ಅಮಿತ್ ಶಾ ವಿರುದ್ಧ ಸಮನ್ಸ್ ಜಾರಿ ಮಾಡಿದ ಕೋರ್ಟ್
19/02/2021
ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪಶ್ಚಿಮ ಬಂಗಾಳದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ನೀಡಿದ್ದು, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಈ ಸಮನ್ಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಫೆ.22ರಂದು ಅಮಿತ್ ಶಾ ಖುದ್ದು ಇಲ್ಲವೇ ತಮ್ಮ ವಕೀಲರ ಮೂಲಕ ಹಾಜರಾಗಬೇಕೆಂದು ಬಿಧಾನ್ ನಗರದಲ್ಲಿನ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ಅಮಿತ್ ಶಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಈ ಆರೋಪಕ್ಕೆ ಉತ್ತರಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. 2018ರ ಆಗಸ್ಟ್ 11ರಂದು ಕೋಲ್ಕತ್ತಾದ ಮಾಯೋ ರಸ್ತೆಯಲ್ಲಿ ನಡೆದಿದ್ದ ಬಿಜೆಪಿ ಸಮಾವೇಶದಲ್ಲಿ ಅಮಿತ್ ಶಾ ಸಂಸದ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ಅಭಿಷೇಕ್ ಪರ ವಕೀಲ ಸಂಜಯ್ ಬಸು ಆರೋಪಿಸಿದ್ದಾರೆ.