ಶೀಘ್ರ ನ್ಯಾಯದಾನ ವ್ಯವಸ್ಥೆಗಾಗಿ ರಾಜ್ಯದ ಸಿವಿಲ್ ಪ್ರೊಸೀಜರ್ ಕೋಡ್ ಗೆ ತಿದ್ದುಪಡಿ : ಕಾನೂನು ಸಚಿವ ಹೆಚ್.ಕೆ.ಪಾಟೀಲ್
ಉಡುಪಿ: ರಾಜ್ಯದಲ್ಲಿ ಕಕ್ಷಿದಾರರಿಗೆ ಶೀಘ್ರದಲ್ಲಿ ನ್ಯಾಯದಾನ ವ್ಯವಸ್ಥೆ ತಲುಪಿಸುವ ಉದ್ದೇಶದಿಂದ ರಾಜ್ಯದ ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ ಮಾಡಲು ವಿಧಾನಸಭೆಯ 2 ಸದನಗಳಲ್ಲಿ ಅನುಮೋದನೆ ಪಡೆದಿದ್ದು, ಇದನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಸಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಹೆಚ್. ಕೆ. ಪಾಟೀಲ್ ತಿಳಿಸಿದರು.
ಅವರು ಇಂದು ಜಿಲ್ಲಾ ನ್ಯಾಯಾಂಗ ಉಡುಪಿ, ಲೋಕೋಪಯೋಗಿ ಇಲಾಖೆ ಉಡುಪಿ ಮತ್ತು ವಕೀಲರ ಸಂಘ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರದಲ್ಲಿ ನೂತನವಾಗಿ ಸೃಜಿಸಲ್ಪಟ್ಟ ಬ್ರಹ್ಮಾವರ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿಳಂಬ ನ್ಯಾಯದಾನ ನ್ಯಾಯವನ್ನು ನಿರಾಕರಿಸಿದಂತೆ ಎಂಬ ಮಾತಿದೆ. ಕಕ್ಷಿದಾರರಿಗೆ ಶೀಘ್ರದಲ್ಲಿ ನ್ಯಾಯ ಒದಗಿಸುವ ಉದ್ದೇಶದಿಂದ ರಾಜ್ಯದ ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ ಮಾಡಲಾಗಿದ್ದು, ಇದರನ್ವಯ 6 ತಿಂಗಳ ಒಳಗೆ ವ್ಯಾಜ್ಯಗಳನ್ನ ವಿಲೇವಾರಿ ಮಾಡುವ ಹಾಗೂ ಪ್ರಕರಣಗಳನ್ನು 3 ಕ್ಕಿಂತ ಹೆಚ್ಚು ಬಾರಿ ಮುಂದೂಡದಂತೆ ತಿದ್ದುಪಡಿ ಮಾಡಲಾಗಿದ್ದು, ಇದಕ್ಕೆ ಶೀಘ್ರದಲ್ಲಿ ರಾಷ್ಟ್ರಪತಿಗಳ ಅಂಕಿತ ದೊರೆಯಲಿದೆ ಎಂದರು.
ಪ್ರಸ್ತುತ ಅನೇಕ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿ ಲಿಗೆ ತಲುಪಿಸಲಾಗುತ್ತಿದ್ದು, ನ್ಯಾಯದಾನ ವ್ಯವಸ್ಥೆಯನ್ನೂ ಸಹ ಸಾರ್ವಜನಿಕರ ಮನೆ ಬಾಗಲಿಗೆ ತಲುಪಿಸಿ, ಶೀಘ್ರ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಿಸುವ ಉದ್ದೇಶದಿಂದ ಇದೇ ವರ್ಷ ರಾಜ್ಯದಲ್ಲಿ ಗ್ರಾಮ ನ್ಯಾಯಾಲಯಗಳನ್ನು ಆರಂಭಿಸಲಾಗುತ್ತಿದ್ದು, 2 ರಿಂದ 3 ಪಂಚಾಯತ್ಗಳಿಗೆ ಒಂದರಂತೆ 2000 ಗ್ರಾಮ ನ್ಯಾಯಾಲಯಗಳನ್ನು ರಾಜ್ಯಾದ್ಯಂತ ಹಂತಹಂತವಾಗಿ ಆರಂಭಿಸಲಾಗುವುದು ಎಂದರು.
ರಾಜ್ಯದಲ್ಲಿ ವ್ಯಾಜ್ಯ ಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡುವ ಕಲ್ಪನೆ ಇದ್ದು, ಪ್ರತೀ ಗ್ರಾಮದಲ್ಲಿ ಕನಿಷ್ಠ ಇಬ್ಬರು ಉತ್ತಮ ಕೌನ್ಸಲಿಂಗ್ ಮಾಡುವ ವ್ಯಕ್ತಿಗಳಿದ್ದಲ್ಲಿ ಇದು ಸಾಧ್ಯವಾಗಲಿದೆ. ಸುಪ್ರೀಂಕೋರ್ಟ್‌ನಿಂದ ಕೆಳ ನ್ಯಾಯಾಲಯಗಳ ವರೆಗೆ ಅನೇಕ ಪ್ರಕರಣಗಳು ಅವಧಿ ಮೀರಿದ್ದರೂ ಇ್ಯರ್ಥಗೊಂಡಿಲ್ಲ. ವಕೀಲರು ಆದಷ್ಟು ಶೀಘ್ರದಲ್ಲಿ ಕಕ್ಷಿದಾರರಿಗೆ ನ್ಯಾಯ ದೊರಕಿಸಬೇಕು. ವ್ಯಾಜ್ಯಗಳು ಬೇಗ ಇತ್ಯರ್ಥಗೊಂಡಲ್ಲಿ ಸಮಾಜದಲ್ಲಿ ಸಂತೋಷ ಸಮಾಧಾನ ನೆಲೆಗೊಳ್ಳಲಿದೆ ಎಂದರು.
ಬ್ರಹ್ಮಾವರದಲ್ಲಿ ಪ್ರಸ್ತುತ ನೂತನವಾಗಿ ಸೃಜಿಸಲ್ಪಟ್ಟ ಬ್ರಹ್ಮಾವರ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಬದಲು ಖಾಯಂ ನ್ಯಾಯಾಲಯ ಆರಂಭಿಸುವ ಬಗ್ಗೆ ಮನವಿ ಬಂದಿದ್ದು, ಈ ಕುರಿತು ನ್ಯಾಯಾಂಗ ಇಲಾಖೆ ಮೂಲಕ ಅಗತ್ಯ ಕಡತ ಸಲ್ಲಿಕೆಯಾದಲ್ಲಿ 48 ಗಂಟೆಯೊಳಗೆ ಅನುಮತಿ ನೀಡಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಕೊಳ್ಳಬೇಕು. ಮಹಿಳಾ ವಕೀಲರು ಕಾನೂನು ಮೂಲಕ ಮಾತ್ರವಲ್ಲದೇ ಹೃದಯದ ಭಾವನೆಗಳ ಮೂಲಕ ವಾದ ಮಾಡಿ ಕಕ್ಷಿದಾರರಿಗೆ ಶೀಘ್ರದಲ್ಲಿ, ನ್ಯಾಯ ಕೊಡಿಸಬಲ್ಲರು. ವಿದ್ಯಾವಂತ ಮತ್ತು ಪ್ರಜ್ಞಾವಂತರ ಜಿಲ್ಲೆಯಾದ ಉಡುಪಿಯಲ್ಲಿ ಹೆಚ್ಚು ಮಹಿಳಾ ವಕೀಲರು ರೂಪುಗೊಳ್ಳಬೇಕು.
ಬ್ರಹ್ಮಾವರ ವ್ಯಾಪ್ತಿಯಲ್ಲಿ 4000 ಕ್ಕೂ ಅಧಿಕ ವ್ಯಾಜ್ಯಗಳಿದ್ದು, ಇಲ್ಲಿಗೆ ಖಾಯಂ ನ್ಯಾಯಾಲಯ ಆರಂಭಿಸುವ ಬಗ್ಗೆ ಕಾನೂನು ಸಚಿವರು ಭರವಸೆ ನೀಡಿದ್ದಾರೆ. ನಮ್ಮ ದೇಶದ ಕಾನೂನು ಮತ್ತು ಸಂವಿಧಾನ ಬಗ್ಗೆ ಇಡೀ ವಿಶ್ವದಲ್ಲಿ ಮೆಚ್ಚುಗೆ ಇದೆ. ಕ್ಷಕಿದಾರರಿಗೆ ಶೀಘ್ರ ನ್ಯಾಯ ದೊರಕಿಸುವ ಮೂಲಕ ಕಾನೂನು ಮತ್ತು ಸಂವಿಧಾನ ಉದ್ದೇಶ ಸಾಕಾರಗೊಳ್ಳಬೇಕು ಎಂದರು.
ಕರ್ನಾಟಕ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಹಾಗೂ ಜಿಲ್ಲಾ ನ್ಯಾಯಾಂಗ ಕಟ್ಟಡಗಳ ಸಮಿತಿ ಅಧ್ಯಕ್ಷ ಪಿ. ಎಸ್. ದಿನೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಹೆಚ್ಚು ವ್ಯಾಜ್ಯಗಳಿರುವ ಅಂಕಿ ಅಂಗಳ ಆಧಾರದ ಮೇಲೆ ಮನೆ ಬಾಗಿಲಿಗೆ ಸೇವೆ ಉದ್ದೇಶದಿಂದ ಸಂಚಾರಿ ನ್ಯಾಯಾಲಯಗಳನ್ನು ಆರಂಭಿಸಲಾಗುತ್ತಿದೆ. ಬ್ರಹ್ಮಾರದ ಸಂಚಾರಿ ನ್ಯಾಯಾಲಯವು ವಾರದಲ್ಲಿ 2 ದಿನ ಕಾರ್ಯ ನಿರ್ವಹಿಸಲಿದ್ದು, ಇಲ್ಲಿ ಖಾಯಂ ನ್ಯಾಯಾಲಯ ಆರಂಭಿಸುವ ಕುರಿತಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಕರ್ನಾಟಕ ಉಚ್ಛ ನ್ಯಾಯಾಲಯ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲೆ ಆಡಳಿತಾತ್ಮಕ ನ್ಯಾಯಮೂರ್ತಿ ಎಂ. ಐ. ಅರುಣ್ ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಜಿಲ್ಲಾ ಮತ್ತು ನ್ಯಾಯಾಧೀಶ ಶಾಂತವೀರ ಶಿವಪ್ಪ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಲೋಕೋಪಯೋಗಿ ಇಲಾಖೆ, ಕೇಂದ್ರ ವಲಯ, ಶಿವಮೊಗ್ಗದ ಪ್ರಾರ ಮುಖ್ಯ ಅಭಿಯಂತರರು (ಸಂ. ಮತ್ತು ಕ.) ಕೆ. ಜಿ. ಜಗದೀಶ್, ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ , ಕಾರ್ಯದರ್ಶಿ ಶ್ರೀಪಾದ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw