ಅಂಬೇಡ್ಕರ್ ಎಂದರೆ ಸಮಾನ ಅಧಿಕಾರ
- ಧಮ್ಮಪ್ರಿಯಾ, ಬೆಂಗಳೂರು
ಭಾರತೀಯ ನಾಗರೀಕ ಬಂಧುಗಳೇ, ಪ್ರಜ್ಞಾವಂತ ಮತದಾರರೆ, ಪ್ರತೀ ವರ್ಷ ಏಪ್ರಿಲ್ 14 ನೇ ತಾರೀಖಿನ ದಿನವನ್ನು ವಿಶ್ವ ಜ್ಞಾನ ದಿನ ಎಂದು ಆಚರಿಸುತ್ತೇವೆ. ಆದರೆ ದುರದೃಷ್ಟಕರ ಸಂಗತಿಯೆಂದರೆ ಭಾರತದ ಜನಸಂಖ್ಯೆಯಲ್ಲಿ ಸುಮಾರು 70 ರಷ್ಟು ಜನ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದಾರೆ. ಈ ಗ್ರಾಮೀಣ ಪ್ರದೇಶದ ಜನರು ಇಂದಿಗೂ ಒಬ್ಬ ನವ ಭಾರತದ ನಿರ್ಮಾತೃವನ್ನು ಊರಿನ ಹೊರಗಡೆ ಯಾವುದೋ ಒಂದು ಕಾಲೋನಿಗೆ ಸೀಮಿತಗೊಳಿಸಿದ್ದಾರೆ. ಇದರಿಂದ ಮಾಯಾನಗರಿಯಂತಹ ಪ್ರದೇಶಗಳೇನು ಹೊರತೇನಲ್ಲ.
ಒಬ್ಬ ವಿಶ್ವ ಮಾನವ, ಜಗತ್ತಿನ ಜ್ಞಾನಿ ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗಲು ಇದರ ಹಿಂದಿರುವ ತಂತ್ರಗಳು ಏನು ಎಂದು ಅರಿಯಬೇಕಿದೆ. ಇದಕ್ಕೆ ಕಾರಣವೇ ನಮ್ಮಲ್ಲಿರುವ ಜಾತಿ ವೈಷಮ್ಯಗಳು, ರಾಜಕೀಯ ಪಿತೂರಿಗಳು, ಗುಡಿಗುಂಡಾರಗಳಲ್ಲಿ ತುಂಬಿ ತುಳುಕುತ್ತಿರುವ ಶ್ರೇಷ್ಠತೆ ಎನ್ನುವ ಮೂಢನಂಬಿಕೆಗಳು. ಸಂಪತ್ತಿನ ಅಸಮಾನ ಹಂಚಿಕೆಯ ಜೊತೆಗೆ ನಮ್ಮನ್ನು ಇದುವರೆವಿಗೂ ಆಳ್ವಿಕೆ ಮಾಡಿರುವ ಸರ್ಕಾರಗಳ ಕುತಂತ್ರವೇ ಬಾಬಾಸಾಹೇಬರು ಇಂದಿಗೂ ಸಾಮಾನ್ಯ ಜನರಿಂದ ದೂರ ಉಳಿದು, ಒಂದೇ ಜಾತಿಗೆ ಸೀಮಿತಗೊಂಡಿದ್ದಾರೆ ಎನ್ನಬಹುದು. ಪ್ರತೀ ವರ್ಷ ಮಾಡುವ ಬಾಬಾಸಾಹೇಬ್ ಜಯಂತಿಗೆ ಇವತ್ತಿಗೂ ದಲಿತ ಕೇರಿಗಳಿಗೆ ನಮ್ಮ ನಾಯಕರು ತಮ್ಮ ಓಟಿನ ರಾಜಕಾರಣಕ್ಕೆ ಹೋಗುತ್ತಾರೆ. ಅಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ, ಜಯಂತಿಗೆ ಹಣವನ್ನು ಬಿಡುಗಡೆ ಮಾಡಿಸುವ ಭರವಸೆ ನೀಡುವರೇ ಹೊರತು ಸಾರ್ವಜನಿಕವಾಗಿ ಎಲ್ಲರನ್ನೂ ಸೇರಿಸಿ ಕಾರ್ಯಕ್ರಮ ಮಾಡುವ ಕೆಲಸಕ್ಕೆ ಕೈ ಹಾಕುವುದೇ ಇಲ್ಲಾ. ಹಾಗಾಗಿ ಅಂಬೇಡ್ಕರ್ ರವರು ಇಂದಿಗೂ ಗ್ರಾಮೀಣ ಭಾಗದಲ್ಲಿ ಕೇವಲ ದಲಿತ ಕೇರಿಗಳಿಗೆ ಸೀಮಿತಗೊಂಡಿದ್ದಾರೆ. ಬಾಬಾಸಾಹೇಬರನ್ನು ಪರಿಚಯಿಸಿ ಅವರ ಸಿದ್ಧಾಂತಗಳು, ಮೂಲ ಆಶಯಗಳನ್ನು ತಿಳಿಸುವಲ್ಲಿ ನಮ್ಮ ನಾಯಕರು, ಪ್ರಜ್ಞಾವಂತ ಜನ ಸಮುದಾಯ ಸೋತಿರುವುದೇ ಬಹು ದೊಡ್ಡ ದುರಂತವಾಗಿದೆ.
1950 ರಲ್ಲಿ ಭಾರತಕ್ಕೆ ಸಂವಿಧಾನ ಜಾರಿಯಾಗಿ ಸರ್ವರಿಗೂ ಸಮಾನತೆ ನೀಡುವ ಮೂಲಕ ಸಮಾನತೆ ಯುಗ ಪ್ರಾರಂಭವಾಯಿತು. ಸಂವಿಧಾನ ಜಾರಿಯಾಗಿ ಜನರು ಯಾವಾಗ ಸ್ವತಂತ್ರರಾಗಲು ಬಯಸಿದರೋ, ಅಂದಿನಿಂದ ಜಾತಿಯ ಶ್ರೇಷ್ಠತೆಯೆಂಬುದು ಅಧಿಕಾರವನ್ನು ಹಿಡಿಯಲು ಪ್ರಾರಂಭಿಸಿತು. ಈ ಅಧಿಕಾರದ ಮೂಲಕ ತುಳಿತಕ್ಕೊಳಗಾದ ಜನರನ್ನು ಮತ್ತಷ್ಟು ಹತ್ತಿಕ್ಕುವ, ಅವರ ಮೇಲೆ ದಬ್ಬಾಳಿಕೆ ಎನ್ನುವುದು ನಡೆಯತೊಡಗಿತು. ಇದರಿಂದ ಶೋಷಿತರನ್ನು ಮೂಲ ಸೌಕರ್ಯಗಳಿಂದ ವಂಚಿಸುವ ವ್ಯವಸ್ಥೆ ತಕ್ಷಣ ತಲೆಯೆತ್ತಲು ಅವಕಾಶವಾಯಿತು.
50 ರ ದಶಕದಲ್ಲಿ ಹಕ್ಕು ಅಧಿಕಾರಗಳಿಗೆ ಹೋರಾಟ ಪ್ರಾರಂಭವಾಗುತ್ತಿದ್ದಂತೆ, ಅದನ್ನು ಹಿಮ್ಮೆಟ್ಟುವ ಪರ್ಯಾಯ ವ್ಯವಸ್ಥೆಯು ಪ್ರಾರಂಭವಾಯಿತು. ಸಂವಿಧಾನವನ್ನು ಅದರ ಶ್ರೇಷ್ಠತೆಯನ್ನು ನಿರ್ನಾಮ ಮಾಡುವಲ್ಲಿ ಜಾತಿಯಲ್ಲಿ ಶ್ರೇಷ್ಠತೆ ಎನಿಸಿದ ಸಮುದಾಯಗಳು ಮುಂದಾದವು. ಇದು ಇಂದಿಗೂ ಒಂದು ರೀತಿಯ ನಿರಂತರ ಹೋರಾಟದ ಬದುಕೆ ಆಗಿದೆ. ಬಾಬಾಸಾಹೇಬ್ ಡಾ ಅಂಬೇಡ್ಕರ್ ಹೇಳುವಂತೆ “ನನ್ನ ಜನ ಈ ದೇಶವನ್ನು ಆಳುವ ದೊರೆಗಳಾಗಬೇಕು ನಾನು ಅದನ್ನು ಕಣ್ಣಾರೆ ನೋಡಬೇಕು” ಎಂದಿದ್ದಾರೆ. ಆದರೆ ಆ ಕನಸು ಇಂದಿಗೂ ಕನಸ್ಸಾಗಿಯೇ ಉಳಿದುಕೊಂಡಿದೆ. ಏಪ್ರಿಲ್ 14 ಬಂದ ತಕ್ಷಣ ಬೀದಿಗೊಂದು, ಗಲ್ಲಿ ಗಲ್ಲಿಗೊಂದು ಸಂಘಗಳು ಸೃಷ್ಠಿಯಾಗಿ ಜಯಂತಿಯನ್ನು ಆಚರಿಸುತ್ತಾರೆ. ಚುನಾವಣೆಯ ಸಂದರ್ಭದಲ್ಲಿ ಪರಪಕ್ಷದ ಕೊಟ್ಟಿಗೆಯೊಳಗೆ ನುಸುಳಿ ಮಾತನಾಡುವ ಅಂಬೇಡ್ಕರ್ ಮುಖವಾಡ ಹಾಕಿಕೊಂಡ ನಾಯಕರಿಗೇನು ಕೊರತೆಯಿಲ್ಲ. ಹೀಗೆ ಅಂಬೇಡ್ಕರ್ ಜಯಂತಿ ಮಾಡಲು ಸಹ ಬೇರೆಯವರಿಂದ ಚಂದ ವಸೂಲಿ ಮಾಡಿ ಅವರನ್ನು ಕರೆಸಿ ಮೆರವಣಿಗೆ ಮಾಡಿಸುತ್ತಾರೆ ನಮ್ಮ ನಾಯಕರು ಇವರೇ ಎಂದು ಘೋಷಿಸುತ್ತಾರೆ. ಇದು ಸುಮಾರು ವರ್ಷಗಳಿಂದಲೂ ನಡೆದುಬಂದ ಸಾಮಾನ್ಯ ಕೆಲಸ ಆಗಿದೆಯೇ ವಿನಃ ಬೇರೆ ಯಾವ ಬದಲಾವಣೆಯು ಇಲ್ಲವಾಗಿದೆ.
ಆದರೆ 2023 ಏಪ್ರಿಲ್ 14 ಬಾಬಾಸಾಹೇಬರ 132 ನೇ ವರ್ಷದ ಹುಟ್ಟುಹಬ್ಬವಾಗಿದ್ದು, ಅಂದು ವೇದಿಕೆಗಳಲ್ಲಿ ಕೇವಲ ಅವರ ಹುಟ್ಟು, ಅವರ ಜಾತಿ , ಅವರು ಸಂವಿಧಾನ ಬರೆದರು, ಮತ್ತೆ ನಮ್ಮನ್ನೆಲ್ಲ ಬಿಟ್ಟು ಅಗಲಿದರು ಇಷ್ಟು ಮಾತ್ರ ಹೇಳುತ್ತಾರೆ. ಆದರೆ ಇದುವರೆವಿಗೂ ಅವರ ಮೂಲ ಆಶಯಗಳಿಗೆ ಕೊಳ್ಳಿ ಇಟ್ಟವರೇ ಹೆಚ್ಚು. ಬಾಬಾಸಾಹೇಬರ ಹೆಸರನ್ನು ಬಳಸಿಕೊಂಡು ತನ್ನ ಸಮುದಾಯದ ಜನರಿಗೆ ವಂಚಿಸಿ ಅಧಿಕಾರದ ಚುಕ್ಕಾಣಿ ಹಿಡಿದವರೇ ಹೆಚ್ಚು. ಇದರಿಂದ ಯಾವ ಬದಲಾವಣೆಯನ್ನು ಯಾರು ತರಲಿಲ್ಲವಾದರು. ಇವತ್ತಿಗೂ ಶಿಕ್ಷಣ ಸಂಘಟನೆ ಹೋರಾಟ ಇದರಲ್ಲಿಯೇ ಬಂದಿದ್ದಾರೆಯೇ ಹೊರತು ಅಧಿಕಾರದ ಚುಕ್ಕಾಣಿಯ ಕಡೆಗೆ ಮುಖ ಮಾಡಿ ನಿಂತವರಿಲ್ಲಾ. ಅಧಿಕಾರ ಹಿಡಿದ ಮೀಸಲು ಕ್ಷೇತ್ರದ ನಾಯಕರು ಬಾಬಾಸಾಹೇಬರು ನೀಡಿದ ಮೀಸಲು ಕ್ಷೇತ್ರಗಳ ಮಹತ್ವವನ್ನು ಅರಿಯದಾದರು. ಮೀಸಲು ಕ್ಷೇತ್ರದಿಂದ ಸ್ವರ್ದಿಸುವಾಗ ಇಲ್ಲ ಸಲ್ಲದ ಆಶ್ವಾಸನೆಗಳಿಂದ ಮರುಳುಗೊಳಿಸಿ ಗೆದ್ದು ಬಂದರು. ನಂತರ ತನಗೂ ತನ್ನ ಜನಾಂಗಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಮೌನವಾಗುತ್ತಾರೆ. ಇದಕ್ಕಾಗಿ ಮೀಸಲು ಕ್ಷೇತ್ರಗಳಾದರು ಯಾಕೆ ಬೇಕು. ಮೀಸಲು ನಾಯಕರು ಯಾಕೆ ಬೇಕು. ಒಮ್ಮೆ ಯೋಚಿಸಿ.
ಬಾಬಾಸಾಹೇಬರ ಕನಸು ಮೀಸಲು ಕ್ಷೇತ್ರಗಳಿಂದ ಗೆಲ್ಲುವವರು ಒಂದೇ ಪಕ್ಷದಿಂದ ಸ್ಪರ್ಧಿಸುವವರು ಆಗಿರಬೇಕು, ಶಾಸನ ಸಭೆಯಲ್ಲಿ ಇವರು ಅಧಿಕಾರದ ರೂವಾರಿಗಳಾಗಬೇಕು.ಸರ್ಕಾರ ರಚಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಬೇಕು ಎಂದಿದ್ದರು. ಆದರೆ ಇಂದು ಪ್ರತೀ ಮೀಸಲು ಕ್ಷೇತ್ರಗಳಲ್ಲಿ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಜಯಗಳಿಸುತ್ತಾರೆ. ಇವರು ಯಾರು ಶಾಸನ ಸಭೆಗಳಲ್ಲಿ ಒಂದಾಗಲು ಸಾಧ್ಯವೇ ಇಲ್ಲವಾಗಿದೆ. ಇದು ಸಂವಿಧಾನದ ಸಮಾನತೆಯ ವಿರೋಧಿಗಳಿಗೆ ಬಹಳ ಉಪಯುಕ್ತವಾಗಿದೆ. ಹಾಗಾದರೆ ಮೀಸಲು ಕ್ಷೇತ್ರದ ಜನರಿಗೆ ನಿಜವಾದ ಸವಲತ್ತುಗಳು ಜಾರಿಯಾಗುವುದಾದರೂ ಹೇಗೆ ? ಇದನ್ನು ಮೀಸಲು ಕ್ಷೇತ್ರದ ಮತದಾರರು ಅರ್ಥಮಾಡಿಕೊಳ್ಳಬೇಕಿದೆ.
ಇದನ್ನೇ ಬಂಡವಾಳ ಮಾಡಿಕೊಂಡ ಆಳುವ ಪಕ್ಷಗಳು ಮೀಸಲು ಕ್ಷೇತ್ರದಿಂದ ಗೆದ್ದ ನಾಯಕರನ್ನು ಕೇವಲ ಸರ್ಕಾರ ರಚನೆಯ ಸಂದರ್ಭದಲ್ಲಿ ಬಹುಮತಗಳಿಗೆ ಬಳಸಿಕೊಳ್ಳುತ್ತಾರೆಯೇ ವಿನಃ ಅಧಿಕಾರ ನಡೆಸುವಾಗ, ಕಾನೂನನ್ನು ಜಾರಿಮಾಡುವಾಗ ಇವರುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲಾ. ಸಾಮಾನ್ಯ ಕ್ಷೇತ್ರಗಳಿಗೆ ಮಾಡುವ ಕಾನೂನುಗಳೇ ಮೀಸಲು ಕ್ಷೇತ್ರಗಳಿಗೂ ಅನ್ವಯವಾಗುವುದಾದರೆ ಮೀಸಲು ಕ್ಷೇತ್ರಗಳು ಯಾಕೆ, ಮೀಸಲು ಕ್ಷೇತ್ರದ ನಾಯಕರುಗಳು ಯಾಕೆ ಬೇಕು. ನಾವುಗಳೆಲ್ಲರು ಸೇರಿ ಬಾಬಾಸಾಹೇಬರ ಕನಸುಗಳಿಗೆ ಕೊಳ್ಳಿಯಿಡುತ್ತಿದ್ದೇವೆ. ಬಾಬಾಸಾಹೇಬರನ್ನು ನಂಬಿದ ಜನರ ಬದುಕನ್ನು ಮತ್ತಷ್ಟು ನಿರ್ನಾಮ ಮಾಡುತ್ತಿದ್ದೇವೆ. ಮೀಸಲು ಕ್ಷೇತ್ರದ ನಾಯಕರು ಬೇರೆ ಬೇರೆ ಪಕ್ಷಗಳಲ್ಲಿ ಹರಿದು ಹಂಚಿ ಹೋಗುವುದಾದರೆ ಅವುಗಳನ್ನು ರದ್ದತಿ ಮಾಡುವುದೇ ಒಳ್ಳೆಯದು. ಬಾಬಾಸಾಹೇಬರ ಕನಸುಗಳನ್ನು ನನಸ್ಸು ಮಾಡುತ್ತೇವೆ ಎಂದ ನಾಯಕರು ಇಂದು ಬಾಬಾಸಾಹೇಬರನ್ನೇ ಕೊಲೆ ಮಾಡಲು ಯತ್ನಿಸಿದ ಕುಟುಂಬವನ್ನು ಸಮರ್ಥಿಸಲು ಸಿದ್ಧರಿದ್ದಾರೆ. ಇದು ಇವರ ಅಧಿಕಾರದ ಮಹಾದಾಸೆಯೇ ಹೊರತು ಬೇರೆ ಯಾವ ಜನಾಂಗದ ಉದ್ಧಾರದ ಮೂಲ ಆಶಯವಲ್ಲವಾಗಿದೆ.
ಬಂಧುಗಳೇ ಕರ್ನಾಟಕಲ್ಲಿ ಸಾರ್ವತ್ರಿಕ ಚುನಾವಣೆ ಇದೇ ಮೇ 10 ನೇ ತಾರೀಖಿನಂದು ನಡೆಯಲಿದ್ದು.ಮತದಾರರೆ ಈ ಕ್ಷಣದ ಪ್ರಭುಗಳಾಗುತ್ತಾರೆ, ಸರ್ಕಾರ ರಚನೆ ಆಗುತ್ತಿದ್ದಂತೆ ಈ ಮತದಾರ ಪ್ರಭು ಮತದಾನಕ್ಕಾಗಿ ಮತ್ತೆ 5 ವರ್ಷಗಳು ಕಾಯುತ್ತಾನೆ. ಮತದಾನವೆಂಬುದು ನಮ್ಮ ಸ್ವಾಭಿಮಾನದ ಸಂಕೇತ. ಬಾಬಾಸಾಹೇಬರು ಮತದಾನದ ಹಕ್ಕನ್ನು ತಂದುಕೊಡುವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಈ ದೇಶದ ಅತ್ಯಂತ ಉನ್ನತ ಹುದ್ದೆಯಲ್ಲಿರುವ ದೇಶದ ಪ್ರಧಾನಿಗೂ ಒಂದೇ ಓಟಿನ ಹಕ್ಕು. ಈ ದೇಶದ ಕೂಲಿ ಕಾರ್ಮಿಕನಿಗೂ , ಬೀದಿಯಲ್ಲಿರುವ ನಿರಾಶ್ರಿತನಿಗೂ ಒಂದೇ ಓಟಿನ ಹಕ್ಕು. ಈ ದೇಶದ ಅತೀ ದೊಡ್ಡ ಶೀಮಂತನಿಗೂ ಒಂದೇ ಓಟಿನ ಹಕ್ಕು. ಇದು ಈ ದೇಶದ ಸಮಾನತೆಯ ಸಂವಿಧಾನದ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಬಾಬಾಸಾಹೇಬರು ಹೇಳಿದ್ದಾರೆ. ಈ ಓಟಿನ ಮಹತ್ವವನ್ನು ಎಲ್ಲರೂ ಅರಿತುಕೋಳ್ಳಬೇಕಿದೆ. ಪ್ರತಿಯೊಬ್ಬ ಮತದಾರರು ಯಾವುದೇ ಆಸೆ ಆಕಾಂಕ್ಷೆಗಳಿಗೆ ಬಲಿಯಾಗಬಾರದು. ಇದು ನಿಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಮತದಾನದ ಸಮಯ. ಯಾವ ಮತದಾರನು ಅಜಾಗರೂಕತೆಯಿಂದ ಮತದಾನ ಮಾಡಬೇಡಿ.
ಬಾಬಾಸಾಹೇಬರ ಕನಸು ಎಲ್ಲರು ಸಮಾನವಾಗಿ ಸುಖಕರವಾಗಿ ಬದುಕಬೇಕು ಎನ್ನುವುದಾಗಿತ್ತು. ಅದನ್ನು ಇಂದಿನ ಭ್ರಷ್ಟ ರಾಜಕಾರಣಿಗಳು ಮುಗ್ಧ ಜನರನ್ನು ಆಮಿಷಗಳಿಗೆ ಬಲಿಕೊಟ್ಟು ಮತಗಳನ್ನು ತಮ್ಮ ಅಧಿಕಾರಕ್ಕೆ ಬಂಡವಾಳ ಮಾಡಿಕೊಂಡಿದ್ದಾರೆ. ಮೀಸಲು ಕ್ಷೇತ್ರದ ನಾಯಕರು ಇದರಿಂದ ಹೊರತೇನಲ್ಲ. ಕಳೆದ 75 ವರ್ಷಗಳ ಸ್ವತಂತ್ರ ಭಾರತದಲ್ಲಿ ವರ್ಷಕ್ಕೆ ಒಂದರಂತೆ ಬಜೆಟ್ ಮಂಡನೆಯಾಗುತ್ತದೆ. ಆದರೆ ಮೀಸಲು ಕ್ಷೇತ್ರಗಳಿಗೆ ಯಾವುದೇ ಪ್ರತ್ಯೇಕ ಬಜೆಟ್ ಇಲ್ಲದೆ, ಸಾಮಾನ್ಯ ಬಜೆಟ್ ನಲ್ಲೇ ಎಲ್ಲವನ್ನು ಸರಿದೂಗಿಸಿದ ಮೇಲೆ, ಮೀಸಲು ಕ್ಷೇತ್ರದ ನಾಯಕರು ಯಾಕೆ ಬೇಕಾಗಿದೆ. ಅವರನ್ನು ಗೆಲ್ಲಿಸಿ ಕಳುಹಿಸುವ ಅಗತ್ಯವಾದರೂ ಏನಿದೆ. ಅಂತಹ ಪಕ್ಷನಿಷ್ಠ ನಾಯಕರ, ಪಕ್ಷದ ನಿಷ್ಠೆಗಾಗಿ ತನ್ನ ಜನಾಂಗವನ್ನೇ, ಬಾಬಾಸಾಹೇಬರ ಸಿದ್ಧಾಂತವನ್ನೇ ಬಲಿಕೊಡುವ ಮೀಸಲು ಕ್ಷೇತ್ರಗಳಾಗಲಿ, ಮೀಸಲು ಕ್ಷೇತ್ರದ ನಾಯಕರಾಗಲಿ ನಮಗೆ ಯಾಕೆ ಬೇಕಾಗಿದೆ.
