದ ಬ್ರಿಜೇಶ್ ಚೌಟ ಮಾತನಾಡಿ, ಭಾರತ ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುವ ಮಟ್ಟಕ್ಕೆ ಹೋಗಲು ಕಾರಣ ಡಾ.ಬಿ.ಆರ್.ಅಂಬೇಡ್ಕರ್. ಯುರೋಪ್, ಚೈನಾ, ಅಮೇರಿಕಾದಂತಹ ದೇಶ ಆರ್ಥಿಕವಾಗಿ ದೊಡ್ಡ ಹಂತಕ್ಕೆ ತಲುಪಿರಬಹುದು ಆದರೆ ಅವರಿಗೆ ಭಾರತದ ಮೇಲಿರುವ ಭಯ ಯಾವುದೆಂದರೆ ಅದು ಈ ದೇಶದ ಪ್ರಜಾಪ್ರಭುತ್ವದ ಮೌಲ್ಯ ಎಂದರು.
ಪ್ರೊಸೆಸರ್ ವಾಸುದೇವ ಬೆಳ್ಳೆ ವಿಚಾರ ಮಂಡನೆ ಮಾಡುತ್ತಾ, ಭಾರತದಲ್ಲಿ ಅತ್ಯಂತ ಹೆಚ್ಚು ನಿಂದನೆ, ಶೋಷಣೆಗೊಳಗಾದ ವ್ಯಕ್ತಿ ಯಾರೆಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್. ಇವತ್ತು ನಡೆಯುವಂತಹ ಎಲ್ಲಾ ರೀತಿಯ ಚಳುವಳಿ, ಹೋರಾಟಗಳಿಗೆ ಪ್ರಮುಖ ಐಕಾನ್ ಡಾ.ಬಿ.ಆರ್.ಅಂಬೇಡ್ಕರ್ ಆಗಿರುತ್ತಾರೆ. ಹಿಂದೆ ನಮ್ಮ ದೇಶ ಶ್ರೇಣೀಕೃತ ವ್ಯವಸ್ಥೆಯಲ್ಲಿತ್ತು. ಅದನ್ನು ಬದಲಾವಣೆ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆತರುವಲ್ಲಿ ಅಂಬೇಡ್ಕರ್ ರವರು ಬಹಳ ಪ್ರಾಮುಖ್ಯತೆ ನೀಡಿದ್ದಾರೆ.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿ’ಸೋಜ, ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ ವಾಲ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಆಳ್ವಾರಿಸ್, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರನಾಥ ಗಟ್ಟಿ ಉಪಸ್ಥಿತರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: