ಸಂವಿಧಾನ ಜಾರಿಮಾಡುವ ಜಾಗದಲ್ಲಿ ಅಂಬೇಡ್ಕರ್ ವಿರೋಧಿಗಳು ಕುಳಿತುಬಿಟ್ಟರೆ ! - Mahanayaka

ಸಂವಿಧಾನ ಜಾರಿಮಾಡುವ ಜಾಗದಲ್ಲಿ ಅಂಬೇಡ್ಕರ್ ವಿರೋಧಿಗಳು ಕುಳಿತುಬಿಟ್ಟರೆ !

constitution
26/01/2025

—  ದಮ್ಮಪ್ರಿಯ ಬೆಂಗಳೂರು

ಭಾರತದ ಸಂವಿಧಾನ ಜಾರಿಯಾಗಿ ಇಂದಿಗೆ ಸುಮಾರು 75 ವರ್ಷಗಳಾಯಿತು. ಸಂವಿಧಾನವನ್ನು ಅಂದು ದೇಶಕ್ಕೆ ಅರ್ಪಿಸಿದ ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರು ನನ್ನ ಸಂವಿಧಾನ ಇತರೆ ರಾಷ್ಟ್ರಗಳ ಸಂವಿಧಾನಕ್ಕೆ ಹೋಲಿಸಿದರೆ, ಬಹಳ ಶಕ್ತಿಯುತವಾಗಿದ್ದು ದೇಶದ ಎಲ್ಲಾ ಜಾತಿ ಜನಾಂಗಗಳಿಗೂ, ಮಹಿಳೆಯರಿಗೂ, ಮಕ್ಕಳಿಗೂ, ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರಿಗೂ ಸಮಾನತೆಯನ್ನು ತಂದುಕೊಡುವ ಸಂವಿಧಾನವಾಗಿದೆ. ಈ ಸಂವಿಧಾನ ಯಥಾವತ್ತಾಗಿ ಜಾರಿಯಾದರೆ ಇನ್ನು ಕೇವಲ 10 ವರ್ಷಗಳಲ್ಲಿ ಭಾರತ ದೇಶ ಪ್ರಭುದ್ದ ರಾಷ್ಟ್ರವಾಗುತ್ತದೆ ಎಂದಿದ್ದರು. ಆದರೆ ನನ್ನ ಸಂವಿಧಾನ  ಎಲ್ಲರಿಗೂ  ಆರ್ಥಿಕವಾಗಿ,  ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಉದ್ಯೋಗದಲ್ಲಿ ಸಮಾನತೆಯನ್ನು ನೀಡುವ ಸಂವಿಧಾನವಾಗಿದೆ.  ಎಲ್ಲಿಯವರೆಗೂ ಸಂವಿಧಾನ ಜಾರಿ ಮಾಡುವ ಜಾಗದಲ್ಲಿ ಸಂವಿಧಾನ ವಿರೋಧಿಗಳು ಇರುತ್ತಾರೆಯೋ ಅಲ್ಲಿಯವರೆಗೂ ನನ್ನ ಸಂವಿಧಾನವನ್ನು ಯಥಾವತ್ತಾಗಿ ಜಾರಿಯಾಗುತ್ತದೆ ಎನ್ನುವ ನಂಬಿಕೆ ನನಗಿಲ್ಲ, ಅಂದು ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಧ್ವಂಸವಾಗುತ್ತದೆ ಎಂದಿದ್ದರು.

ಭಾರತ ದೇಶದಲ್ಲಿ  12 ನೇ ಶತಮಾನದಲ್ಲಿ ಬಸವಣ್ಣನವರು ಪ್ರಾರಂಭಿಸಿದ ಅನುಭವ ಮಂಟಪ ಒಂದು ರೀತಿಯಲ್ಲಿ ಭಾರತದ ಪಾರ್ಲಿಮೆಂಟ್ ವ್ಯವಸ್ಥೆಯನ್ನು ಬಿಂಬಿಸುವುದಾಗಿತ್ತು. ಸಾಮಾಜಿಕ ಸಮಾನತೆಯನ್ನು ನೀಡುವ ಒಂದು ಪ್ರಯತ್ನವಾಗಿತ್ತು. ಆದರೆ ಭಾರತೀಯರಾದ ನಮಗೆ ಮನುವಾದದ ವ್ಯವಸ್ಥೆ ಎಲ್ಲರ ತಲೆಯಲ್ಲಿಯೂ ಮನೆಮಾಡಿ ಬಸವ ಜಯಂತಿಯನ್ನು ಸುಮಾರು 20 ನೇ ಸತಮಾನದವರೆವಿಗೂ  ಕೇವಲ ಹಸುಗಳಿಗೆ ಪೂಜೆ ಎನ್ನುವಂತೆ ಮರೆಮಾಚಲಾಗಿತ್ತು. ಅದರಂತೆಯೇ ಭಾರತದ  ಸಂವಿಧಾನವನ್ನು ಮತ್ತು ಬಾಬಾಸಾಹೇಬರ ಹೆಸರನ್ನು ಅರ್ಧ ಸತಮಾನಕ್ಕೂ ಹೆಚ್ಚು ಕಾಲ ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ, ಕೇವಲ ದಲಿತ ಕೇರಿಗಳಿಗೆ ಸೀಮಿತಗೊಳಿಸಿ, ಕೇವಲ ಅವರ ಹೆಸರಿನ ಬಳಕೆಯಲ್ಲೇ ಕಾಲ ಕಳೆಯುವಂತೆ ಮಾಡಲಾಗಿತ್ತು. ಸಂವಿಧಾನ ಎಂದರೆ ಕೇವಲ ಒಂದು ವರ್ಗಕ್ಕೆ ಸೀಮಿತವಾದದ್ದು, ಇಡೀ ದೇಶಕ್ಕೆ ಅದರ ಅವಶ್ಯಕತೆ ಯಾಕೆ ಎನ್ನುವಂತೆ  ಸಂವಿಧಾನ ವಿರೋಧಿಗಳು ಅದನ್ನು ಜನರ ಮನಸ್ಸಿನಲ್ಲಿ ಬಿತ್ತತೊಡಗಿದರು. ಇದರಿಂದಾಗಿ ಬಾಬಾಸಾಹೇಬರ ಸಿದ್ಧಾಂತಗಳನ್ನು ಮತ್ತು  ಸಂವಿಧಾನವನ್ನು ಅರಿಯದ ನಾಯಕರು, ಬಾಬಾಸಾಹೇಬರ ಹೆಸರು ಮತ್ತು ಸಂವಿಧಾನದ ಅಡಿಯಲ್ಲಿ ಸ್ವಾರ್ಥದ ರಾಜಕಾರಣ ಮಾಡಿ ತಮ್ಮ ಅಭಿವೃದ್ಧಿ ಕಂಡುಕೊಂಡರೇ ಹೊರತು, ಸಂವಿಧಾನದ ಆಶಯಗಳಿಗೆ, ತಮ್ಮ ಜನಾಂಗದ ಏಳಿಗೆಗೆ, ಗೌರವವನ್ನು ತಂದುಕೊಡದಾದರು.ಇದರಿಂದಲೇ ಇಂದು ಸಂವಿಧಾನ ಅಪಾಯದ ಅಂಚಿಗೆ ತಲುಪಿದೆ ಎನ್ನಬಹುದಾಗಿದೆ.

ಸಂವಿಧಾನ ಅಪಾಯದ ಅಂಚಿಗೆ ಬರಲು ಮುಖ್ಯ ಕಾರಣವೇ ಮನುವಾದದ ದಾಳಿ ಮತ್ತು ನಮ್ಮ ರಾಜಕೀಯ ನಾಯಕರ ದುರಾಡಳಿತ ವ್ಯವಸ್ಥೆ  ಎಂದರೆ ತಪ್ಪಾಗಲಾರದೆನೋ. ಮನುವಾದಿಗಳಿಗೆ ಸಂವಿಧಾನದ ಆಶಯಗಳು ಜಾರಿಯಾಗಬೇಕು ಎನ್ನುವ ಉದ್ದೇಶವಿಲ್ಲ, ಮೀಸಲು ಕ್ಷೇತ್ರದ ನಾಯಕರಿಗೆ ಸಂವಿಧಾನದ ಉಳಿವಿಗಿಂತ, ತಮ್ಮ ರಾಜಕೀಯ ಭವಿಷ್ಯವೇ ಬಹಳ ಮುಖ್ಯ ಎನ್ನುವುದಾಗಿದೆ. ಹಾಗಾಗಿ ಭಾರತದ ಸಂವಿಧಾನ ವ್ಯವಸ್ಥೆ 75  ವರ್ಷಗಳಲ್ಲಿ ಸರಿಯಾಗಿ ಜಾರಿಯಾಗದೆ, ಭಾರತದಲ್ಲಿ ಇಂದಿಗೂ ನಿರುದ್ಯೋಗ, ಬಡತನ, ಜಾತಿವ್ಯವಸ್ಥೆ, ಲಿಂಗತಾರತಮ್ಯ, ದೌರ್ಜಗಳು, ಹತ್ಯಾಚಾರಗಳು, ಲೈಂಗಿಕ ಕಿರುಕುಳಗಳು, ಸಂಪತ್ತಿನ ಅಸಮಾನ ಹಂಚಿಕೆ, ನ್ಯಾಯಾಲಯಗಳಲ್ಲಿ ಅಸತ್ಯಕ್ಕೆ ಜಯ, ಆರಾಜಕತೆ ಎಲ್ಲವೂ ತಾಂಡವವಾಡುತ್ತಿವೆ. ಹಾಗಾದರೆ ಸಂವಿಧಾನ ಜಾರಿಯಾಗಿ 75 ವರ್ಷಗಳು ಕಳೆದರು ಸುವರ್ಣ ಸಂಭ್ರಮ ಆಚರಿಸಬೇಕೆ ಒಮ್ಮೆ, ಪ್ರಜಾಪ್ರಭುತ್ವ ಗೌರವಿಸುವ ಪ್ರಜೆಗಳು ಯೋಚಿಸಬೇಕಿದೆ.

ಬಂಧುಗಳೇ ಕಳೆದ 10 ವರ್ಷಗಳಲ್ಲಿ, ಸಂವಿಧಾನವನ್ನು  ಗೌರವಿಸುವವರಿಗಿಂತ ಅಪಮಾನಿಸಿದವರೇ ಹೆಚ್ಚು, ಹೊಸ ಪಾರ್ಲಿಮೆಂಟ್ ಉದ್ಘಾಟನೆಯಲ್ಲಿ ಸಂವಿಧಾನವನ್ನಿಟ್ಟು ಗೌರವಿಸುವ ಬದಲು ಸಂಗೋಲ್ ಇಟ್ಟು ಪೂಜಿಸಲಾಯಿತು. ಕೆಲವು ದೇಶದ್ರೋಹಿಗಳು, ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿಗಳು, ಸಂಘಿಗಳು, ಮನುವಾದಿಗಳು ಸಂವಿಧಾನದ ಪ್ರತಿಗಳನ್ನು  ಪಾರ್ಲಿಮೆಂಟ್ ಮುಂದೆಯೇ ಸುಡಲಾಯಿತು, ಆದರೆ ದೇಶದ ರಾಜಕೀಯ ವ್ಯವಸ್ಥೆ ಇಂತಹ ಸಂವಿಧಾನ ವಿರೋಧಿ ಕೃತ್ಯಕ್ಕೆ ಕುಮ್ಮಕ್ಕು ನೀಡುವಂತೆ ವರ್ತಿಸಿತು.  ತನ್ನ ಪಕ್ಷವೇ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪಾರ್ಲಿಮೆಂಟ್ ಭವನದ ಮೇಲೆ ಎರಡು ಬಾರಿ ದಾಳಿ ನಡೆಸಲಾಯಿತು.  ಸಂವಿಧಾನದಲ್ಲಿ ಅಡಕವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವ್ಯವಸ್ಥೆಯ ಮೀಸಲಾತಿಯನ್ನು ವಿರೋಧಿಸಿ ಆರ್ಥಿಕವಾದ ಮೀಸಲಾತಿ ವ್ಯವಸ್ಥೆಯನ್ನು ಜಾರಿಮಾಡಿ ಸಂವಿಧಾನಕ್ಕೆ ಅಪಮಾನ ಮಾಡಲಾಯಿತು. ಸಂವಿಧಾನವನ್ನು ಜಾರಿ ಮಾಡುವ ಜಾಗದಲ್ಲಿರುವ ಮಾನ್ಯ ಗೃಹ ಮಂತ್ರಿಗಳು ಬಾಬಾಸಾಹೇಬರನ್ನು ಅಪಮಾನಿಸಿ ಸಂವಿಧಾನಕ್ಕೆ ಅಪಚಾರ ಮಾಡಲಾಯಿತು. ನಾವು ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು, ಬದಲಿಸಿಯೇ ತೀರುತ್ತೇವೆ, ಎಂದವರಿಗೆ ಮತ್ತೆ ಮಾತನಾಡಲು ಕುಮ್ಮಕ್ಕು ನೀಡಲಾಯಿತು. ಯಾವುದೇ ಶಿಕ್ಷೆಗೆ ಗುರಿಪಡಿಸದೆ ಹಾಗೆಯೇ ಕೈ ಬಿಡಲಾಯಿತು. ಸಂವಿಧಾನ ಹೇಳುವಂತೆ ಪ್ರತೀ ಕಾರ್ಮಿಕನು ದಿನದಲ್ಲಿ 8 ಗಂಟೆಗಳು ದುಡಿಯಬಹುದಾದ ದಹಿಕ ಸಾಮರ್ಥ್ಯ ಹೊಂದಿದ್ದಾನೆ ಎಂದಿದೆ. ಆದರೆ ದಿನದಲ್ಲಿ 8 ಗಂಟೆಗಳು ವಾರದಲ್ಲಿ 48 ಗಂಟೆಗಳು  ದುಡಿಯಬಹುದು ಎನ್ನುವ ಆಶಯವನ್ನು, ತಿರುಚಿ 70 ರಿಂದ 90 ಗಂಟೆ ದುಡಿಯಬಹುದು ಎನ್ನುವ ಮಾತಿಗೆ ಕುಮ್ಮಕ್ಕು ನೀಡಿ ಸಂವಿಧಾನ ವಿರೋಧಿ ಹೇಳಿಕೆ ನೀಡಲಾಯಿತು. ಕಾರ್ಮಿಕರ ನಿಜ ಜೀವನವನ್ನು ಅರಿಯದೇ ಐಷಾರಾಮಿ ಬಂಗಲೆಯಲ್ಲಿ ಎ ಸಿ ಕೆಳಕೆ ಕುಳಿತು ಮಾತನಾಡುವವರ ಹೇಳಿಕೆಗಳೇ ದೇಶದ ಅಭಿವೃದ್ಧಿ ಎನ್ನುವಂತೆ ಬಿಂಬಿಸಲಾಯಿತು. ಪ್ರತೀ ವರ್ಷ 2.60 ಕೋಟಿ ಉದ್ಯೋಗ ನೀಡಬೇಕಾಗಿದ್ದ ಸರ್ಕಾರಗಳು ದುಡಿಯುವ ಕೈಗಳಿಗೆ ಪಕೋಡ ಮಾರಲು ಕರೆ ಕೊಟ್ಟು, ಪದವಿ ಪಡೆದ ಯುವ ಜನತೆಯನ್ನು ಅವಮಾನಿಸಲಾಯಿತು. ಸರ್ಕಾರಿ ಉದ್ಯೋಗಗಳನ್ನು ಸೃಷ್ಠಿಸಬೇಕಿದ್ದ ಸರ್ಕಾರಗಳು ತಮ್ಮ ಅಧಿಕಾರದ ಅವಧಿಯಲ್ಲಿ ಸುಮಾರು 33 ರಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರ ಕೈಗೊಪ್ಪಿಸಿ ದುಡಿಯುತ್ತಿದ್ದ ಕುಟುಂಬಗಳನ್ನು ಬೀದಿಪಾಲು ಮಾಡಲಾಯಿತು. ಕಳೆದ 10 ವರ್ಷಗಳಲ್ಲಿ ಒಂದು ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸದ ಸರ್ಕಾರಗಳು ಇನ್ನು ಉದ್ಯೋಗವನ್ನು ಹೇಗೆ ನೀಡಲು ಸಾಧ್ಯ?  ಸಂವಿಧಾನದ ಕಾಲಾಂ 16 ಅಡಿಯಲ್ಲಿ ಹೇಗೆ ಸಂವಿಧಾನದ ಆಶಯವನ್ನು ಜಾರಿಮಾಡಲು ಸಾಧ್ಯ. ಇದು ಸಂವಿಧಾನದ ವಿರೋಧಿ ನೀತಿಯಲ್ಲವೇ ?

ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಶ್ವಮಟ್ಟಕ್ಕೆ ಪರಿಚಯಿಸುವ ನೆಪದಲ್ಲಿ ದಿವಾಳಿಕೊರರನ್ನು ವಿದೇಶಗಳಿಗೆ ಪರಾರಿಯಾಗಲು ಬಿಟ್ಟು, ಸಂವಿಧಾನಿಕ ಕಾನೂನು ವ್ಯವಸ್ಥೆಯನ್ನು ವಿರೂಪಗೊಳಿಸಿದ್ದು, ಮಣಿಪುರದಲ್ಲಿ ಹೆಣ್ಣನ್ನು ಬೆತ್ತಲೆ ಮೆರವಣಿಗೆ ಮಾಡಿದ್ದು ನಿಜವಾಗಿಯೂ ಸಂವಿಧಾನ ವಿರೋಧಿ ನೀತಿಯಲ್ಲವೇ?  ಬಾಬಾಸಾಹೇಬರು ಮಹಿಳೆಯರ ಸವಲತ್ತುಗಳಿಗಾಗಿ ಹಿಂದೂ ಕೋಡ್ ಬಿಲ್ ಜಾರಿಯಾಗದಿದ್ದರೆ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡುವುದಾಗಿ ಹೋರಾಟ ನಡೆಸಿ ಮಹಿಳೆಯರಿಗೆ ಸವಲತ್ತುಗಳನ್ನು ತಂದುಕೊಟ್ಟರು. ಆದರೆ ಮಣಿಪುರದ ಗಲಭೆ ಬಗ್ಗೆ  ತುಟಿಕ್ ಪಿಟಿಕ್ ಎನ್ನದ ನಮ್ಮ ಮನುವಾದಿ ಸರ್ಕಾರಗಳು ನಿಜವಾಗಿಯೂ ಸಂವಿಧಾನಕ್ಕೆ ಗೌರವವನ್ನು ನೀಡುತ್ತವೆಯೇ ? ಇನ್ನು ದೇಶದಲ್ಲಿ ಹಲವಾರು ಕೋಮುಗಲಭೆಗಳನ್ನು ಸೃಷ್ಠಿಸಿ ಸಮಾಜವನ್ನು ಅಶಾಂತಿಗೆ ತಳ್ಳಿದ್ದು ಸಂವಿಧಾನ ವಿರೋಧ ನೀತಿಯಲ್ಲವೇ ?

ದೇಶದ ಅಭಿವೃದ್ಧಿಯ ನೆಪದಲ್ಲಿ ಆರ್ ಬಿ ಐ ಖಜಾನೆಯಿಂದ 2019 ರಲ್ಲಿ ತೆಗೆದ 1 ಲಕ್ಷದ 71 ಸಾವಿರ ಕೋಟಿ ಹಣವನ್ನು ಯಾರ ಉದ್ದಾರಕ್ಕಾಗಿ ಬಳಸಲಾಗಿದೆಯೆಂದು ಇದುವರೆವಿಗೂ ತಿಳಿಯಲಿಲ್ಲ. ಇದು ಸಾರ್ವಜನಿಕರ ಹಿತಾಶಕ್ತಿಯ ಹಣವಾದ್ದರಿಂದ ಭಾರತೀಯ ಪ್ರಜೆಗಳನ್ನು ವಂಚಿಸಿದಂತಲ್ಲವೇ. ಮತ್ತೆಲ್ಲಿದೆ ಪ್ರಜಾಪ್ರಭುತ್ವ ವ್ಯವಸ್ಥೆ, ಎಲ್ಲಿದೆ ಸಂವಿಧಾನದ ಆಶಯಗಳಿಗೆ ಇಂದಿನ ಸರ್ಕಾರದಲ್ಲಿ ಬೆಲೆ. ನಿಜವಾಗಿಯೂ ಅಂಬೇಡ್ಕರ್ ವಿರೋಧಿಗಳು ಸಂವಿಧಾನವನ್ನು ಜಾರಿ ಮಾಡುವ ಜಾಗದಲ್ಲಿ ಕುಳಿತ್ತಿದ್ದಾರೆ ಎನ್ನುವ ಅಂದಿನ ಬಾಬಾಸಾಹೇಬರ ಮಾತು ಇಂದಿಗೂ ನಿಜವಾಗುತ್ತಿದೆ.

ಆದರೂ ಭಾರತೀಯ ಬಹುಜನರು ಸಂವಿಧಾನ ಜಾರಿಯಾಗಿ ಇಂದಿಗೆ 75 ವರ್ಷಗಳು ಕಳೆದಿರುವ ಸಂಭ್ರಮದಲ್ಲಿ ಸುವರ್ಣ ದಿನಾಚರಣೆಯನ್ನು ಆಚರಿಸಬೇಕಾದ ಅನಿವಾರ್ಯತೆ ಬಂದೋದಾಗಿದೆ. ಇದು ಈ ದೇಶದ ಆಳುವ ಸರ್ಕಾರಗಳ ದುರಂತದ ಸ್ಥಿತಿ. ರಾಜ ಬೇಪಾರಿ ಆದರೆ ರಾಜ್ಯ ಭಿಕಾರಿ ಆಗುವ ಮಾತು ಈ ದೇಶದ ಇಂದಿನ ರಾಜಕೀಯ ವ್ಯವಸ್ಥೆಯನ್ನು ಗಮನಿಸಿ ಹೇಳಿರಬಹುದೇನೋ ಅನಿಸುತ್ತಿದೆ.

ಅದಕ್ಕಾಗಿ ಎಲ್ಲರೂ ಸಂವಿಧಾನವನ್ನು ತಿಳಿಯೋಣ, ಸಂವಿಧಾನವನ್ನು ಓದೋಣ, ಇತರರಿಗೂ ಸಂವಿಧಾನದ ಆಶಯಗಳನ್ನು ತಿಳಿಸೋಣ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

 

ಇತ್ತೀಚಿನ ಸುದ್ದಿ