ಇವರು ಗೆದ್ದು ಹೋದ ಮೇಲೆ ಕಳೆದ ಹತ್ತು ವರ್ಷಗಳಲ್ಲಿ ಎಲ್ಲಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೆಲ್ಲಾ ಖಾಸಗಿಯವರ ಕೈಗೊಪ್ಪಿಸಲಾಗಿದೆ. ಅಂದು ಇವರುಗಳೆಲ್ಲ ನಿದ್ದೆ ಮಾಡುತ್ತಿದ್ದಾರೆಯೇ ? ಈ ದೇಶದ ಶೋಷಿತ ಸಮುದಾಯದ ಯುವ ಜನತೆಯ ದುಡಿಯುವ ಕೈಗಳಿಗೆ ಉದ್ಯೋಗವೆಂಬುದು ಕೇವಲ ಮರೀಚಿಕೆಯಾಗಿದೆ. ಖಾಸಗೀ ಕಂಪನಿಗಳು ಇವರಿಗೆ ಕೇವಲ 1% ಗೂ ಕಡಿಮೆ ಉದ್ಯೋಗವನ್ನು ನೀಡಿದ್ದು ಅಲ್ಲಿ ಡಿ ಗ್ರೂಪ್ ನೌಕರರಾಗಿ ದುಡಿಯಬೇಕಾದ ಸ್ಥಿತಿ ಬಂದೊದಗಿದೆ. ಇವೆಲ್ಲದಕ್ಕೂ ನಮ್ಮ ರಾಜಕೀಯ ನಾಯಕರು ಯಾವ ಉತ್ತರ ನೀಡಬಲ್ಲರು. ಚರ್ಚಿಸಲು ನಮ್ಮ ಯುವಕರು ಮುಂದಾದರೆ, ಮುಂದೆ ಚುನಾವಣೆಗಳಿವೆ ಈಗ ಧ್ವನಿ ತೆಗೆದರೆ ನನಗೆ ಮತ್ತೆ ಟಿಕೆಟ್ ಸಿಗುವುದಿಲ್ಲ ಎಂದು ಪಕ್ಷ ನಿಷ್ಠರಾಗಿ ಮಾತನಾಡುತ್ತಾರೆಯೇ ಹೊರತು ನಮ್ಮ ಯುವಕರ ಬೇಡಿಕೆ ಈಡೇರಿಸು ಮುಂದಾಗುವುದಿಲ್ಲ.
ನಮಗೆ ಪಕ್ಷದ ನಿಷ್ಠೆಗಿಂತ ಜನಪರ ನಿಷ್ಠೆ ನಾಯಕರು ಬೇಕಾಗಿದೆ. ಜನರ ಭಾವನೆಗಳಿಗೆ ಸ್ಪಂದಿಸುವ, ಬದುಕಿಗೆ ಆಶ್ರಯದಾತರಾಗುವ ನಾಯಕರನ್ನು ನಾವು ಸೃಷ್ಠಿಮಾಡಬೇಕಿದೆ. ತನ್ನನ್ನು ತಾನು ಮಾರಿಕೊಳ್ಳುವುದರ ಜೊತೆಗೆ ತನ್ನ ಜನಾಂಗವನ್ನು ಮಾರಿಕೊಳ್ಳುವ ನಾಯಕರು ನಮಗೆ ಬೇಕಿಲ್ಲವಾಗಿದೆ. ಬಾಬಾಸಾಹೇಬರು ಅದೆಷ್ಟೋ ಸಮಸ್ಯೆಗಳ ವೈರುಧ್ಯಗಳ ನಡುವೆ ತನ್ನ ತನವನ್ನು ಬಿಟ್ಟುಕೊಡದೆ ಗುರಿ ಸಾಧಿಸಿದವರು. ಅಂತಹ ಮಹಾನ್ ವ್ಯಕ್ತಿಯ ಹೆಸರು ಹೇಳುವ ಯೋಗ್ಯತೆ ಯಾರಿಗಿದೆ. ದಿನಕೊಂದು ವಾರಕ್ಕೊಂದು ಪಕ್ಷ ಬದಲಿಸಿ ಪಕ್ಷದ ನಿಷ್ಠೆಗಾಗಿ ದುಡಿಯುವ ನಾಯಕರಿಗೆ ಅದು ಬೇಕಾಗಿಲ್ಲವಾಗಿದೆ. ಬಾಬಾಸಾಹೇಬರು ಮಹಿಳೆಯರ ಹಕ್ಕುಗಳಿಗಾಗಿ ವಿದ್ಯಾಭ್ಯಾಸಕ್ಕಾಗಿ, ಉದ್ಯೋಗಕ್ಕಾಗಿ , ರಾಜಕೀಯ ಅಧಿಕಾರಕ್ಕಾಗಿ ಹೀಗೆ ಎಲ್ಲ ರಂಗದಲ್ಲೂ ಅವರಿಗೂ ಸಮಾನತೆ ನೀಡಬೇಕಾಗಿದೆ ಎಂದು ಪಟ್ಟು ಹಿಡಿದು ಸಾಧಿಸಿದವರು. “ಹಿಂದೂ ಕೋಡ್ ಬಿಲ್” ಜಾರಿಮಾಡದಿದ್ದರೆ ತನ್ನ ಮಂತ್ರಿ ಪದವಿಗೆ ರಾಜೀನಾಮೆ ನೀಡುವುದಾಗಿ ಪದವಿಯನ್ನೇ ತ್ಯಾಗ ಮಾಡಲು ಸಿದ್ಧವಾದ ತ್ಯಾಗಜೀವಿ. ಅವರಿಗೆ ಇವತ್ತಿನ ಮೀಸಲು ಕ್ಷೇತ್ರದ ನಾಯಕರಂತೆ ಅಧಿಕಾರದ ದುರಾಸೆಯಿರಲಿಲ್ಲ. ಹಾಗೇನಾದರು ಅವರು ಮಾಡಿದಿದ್ದರೆ ಇವತ್ತು ನೀವು ನಾವುಗಳೆಲ್ಲರು ಸಮಾನವಾಗಿ ಬದುಕಲು ಸಾಧ್ಯವಿರಲಿಲ್ಲ. ಇದು ಬಾಬಾಸಾಹೇಬರ ತ್ಯಾಗದ ಮನೋಭಾವ.
ಮಹಿಳೆಯರ ಬಗೆಗಿನ ಕಾಳಜಿ ಮತ್ತು ಸಮಾನತೆಯ ತತ್ವ ಅವರದಾಗಿತ್ತು. ಆದರೆ ಇಂದು ಅಧಿಕಾರ ಸಿಕ್ಕಿದ ತಕ್ಷಣ ಬಾಬಾಸಾಹೇಬರು ಕೊಟ್ಟ ಸವಲತ್ತುಗಳನ್ನೇ ಮರೆತು ತಮ್ಮ ವಯಕ್ತಿಕ ವಿಚಾರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಡುತ್ತಾ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವ ಅಧಿಕಾರಿಗಳು ಬಾಬಾಸಾಹೇಬರನ್ನು ಅರಿತುಕೊಳ್ಳಬೇಕಿದೆ. ಅಲ್ಲದೆ ಸಾಮಾನ್ಯ ಜನರ ಅಗತ್ಯತೆಗಳ ಕಡೆಗೆ ಗಮನವನ್ನು ನೀಡಬೇಕಿದೆ. ಈ ದೇಶದ ಯಾವ ವ್ಯಕ್ತಿಯು ಬಾಬಾಸಾಹೇಬರನ್ನು ಮರೆಯುವಂತಿಲ್ಲಾ , ಅದರಲ್ಲಿಯೂ ಈ ದೇಶದ ಹೆಣ್ಣುಮಗಳು ಅವರನ್ನು ಆರಾಧಿಸುತ್ತ, ತಮ್ಮ ಮಕ್ಕಳಿಗೂ ನಿಮ್ಮ ಆದರ್ಶಗಳು ಮೈಗೂಡಲಿ ಎಂದು ನೆನೆಯಬೇಕಾಗಿದೆ. ಅಂಬೇಡ್ಕರ್ ಎಂದರೆ ಅದೊಂದು “ವಿಶ್ವದ ಜ್ಞಾನದ ಶಕ್ತಿ”, ಅವರನ್ನು ನಾವು ಎಂದು ಮರೆಯದೆ ಸದಾ ಸ್ಮರಿಸುತ್ತಿರಬೇಕಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw