ಅಂಬೇಡ್ಕರ್ ಎಂಬ ಅನುಕರಣೀಯ ಮಾದರಿ | ಜೆಸ್ಸಿ ಪಿ.ವಿ. ಪುತ್ತೂರು - Mahanayaka
4:07 AM Thursday 14 - November 2024

ಅಂಬೇಡ್ಕರ್ ಎಂಬ ಅನುಕರಣೀಯ ಮಾದರಿ | ಜೆಸ್ಸಿ ಪಿ.ವಿ. ಪುತ್ತೂರು

jessy p v
13/04/2021

ನಮ್ಮ ಜೀವನಕ್ಕೆ ಒಬ್ಬರ ಮಾದರಿ ಬೇಕಿದ್ದರೆ ಅದು ಅಂಬೇಡ್ಕರ್ ಅಲ್ಲದೆ ಇನ್ನು ಯಾರು ಆಗಲು ಸಾಧ್ಯ? ನಾವೆಲ್ಲರೂ ನಮ್ಮ ಬದುಕಿನ ಬಗ್ಗೆ ಹಲವು ದೂರುಗಳನ್ನು ಇಟ್ಟುಕೊಂಡಿರುತ್ತೇವೆ.  ನಾವು ನಮ್ಮ  ಸೋಲುಗಳಿಗೆ ಯಾವ ಯಾವುದೋ ಕಾರಣಗಳನ್ನು ನೀಡುತ್ತೇವೆ.  ನಮ್ಮ ಪರಿಸ್ಥಿತಿಯಿಂದಾಗಿ ಜೀವನದಲ್ಲಿ  ಸಾಧನೆ ಮಾಡಲಾಗಲಿಲ್ಲ ಎಂದು ದೂರುತ್ತೇವೆ. ಆದರೆ ಎಂತಹ ಪರಿಸ್ಥಿತಿ ಇದ್ದರೂ ಮನಸ್ಸೊಂದಿದ್ದರೆ,  ಸಾಧಿಸುವ ಛಲ ಇದ್ದರೆ ಯಾರು ಬೇಕಾದರೂ ಸಾಧನೆ ಮಾಡಬಹುದು‌ ಎಂಬುದನ್ನು ತನ್ಮ ಬದುಕಿನ ಮೂಲಕ ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ.

ಸಾಮಾಜಿಕ ಸ್ಥಾನಮಾನವಾಗಲೀ, ಆರ್ಥಿಕ ಸ್ಥಿತಿಗತಿ ಯಾಗಲೀ  ನಿಜವಾಗಿಯೂ ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಅವರ ಜೀವನವೇ ಸಾಕ್ಷಿ.‌ ಏಪ್ರಿಲ್ ಹದಿನಾಲ್ಕರಂದು ಮಧ್ಯಪ್ರದೇಶದ ದಲಿತ ವರ್ಗವಾದ “ಮಹರ್” ಎಂಬ ಜಾತಿಯಲ್ಲಿ ಹುಟ್ಟಿ, ಅಸ್ಪೃಶ್ಯತೆಯ ನೋವುಗಳನ್ನು ಅನುಭವಿಸಿದ ಅಂಬೇಡ್ಕರ್ ಅದು ಯಾವುದನ್ನೂ ಲೆಕ್ಕಿಸದೇ, ತಮ್ಮ ಜ್ಞಾನ ದಾಹವನ್ನು ತಣಿಸಲು ಮುಂದಾದರು.  ಶಾಲೆಯಲ್ಲಿ ಅವರು ಕಲಿಯುತ್ತಿರುವಾಗ ಅವರು ಇತರ ವಿದ್ಯಾರ್ಥಿಗಳೊಂದಿಗೆ ಕುಳಿತುಕೊಳ್ಳುವಂತೆ ಇರಲಿಲ್ಲ.ನೆಲದಲ್ಲಿ ಗೋಣಿಚೀಲ ಹಾಕಿ ಅದರ ಮೇಲೆ ಅವರು ಕುಳಿತುಕೊಳ್ಳಬೇಕಿತ್ತು. ಅದನ್ನು ಶಾಲೆಯಲ್ಲಿ ಇಡುವ ಹಾಗಿರಲಿಲ್ಲ. ದಿನವೂ ಸಂಜೆ ಆ ಚೀಲವನ್ನು ಮನೆಗೆ ತೆಗೆದುಕೊಂಡು ಹೋಗಬೇಕಿತ್ತು.  ಅವರಿಗೆ ಬಾಯಾರಿಕೆಯಾದಾಗ ಯಾವುದಾದರೂ ಸವರ್ಣೀಯ ವಿದ್ಯಾರ್ಥಿ ಎತ್ತರದಿಂದ  ಅವರ ಕೈಗೆ ನೀರನ್ನು ಸುರಿದು ಕೊಡಬೇಕಿತ್ತು.  ಅವರು ನೀರನ್ನಾಗಲೀ, ನೀರಿನ ಪಾತ್ರೆಯನ್ನಾಗಲೀ  ಮುಟ್ಟುವಂತಿರಲಿಲ್ಲ. ಪ್ರೌಢಶಾಲೆಗೆ ಬಂದಾಗ ಅಲ್ಲಿನ ಜವಾನ ಈ ರೀತಿ ಮೇಲಿನಿಂದ ನೀರು ಹಾಕಿಕೊಡುತ್ತಿದ್ದ. ಜವಾನ ರಜೆ ಇದ್ದ ದಿನ ಅಂಬೇಡ್ಕರ್ ಅವರಿಗೆ ಬಾಯಾರಿಕೆಯಾದರೆ ನೀರು ಸಿಗುತ್ತಿರಲಿಲ್ಲ.  ಆದರೆ ಇಂತಹ ಪರಿಸ್ಥಿತಿಗಳು ಅವರನ್ನು ಧೃತಿಗೆಡಿಸಲಿಲ್ಲ . ಛಲದಿಂದ ಕಲಿಯುತ್ತಲೇ ಹೋದರು.  ಅವರು ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸ್ ಆದಾಗ ಅವರ ಜಾತಿಯವರು ಅದನ್ನು ದೊಡ್ಡ ಹಬ್ಬದಂತೆ ಆಚರಿಸಲು ಮುಂದಾದರು. ಯಾಕೆಂದರೆ ಅವರ ಜಾತಿಯ  ಒಬ್ಬನೂ ಈ  ಸಾಧನೆ ಮಾಡಿರಲಿಲ್ಲ.  ಮುಂದೆ ಬರೋಡಾದ ಗಾಯಕ್ವಾಡ್ ಅವರು ಸ್ಥಾಪಿಸಿದ ವಿದ್ಯಾರ್ಥಿವೇತನದ ನೆರವಿನಿಂದ ಅಂಬೇಡ್ಕರ್ ವಿದೇಶಕ್ಕೆ ಹೋಗಿ ಉನ್ನತ ವಿದ್ಯಾಭ್ಯಾಸ ಮಾಡಿದರು.  ಅಂಬೇಡ್ಕರ್ ಅವರು ಎಂ ಎ ,ಪಿ ಎಚ್ ಡಿ ಮುಂತಾದ ಅನೇಕ ಡಿಗ್ರಿಗಳನ್ನು ಪಡೆದರು ಬಹುಶಃ ಭಾರತದಲ್ಲಿ ಇದುವರೆಗೂ ಅವರು ಪಡೆದಷ್ಟು ಡಿಗ್ರಿಗಳನ್ನು ಪಡೆದ ವ್ಯಕ್ತಿ ಹುಟ್ಟಿಲ್ಲ.

ಬ್ಯಾರಿಸ್ಟರ್ ಪದವಿ ಪಡೆದ ಅವರು ವಕೀಲಿ ವೃತ್ತಿಯನ್ನು ಕೈಗೊಂಡರು. ಅವರು ಜೀವನದಲ್ಲಿ ನಿರ್ವಹಿಸಿದ ಪಾತ್ರಗಳು ಅನೇಕ ವಕೀಲನಾಗಿ, ಸಮಾಜ ಸುಧಾರಕರಾಗಿ, ರಾಜಕಾರಣಿಯಾಗಿ, ಸ್ವಾತಂತ್ರ್ಯ ಹೋರಾಟಗಾರನಾಗಿ ಅವರು ಕಾರ್ಯನಿರ್ವಹಿಸಿದರು. ದಲಿತರನ್ನು ಉದ್ಧರಿಸಲು ಜಾತಿಯತೆಯನ್ನು ಖಂಡಿಸಲು ಅವರು ಬಹಿಷ್ಕೃತ ಭಾರತ , ಸಮತಾ,  ಮೂಕನಾಯಕ ಎಂಬ ಪತ್ರಿಕೆಗಳನ್ನು ಪ್ರಾರಂಭಿಸಿದರು ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಆಫ್ ಇಂಡಿಯಾ ಅವರು ಸ್ಥಾಪಿಸಿದ ಪಕ್ಷ. ಭಾರತದಲ್ಲಿ ಪ್ರಥಮವಾಗಿ ಚುನಾವಣೆಗಳು ಆರಂಭವಾದಾಗ ಅವರು ಬಾಂಬೆ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾದರು. ಕಾಂಗ್ರೆಸ್ ಮೊದಲ ಮಂತ್ರಿಮಂಡಲವನ್ನು ರಚಿಸಿದಾಗ,  ಕಾಂಗ್ರೆಸ್ ನಾಯಕರಾದ ಜವಾಹರ್ ಲಾಲ್ ನೆಹರೂರವರು ತಮ್ಮ ಪಕ್ಷದವರಲ್ಲ ಅಂಬೇಡ್ಕರನ್ನು ಕಾನೂನು ಮಂತ್ರಿಯಾಗಿ ನೇಮಿಸಿದರು ಅಂಬೇಡ್ಕರ್ ಕಾನೂನು ವಿಷಯದಲ್ಲಿ ಇದ್ದ ಅಪಾರ ಜ್ಞಾನಕ್ಕೆ ನೆಹರು ನೀಡಿದ ಮನ್ನಣೆ ಇದೆನ್ನಬಹುದು ಸ್ವತಂತ್ರ ಭಾರತ ದೇಶಕ್ಕೆ ತನ್ನದೇ ಆದ ಸಂವಿಧಾನ ಅಗತ್ಯವಿತ್ತು ಸಂವಿಧಾನ ರಚನೆಗೆ ಅಂಬೇಡ್ಕರ್ ಗಿಂತ ಸಮರ್ಥ ವ್ಯಕ್ತಿ ಬೇರೆ ಇಲ್ಲ ಎಂಬುದು ಆಗಿನ ನಾಯಕರುಗಳಿಗೆ ಖಚಿತವಿತ್ತು. ಹಾಗಾಗಿ ಸಂವಿಧಾನದ ಕರಡು ರಚನೆಯ ಸಮಿತಿಯ ಅಧ್ಯಕ್ಷರನ್ನಾಗಿ ಅಂಬೇಡ್ಕರರನ್ನು ನೇಮಿಸಿದರು.  ಅಂಬೇಡ್ಕರ್ ಅವರು ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಜೊತೆಗೆ ಭಾರತದ ವೈವಿಧ್ಯಮಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಸೂಕ್ತವಾದ ಸಂವಿಧಾನವನ್ನು ನಮಗಾಗಿ ರಚಿಸಿದರು.   ಸಂವಿಧಾನವೆಂಬುದು ಅಂಬೇಡ್ಕರ್ ಎಂಬ ಏಕವ್ಯಕ್ತಿಯ ರಚನೆಯಲ್ಲ.  ಸಂವಿಧಾನ ರಚನಾ ಸಭೆಯಲ್ಲಿ ಬಹಳಷ್ಟು ಜನ ಸದಸ್ಯರಿದ್ದರು.  ಆದರೆ ಸಂವಿಧಾನದ ಮೊದಲಿಂದ ಕೊನೆಯವರೆಗಿನ ಪ್ರತಿಯೊಂದು ಭಾಗದ ರಚನೆಯಲ್ಲೂ ಅಂಬೇಡ್ಕರ್ ಅವರ ಪಾತ್ರ ಹಿರಿದಾದದ್ದು. ಸಂವಿಧಾನದ ಬಹು ಮುಖ್ಯ ಅಂಶಗಳನ್ನು ಅಂದರೆ ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ತತ್ವಗಳು ಇತ್ಯಾದಿಗಳನ್ನು ಸಂವಿಧಾನದಲ್ಲಿ ಸೇರ್ಪಡೆಗೊಳಿಸಲು ಪ್ರಮುಖ ಪಾತ್ರವಹಿಸಿದವರು ಅಂಬೇಡ್ಕರ್.  ಆದ್ದರಿಂದ ಸಂವಿಧಾನ ರಚನಾ ಸಭೆಯಲ್ಲಿ ಉಳಿದ ಸದಸ್ಯರು ಗಳಿಗಿಂತ ಅತಿ ಹೆಚ್ಚು ಕೆಲಸ ಮಾಡಿದ ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂದು ನಾಯಕರುಗಳು ಕರೆದದ್ದು ಸರಿಯಾಗಿಯೇ ಇದೆ.

ಬದುಕಿನಲ್ಲಿ ಹಿಂದುಳಿಯಲು,  ಯಾವುದೇ ಸಾಧನೆಯನ್ನು ಮಾಡದಿರಲು ತಮ್ಮ ಪರಿಸ್ಥಿತಿಯನ್ನು ನೆಪವಾಗಿ ಇಡುವವರು ಅಂಬೇಡ್ಕರವರ ಜೀವನದ ಕಷ್ಟ, ಅವಮಾನಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.  ಪರಿಸ್ಥಿತಿಯನ್ನು ಮೆಟ್ಟಿನಿಂತಾಗಷ್ಟೇ ನಾವು ಬದುಕಿನಲ್ಲಿ ಗೆಲುವು ಸಾಧಿಸಲು ಸಾಧ್ಯ.  ಬಹುಶಃ ಅಂಬೇಡ್ಕರ್ ತಾವು ಅನುಭವಿಸಿದ ನೋವು ಅವಮಾನಗಳಿಗೆ ಸವಿಯಾದ ಪ್ರತೀಕಾರವೆಂಬಂತೆ ಯಾರಿಗೂ ಮಾಡಲು ಅಸಾಧ್ಯವೆನಿಸುವ ಸಾಧನೆಗಳನ್ನು ಮಾಡಿದರು. ಭಾರತದಲ್ಲಿ ಯಾರೂ ಅದುವರೆಗೆ  ಪಡೆದಿರದಷ್ಟು ಪದವಿಗಳನ್ನು ಪಡೆದರು.




ತಮ್ಮ ಬದುಕಿನ ಕೊನೆಗಾಲದಲ್ಲಿ ಅಂಬೇಡ್ಕರ್ ಸಿಕ್ ಧರ್ಮಕ್ಕೆ ಮತಾಂತರ ಹೊಂದಲು ಬಯಸಿದರು.  ಆದರೆ ಅಲ್ಲಿ ತಮಗೆ ಎರಡನೆಯ ದರ್ಜೆಯ ಸಿಖ್ಖರೆಂಬ ಸ್ಥಾನಮಾನವಷ್ಟೇ ಲಭಿಸುವುದು ಎಂದು ತಿಳಿದಾಗ ಅವರು ತಮ್ಮ ನಿರ್ಧಾರವನ್ನು ಬದಲಿಸಿ, ಎಲ್ಲರಿಗೂ ಸಮಾನ ಸ್ಥಾನಮಾನ ಇರುವ ಬೌದ್ಧಧರ್ಮಕ್ಕೆ ಮತಾಂತರ ಹೊಂದಿದರು. ಅವರೊಂದಿಗೆ ಸಾವಿರಾರು ಅನುಯಾಯಿಗಳು ಕೂಡ ಬೌದ್ಧ ಧರ್ಮವನ್ನು ಸ್ವೀಕರಿಸಿದರು.  ಸಂವಿಧಾನ ರಚನೆಯಾದರೂ ಸಮಾನತೆಯ ಹಕ್ಕನ್ನು ಜಾರಿಗೆ ತಂದರೂ ಭಾರತೀಯರ ಮನಸ್ಥಿತಿ ಬದಲಾಗುವುದಿಲ್ಲ , ಜಾತೀಯತೆ ದೂರವಾಗುವುದಿಲ್ಲ ಎಂಬ ಅರಗಿಸಲಾಗದ ಸತ್ಯವನ್ನು ಅರಿತ ಅಂಬೇಡ್ಕರ್ ಈ ನಿರ್ಧಾರಕ್ಕೆ ಬಂದಿರಬಹುದು. ಜೀವನಪೂರ್ತಿ ತನ್ನ ಹಾಗೂ ತನ್ನಂತಹ ದಲಿತರ, ದಮನಿತರ ಅವಮಾನವನ್ನು ಪರಿಹರಿಸಲು, ಸಮಾನತೆ ದೊರಕಿಸಲು ಹೋರಾಡಿದ, ತನ್ನ ಜೀವನವನ್ನೇ ಸಮಾನತೆಗಾಗಿ ಮುಡಿಪಾಗಿಟ್ಟ ಅಂಬೇಡ್ಕರ್ ಭ್ರಮನಿರಸನಗೊಳ್ಳುವಷ್ಟೂ ನಮ್ಮ ಭಾರತದ ಜಾತಿವ್ಯವಸ್ಥೆ ಪ್ರಬಲವಾಗಿರುವುದು ವಿಷಾದನೀಯ.  ಅದೇನೇ ಇರಲಿ ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ, ಶಕ್ತಿ. ಒಂದು ಜನಾಂಗಕ್ಕೆ ಅಸ್ತಿತ್ವವನ್ನು ತಂದುಕೊಟ್ಟವರು.  ಸಂವಿಧಾನದ ಮೂಲಕ ಎಲ್ಲ ಜಾತಿ ವರ್ಗಗಳ ಜನರಿಗೂ ಸಮಾನ ಪ್ರಾತಿನಿಧ್ಯವನ್ನು ತಂದುಕೊಟ್ಟವರು. ದೇಶವನ್ನು ಪ್ರಪಂಚದಲ್ಲಿ ತಲೆಯೆತ್ತಿ ನಿಲ್ಲುವಂತೆ ಮಾಡಿದವರು. ಭಾರತದ ಅನನ್ಯತೆ ಹಾಗೂ ಸಾರ್ವಭೌಮತೆಯ ಕುರುಹಾದ ಸಂವಿಧಾನವನ್ನು ರಚಿಸಿದವರು.  ತಮ್ಮ ಪುಸ್ತಕ ಪ್ರೀತಿಯ ಮೂಲಕ ಜನರನ್ನು ನಿಬ್ಬೆರಗಾಗಿಸಿದವರು.ನಾನೇರಿದ ಎತ್ತರಕ್ಕೆ ನೀವೂ ಏರಬಹುದು ಎಂಬ ಸಂದೇಶವನ್ನು ಜನತೆಗೆ ನೀಡಿದವರು.  ಅವರ ಜನ್ಮದಿನದಲ್ಲಿ ಅವರನ್ನು ಸ್ಮರಿಸುವ ಜೊತೆಗೆ,  ಅವರ ಆದರ್ಶಗಳನ್ನೂ, ಬದುಕಿನ ಮಾದರಿಯನ್ನೂ ಅನುಸರಿಸಲು ನಾವು ಪ್ರಯತ್ನಿಸೋಣ.

ಇತ್ತೀಚಿನ ಸುದ್ದಿ