ಕೈಗೆಟುಕದ ಸಂಸದನೂ ವ್ಯವಸ್ಥೆಯ ವೈಫಲ್ಯವೂ | ಮಹಿಳಾ ದೌರ್ಜನ್ಯಗಳನ್ನು ಸಹಿಸುವುದಿಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ವಾಸ್ತವ ವ್ಯತಿರಿಕ್ತವಾಗಿಯೇ ಇದೆ - Mahanayaka
9:04 PM Thursday 17 - October 2024

ಕೈಗೆಟುಕದ ಸಂಸದನೂ ವ್ಯವಸ್ಥೆಯ ವೈಫಲ್ಯವೂ | ಮಹಿಳಾ ದೌರ್ಜನ್ಯಗಳನ್ನು ಸಹಿಸುವುದಿಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ವಾಸ್ತವ ವ್ಯತಿರಿಕ್ತವಾಗಿಯೇ ಇದೆ

na divakara
27/05/2024

 ಯಶೋವರ್ಧನ್‌ ಆಜಾದ್‌

( ಮೂಲ : An absconding MP, the colossal failure of the system –

 ದ ಹಿಂದೂ , 23-05-2024)

ಅನುವಾದ  : ನಾ ದಿವಾಕರ

ಗೌಡರ ಕುಟುಂಬದ ಭದ್ರಕೋಟೆಯಾದ ಕರ್ನಾಟಕದ ಹಾಸನ ನಗರವು ಹೆಮ್ಮೆಯ ಪರಂಪರೆಯನ್ನು ಹೊಂದಿರುವ ತಾಣ. 11 ನೇ ಶತಮಾನದ ಹೊಯ್ಸಳ ದೇವಾಲಯಗಳ ಚಾರಿತ್ರಿಕ ತಾಣವಾಗಿರುವುದೇ ಅಲ್ಲದೆ  ಈ ನಗರವು  ಪ್ರಧಾನಮಂತ್ರಿ, ಮುಖ್ಯಮಂತ್ರಿ ಮತ್ತು ಕೆಲವು ಸಂಸದರು, ಶಾಸಕರನ್ನು ಶಾಸನಸಭೆಗಳಿಗೆ ನೀಡಿದೆ. ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎನ್ನುವುದು ವಿಶೇಷ. ಆದರೆ ಈಗ ಹಾಸನ ನಗರವು ಅಸಹಾಯಕ ಮಹಿಳೆಯರ ವಿರುದ್ಧ ನಡೆದ ಭೀಕರ ಅಪರಾಧಗಳ ಸರಣಿಯ ತಾಣವಾಗಿದೆ ಎಂಬ ಕುಖ್ಯಾತಿಗೆ ಒಳಗಾಗಿದ್ದು ವಿವಾದಗಳ ಕೇಂದ್ರ ಬಿಂದುವಾಗಿದೆ. ಇಲ್ಲಿನ ರಾಜಕೀಯದ ಮೇಲೆ ಕುಟುಂಬದ ಅಪಾಯಕಾರಿ ಹಿಡಿತವು ಎಷ್ಟು ಬಲವಾಗಿದೆಯೆಂದರೆ, ಇತ್ತೀಚೆಗೆ ರಾಜಕೀಯ ಬೆಂಬಲದ ಮೂಲಕ ಪ್ರಕರಣಗಳು ಸಾರ್ವಜನಿಕವಾಗಿ ಬಯಲಾಗುವವರೆಗೂ, 2021 ರಿಂದಲೂ ಶೋಷಣೆಗೆ ಒಳಗಾಗುತ್ತಿರುವ ಅಸಹಾಯಕರಿಗೆ    ಬಹಿರಂಗವಾಗಿ ಮಾತನಾಡಲು ಅಥವಾ ದೂರು ನೀಡಲು ಧೈರ್ಯವಿರಲಿಲ್ಲ.

 ಗಹನವಾದ ಪ್ರಶ್ನೆಗಳು:

ಈ ಅಪರಾಧದ ಸಂಚಿನ ಕೇಂದ್ರಬಿಂದುವಾಗಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ನಾಪತ್ತೆ ಪ್ರಕರಣವು ಭಗ್ನವಾದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನಷ್ಟೇ ಅಲ್ಲದೆ , ಆಡಳಿತ ಮತ್ತು ಪೊಲೀಸ್ ಕಾರ್ಯನಿರ್ವಹಣೆಯ ಪ್ರತಿಯೊಂದು ಹಂತದಲ್ಲೂ ರಾಜಕೀಯದ ಛಾಯೆ ಆವರಿಸಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ವ್ಯಕ್ತಿಯು, ಆತನು ಅಥವಾ ಆಕೆಯು ಎಷ್ಟೇ ಮುಖ್ಯವಾಗಿದ್ದರೂ, ಅಂತಹ ಘೋರ ಅಪರಾಧಗಳನ್ನು ಮಾಡಿದ ನಂತರ ಇಷ್ಟು ದಿನಗಳವರೆಗೆ ಕಾನೂನಿನ ವ್ಯಾಪ್ತಿಯಿಂದ ಹೊರಗೆ ಹೋಗಲು ಹೇಗೆ ಸಾಧ್ಯ ? ಸಮಯಕ್ಕೆ ಸರಿಯಾಗಿ ಅವನನ್ನು ಬಂಧಿಸುವಲ್ಲಿನ ಈ ಹೀನಾಯ ವೈಫಲ್ಯಕ್ಕೆ ಯಾರು ಜವಾಬ್ದಾರರು ? ಈ ಗಹನವಾದ ಪ್ರಶ್ನೆಗಳು ಉದ್ಭವಿಸುತ್ತವೆ.

ಹಾಸನದಲ್ಲಿ ಮತದಾನಕ್ಕೆ ಎರಡು ದಿನಗಳ ಮೊದಲು, ಏಪ್ರಿಲ್ 24 ರಂದು ಮಹಾರಾಜ ಕ್ರೀಡಾಂಗಣ, ಉದ್ಯಾನವನಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಸಂತ್ರಸ್ತರ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಭಯಾನಕ ದೃಶ್ಯಗಳನ್ನು ಒಳಗೊಂಡ ಕನಿಷ್ಠ 100 ವಿವಿಧ ಪೆನ್ ಡ್ರೈವ್‌ಗಳು ದೊರೆತಿರುವುದಾಗಿ  ವರದಿಯಾಗಿದೆ.  ಪೊಲೀಸರಿಗೆ ಸೂಕ್ತ ಕ್ರಮ ಕೈಗೊಳ್ಳಲು ಇದು ಮೊದಲ ಸುಳಿವು ಆಗಿರಬೇಕಿತ್ತು. ಆರೋಪಿಯನ್ನು ಗುರುತಿಸಲು ನೆರವಾಗುವ ಅಗಾಧ  ಮಾಹಿತಿಯನ್ನು ಆಧರಿಸಿ ಕಾರ್ಯನಿರ್ವಹಿಸಲು ಪ್ರಾಸಿಕ್ಯೂಷನ್ ಶಾಖೆಯನ್ನು ಸಂಪರ್ಕಿಸಬೇಕಾಗಿತ್ತು. ವಿಶೇಷವಾಗಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ, ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಪೊಲೀಸರು ನೋಟಿಸ್ ಕಳುಹಿಸಬೇಕಿತ್ತು. ವಿಚಾರಣೆ ಬಾಕಿ ಇರುವಾಗ, ಅವರು ನಗರವನ್ನು ತೊರೆಯಬಾರದಿತ್ತು ಅಥವಾ ತೊರೆಯದಂತೆ ತಡೆಯಾಜ್ಞೆ ಆದೇಶಕ್ಕಾಗಿ ನ್ಯಾಯಾಲಯಕ್ಕೆ ಹೋಗಬೇಕಿತ್ತು, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕಿತ್ತು. ಆರೋಪಿಗಳು ವಿಮಾನ ನಿಲ್ದಾಣದ ಮೂಲಕ ಪರಾರಿಯಾಗದಂತೆ ತಡೆಯಲು ಕರ್ನಾಟಕ ಪೊಲೀಸರ ಕೋರಿಕೆಯ ಮೇರೆಗೆ ವಲಸೆ ಅಧಿಕಾರಿಗಳು ಲುಕ್ ಔಟ್ ಸುತ್ತೋಲೆ (ಎಲ್ಒಸಿ) ಹೊರಡಿಸಬೇಕಿತ್ತು. ಆದರೂ ಏನೂ ಮಾಡಿಲ್ಲ.  ಹಾಗಾಗಿ ಆರೋಪಿಯು ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್‌  ಬಲದಿಂದ, ಚುನಾವಣೆಗಳು ಮುಗಿದ ಕೂಡಲೇ ವೀಸಾ ಇಲ್ಲದೆಯೇ ಜರ್ಮನಿಗೆ ಹೋಗಲು ಸಾಧ್ಯವಾಗಿದೆ.

ಪೊಲೀಸರು ಸಮಯಕ್ಕೆ ಸರಿಯಾಗಿ ಏಕೆ ಕ್ರಮ ಕೈಗೊಂಡಿಲ್ಲ ? ಅದೇ ದಿನ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಏಕೆ ರಚಿಸಲಿಲ್ಲ ? ಅವರು ಚುನಾವಣೆಗಳಲ್ಲಿ ನಿರತರಾಗಿದ್ದರೇ ಅಥವಾ ಆರೋಪಿಗಳ ವಿರುದ್ಧ ತಾವಾಗಿಯೇ ಕ್ರಮ ಕೈಗೊಳ್ಳುವ ಸಾಧ್ಯತೆ ಸ್ಥಳೀಯ ಪೊಲೀಸರಿಗೆ ತುಂಬಾ ಕಷ್ಟಕರವಾಗಿತ್ತೇ ? ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವಿಡಿಯೋಗಳನ್ನು ಸಾರ್ವಜನಿಕರಿಗೆ ಪ್ರಸಾರ ಮಾಡದಂತೆ ನ್ಯಾಯಾಲಯವು ಮಾಧ್ಯಮಗಳ ಮೇಲೆ ನಿಷೇಧ ಆದೇಶವನ್ನು ವಿಧಿಸಿದಾಗಲೇ ಇವುಗಳ ಮಾಹಿತಿಯು ಉನ್ನತ ಅಧಿಕಾರಿಗಳಿಗೆ ತಿಳಿದಿತ್ತು ಎನ್ನುವುದು ಸ್ಪಷ್ಟ. ದಿನನಿತ್ಯ ನಡೆಯುವ ಬೆಳವಣಿಗೆಗಳ ಬಗ್ಗೆ ಸಕಲ ಮಾಹಿತಿಗಳನ್ನೂ ತಿಳಿದಿರುವ ಗೃಹ ಕಾರ್ಯದರ್ಶಿ, ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿಯ ಪಾತ್ರದ ಬಗ್ಗೆ ಅದು ಏನು ಹೇಳುತ್ತದೆ ? ಹೆಚ್ಚಿನ ರಾಜಕೀಯ ಲಾಭವನ್ನು ಪಡೆಯುವ ಸಲುವಾಗಿಯೇ ಸಿಡಿಗಳನ್ನು ಬಿಡುಗಡೆ ಮಾಡಿರುವುದು ಸಮಯೋಚಿತವಾಗಿರಬಹುದೇ ? ಈ ಅಂಶಗಳ ಹೊರಗಿಟ್ಟು ನೋಡಿದರೂ ಸಹ,  ಮಹಿಳಾ ಸಬಲೀಕರಣ ಮತ್ತು ನಾರಿ ಶಕ್ತಿಯ ಮಂತ್ರಗಳನ್ನು ನಿತ್ಯ ಪಠಿಸುವ  ರಾಜಕೀಯ ಆಡಳಿತ ವ್ಯವಸ್ಥೆಯಲ್ಲಿ ತಕ್ಷಣದ ದಂಡನಾತ್ಮಕ ಕ್ರಮಕ್ಕೆ ಅಧಿಕಾರ ನೀಡುವುದು ಹಿರಿಯ ಅಧಿಕಾರಿಗಳ ಕರ್ತವ್ಯವಾಗಿತ್ತು.

ಆರೋಪಿಗಳು ತಪ್ಪಿಸಿಕೊಂಡ ನಂತರ ಕೈಗೊಂಡ ಕ್ರಮಗಳು ವೇಗವನ್ನು ಗಮನಿಸಿದರೆ, ಅದಕ್ಕೂ ಮುಂಚಿನ ನಡೆಗಳಷ್ಟೇ ಗಂಭೀರವಾಗಿ ಕಾಣುತ್ತದೆ. ಆರೋಪಿ ಪಲಾಯನ ಮಾಡಿದ ಒಂದು ದಿನದ ನಂತರ ಮೊದಲ ಪ್ರಕರಣ ದಾಖಲಿಸಿ ತದನಂತರ ಎಸ್ಐಟಿ ರಚಿಸಲಾಯಿತು. ಸಂತ್ರಸ್ತರ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ನೀಡುವ ವ್ಯವಸ್ಥೆ ಮಾಡಲಾಯಿತು ಮತ್ತು ಅನಂತರ ಎಲ್ಒಸಿ ಹೊರಡಿಸಲಾಯಿತು. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಮೇಲೆ ಆರೋಪಿಯ ತಂದೆ ಶಾಸಕ ಎಚ್.ಡಿ.ರೇವಣ್ಣ ಅವರನ್ನು ಮೇ 4 ರಂದು ಬಂಧಿಸಲಾಗಿತ್ತು ಮತ್ತು ಕೆಲವು ದಿನಗಳ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಸಮಾಜದ ವಿವಿಧ ಸ್ತರಗಳಿಂದ ಬಂದ ಹೆಚ್ಚಿನ ಮಹಿಳೆಯರು ತಮ್ಮ ದೇಹದ ಮೇಲಿನ ಕ್ರೂರ ದಾಳಿಯನ್ನು ಬಹಿರಂಗಪಡಿಸಲು ಧೈರ್ಯವನ್ನು ಪ್ರದರ್ಶಿಸಿರುವುದರಿಂದ ಇಲ್ಲಿಯವರೆಗೆ ಹಲವಾರು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

ಆದರೆ ಆರೋಪಿ ನಾಪತ್ತೆಯಾಗಿದ್ದು, ಚುನಾವಣಾ ಫಲಿತಾಂಶದ ಮೊದಲು ಭಾರತಕ್ಕೆ ಮರಳುವ ಸಾಧ್ಯತೆಯಿಲ್ಲ. ನಮ್ಮ ಪ್ರಜಾಪ್ರಭುತ್ವದಲ್ಲಿ ಇತರರಂತೆ ಅಪರಾಧಿಗಳಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಗೆಲ್ಲುವ ಉತ್ತಮ ಅವಕಾಶವಿದೆ. ಬಹುಶಃ, ಸಂಸದರಾಗಿ, ಅವರು ತಮ್ಮ ವಿಚಾರಣೆಯ ಸಮಯದಲ್ಲಿ ಇನ್ನೂ ಕೆಲವು ಸವಲತ್ತುಗಳನ್ನು ನಿರೀಕ್ಷಿಸುತ್ತಾರೆ.

 ಇಂಟರ್‌ ಪೋಲ್‌ ನೊಡನೆ ಸಂಪರ್ಕ:

ಸಿಬಿಐ ನಮ್ಮ ದೇಶದಲ್ಲಿ ಇಂಟರ್‌ ಪೋಲ್‌ನೊಂದಿಗೆ ಒಡನಾಟವನ್ನು ಹೊಂದಿರುವ ಸಂಸ್ಥೆಯಾಗಿದೆ.  ಯಾವುದೇ ಆರೋಪಿಗಳನ್ನು ಪತ್ತೆಹಚ್ಚಲು, ಬಂಧಿಸಲು ಇಂಟರ್‌ ರ್ಪೋಲ್ ಸಂಪರ್ಕಿಸಲು ರಾಜ್ಯ ಪೊಲೀಸರು ತಮ್ಮ ಮಾಹಿತಿಯನ್ನು ಸಿಬಿಐನಲ್ಲಿ ನೋಂದಾಯಿಸಬೇಕು. ಆದರೆ ಇಲ್ಲಿಯವರೆಗೆ ಇಂಟರ್‌ ಪೋಲ್ ಬ್ಲೂ ಕಾರ್ನರ್ ನೋಟಿಸ್ (ಬಿಸಿಎನ್) ಮಾತ್ರ ಹೊರಡಿಸಿದೆಯೇ ಹೊರತು ರೆಡ್ ಕಾರ್ನರ್ ನೋಟಿಸ್ (ಆರ್‌ ಸಿಎನ್) ನೀಡಿಲ್ಲ.

ಇಂಟರ್‌ ಪೋಲ್‌ ನೋಟಿಸುಗಳು ಮೂಲತಃ ಸದಸ್ಯ ರಾಷ್ಟ್ರಗಳ ನಡುವೆ ನಿರ್ಣಾಯಕವಾದ, ಅಪರಾಧ ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳಲು, ವಿಶ್ವದ ಯಾವುದೇ ಭಾಗದಲ್ಲಿ ದೇಶಭ್ರಷ್ಟರನ್ನು ಪತ್ತೆಹಚ್ಚಲು ಅಥವಾ ಬಂಧಿಸಲು ಅಂತರರಾಷ್ಟ್ರೀಯ ಸಹಕಾರವನ್ನು ಕೋರುತ್ತವೆ. ಕೆಂಪು, ಹಳದಿ, ನೀಲಿ, ಕಪ್ಪು, ಹಸಿರು, ಕಿತ್ತಳೆ ಮತ್ತು ನೇರಳೆ ಹೀಗೆ ವಿವಿಧ ರೀತಿಯ ನೋಟಿಸ್‌ಗಳನ್ನು ಇಂಟರ್‌ಪೋಲ್ ನೀಡುತ್ತದೆ. ಈ ಪ್ರಕರಣದ ಹಿನ್ನೆಲೆಯಲ್ಲಿ, ಕ್ರಿಮಿನಲ್ ತನಿಖೆಗೆ ಸಂಬಂಧಿಸಿದಂತೆ ವ್ಯಕ್ತಿಯ ಸ್ಥಳ, ಗುರುತು ಅಥವಾ ಚಟುವಟಿಕೆಗಳ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಬಿಸಿಎನ್ ಸಂಗ್ರಹಿಸುತ್ತದೆ, ಆದರೆ ಪ್ರಾಸಿಕ್ಯೂಷನ್ ಅಥವಾ ಶಿಕ್ಷೆಯನ್ನು ಅನುಭವಿಸಲು ಬಯಸುವ ವ್ಯಕ್ತಿಯ ಸ್ಥಳ ಮತ್ತು ಬಂಧನವನ್ನು ಕೋರಲು ಆರ್‌ ಸಿಎನ್‌ ನೀಡಲಾಗುತ್ತದೆ

ಬ್ಲೂಕಾರ್ನರ್‌ ನೋಟಿಸ್‌ಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲು ನ್ಯಾಯಾಲಯದ ಬಂಧನದ ಆದೇಶ ಅಗತ್ಯವಾಗಿರುತ್ತದೆ. ಎಸ್‌ಐಟಿ ಅರ್ಜಿಯ ಮೇರೆಗೆ ಮೇ 19 ರಂದ ವಾರಂಟ್‌ ನೀಡಲಾಗಿದೆ. ಅದರಂತೆ, ಆರೋಪಿಗಳ ವಿರುದ್ಧ ಆರ್‌ಸಿಎನ್ ನೀಡಲಾಗುತ್ತದೆ  ಅಥವಾ ಈಗಾಗಲೇ ಹೊರಡಿಸಲಾಗಿರುತ್ತದೆ. ಆರೋಪಿಯ ಪಾಸ್‌ಪೋರ್ಟ್ ರದ್ದುಗೊಳಿಸುವ ಹಾದಿಯೂ ಸುಗಮವಾಗಿದೆ.

ಆದರೆ ಇದು ಆರೋಪಿಯು ಶೀಘ್ರದಲ್ಲೇ ಭಾರತಕ್ಕೆ ಬರಬಹುದು ಎಂಬುದರ ಸಂಕೇತವಲ್ಲ. ಆರೋಪಿಯು ನ್ಯಾಯಾಲಯಗಳಿಗೆ ಹೋಗುವ ಆಯ್ಕೆಯನ್ನು ಹೊಂದಿರುತ್ತಾರೆ. ಜರ್ಮನಿಯ ನ್ಯಾಯಾಲಯಗಳನ್ನು ಆಶ್ರಯಿಸುವ ಮೂಲಕ ವಿದೇಶದಲ್ಲೇ ಉಳಿಯಬಹುದು. ಭಾರತದಿಂದ ವಾಂಟೆಡ್ ಲಿಸ್ಟ್‌ನಲ್ಲಿರುವ, ಆದರೆ ವಿದೇಶದಲ್ಲಿರುವ ಅನೇಕರು ಕಠಿಣ ಕಾನೂನು ಪ್ರಕ್ರಿಯೆಗಳ ಮೂಲಕ ಹಸ್ತಾಂತರವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಮಿನಲ್ ಪ್ರಕರಣಗಳಲ್ಲಿ ಅಂತಹ ವಿಳಂಬಗಳು ತನಿಖಾ ಪ್ರಕ್ರಿಯೆಯನ್ನು ಹಾಳುಮಾಡಲು ನೆರವಾಗುತ್ತವೆ. ಸಾಕ್ಷಿಗಳು ಪ್ರತಿಕೂಲವಾಗುತ್ತಾರೆ ಅಥವಾ ಘಟನೆಗಳನ್ನು ನಿಖರವಾಗಿ ನೆನಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸಾಧ್ಯತೆಗಳ ಹಿನ್ನೆಲೆಯಲ್ಲಿಯೇ ಘೋರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವುದು ಅತ್ಯಂತ ಮಹತ್ವದ್ದಾಗಿರುತ್ತದೆ.

ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಪ್ರತಿಯೊಂದು ಬಜೆಟ್‌ನಲ್ಲೂ ಮಹಿಳಾ ಕಲ್ಯಾಣಕ್ಕಾಗಿ ಹೆಚ್ಚಿನ ಹಣವನ್ನು ಮೀಸಲಿಡಲಾಗುತ್ತದೆ. ಸಂಸತ್ತಿನಲ್ಲಿ ಅಥವಾ ಹೊರಗೆ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಪ್ರತಿಯೊಂದು ಹೇಳಿಕೆಯು ಮಹಿಳೆಯರ ವಿರುದ್ಧದ ಅಪರಾಧಗಳ ಶೂನ್ಯ ಸಹಿಷ್ಣುತೆಯನ್ನು ಉಲ್ಲೇಖಿಸುತ್ತದೆ. ಕಾನೂನುಗಳನ್ನು ಬಲಪಡಿಸಲಾಗಿದೆ, ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ ಆದರೆ ಬಿಕ್ಕಟ್ಟಿನ ವಿಷಯಕ್ಕೆ ಬಂದಾಗ ದಂಡನಾತ್ಮಕ ಕ್ರಮವು ನಿರೀಕ್ಷೆಗಳಿಗೆ ಅನುಗುಣವಾಗಿಲ್ಲ. ಇದು ವಿಪರ್ಯಾಸ.

ಪ್ರಸ್ತುತ ಪ್ರಕರಣವು ಆಡಳಿತ ವ್ಯವಸ್ಥೆಯ ಎಲ್ಲಾ ರಂಗಗಳ ನಿಷ್ಕ್ರಿಯತೆಯನ್ನು ಎತ್ತಿತೋರಿಸುತ್ತದೆ. ಪ್ರಕರಣ ದಾಖಲಾದ ದಿನವೇ ಜೆಡಿಎಸ್ ಸಂಸದರನ್ನು ಉಚ್ಚಾಟಿಸಬೇಕಿತ್ತು. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವಂತಹ ಸಮಂಜಸವಾದ ಆಧಾರದ ಮೇಲೆ ಪಾಸ್‌ಪೋರ್ಟನ್ನು ಹಿಂತೆಗೆದುಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುವುದರಿಂದ ಪಾಸ್‌ಪೋರ್ಟ್ ಕಾಯ್ದೆಯಡಿ ಅವರ ಪಾಸ್‌ಪೋರ್ಟನ್ನೂ ಸಹ ರದ್ದುಗೊಳಿಸಬೇಕಾಗಿತ್ತು. ಮೇಲೆ ಹೇಳಿರುವಂತೆ, ರಾಜ್ಯ ಪೊಲೀಸರು ಈಗಾಗಲೇ ಸಂಸದರನ್ನು ಸರಿಯಾದ ಸಮಯಕ್ಕೆ ಬಂಧಿಸಲು ವಿಫಲರಾಗಿದ್ದಾರೆ. ಹಿರಿಯ ಅಧಿಕಾರಿಗಳು ಕೂಡ ಒತ್ತಡಕ್ಕೆ ಮಣಿದಿದ್ದಾರೆ ಎನಿಸುತ್ತದೆ. ಅಷ್ಟೇ ಅಲ್ಲದೆ ಸಂಸದರ ದುಷ್ಕೃತ್ಯಗಳ ಬಗ್ಗೆ ತಿಳಿದಿದ್ದರೂ, ಬಿಜೆಪಿ ಮತ್ತು ಜೆಡಿಎಸ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವರ ನಾಮನಿರ್ದೇಶನವನ್ನು ಬೆಂಬಲಿಸಿದ್ದು ಮತ್ತು ಪ್ರಧಾನಿ ಸಹ ಅವರ ಪರವಾಗಿ ಪ್ರಚಾರ ಮಾಡಿದ್ದಾರೆ. ಇಲ್ಲಿ ಏಳುವ ಪ್ರಶ್ನೆ ಎಂದರೆ ಇದು ಗುಪ್ತಚರ ವೈಫಲ್ಯವೇ ಅಥವಾ ಆತನ ಬಗ್ಗೆ ಮಾಹಿತಿ ಅಮಾನ್ಯವೇ ಎಂಬುದು.

 ಸಂತ್ರಸ್ತರ ದುಸ್ಥಿತಿ:

ಜನರು ತಾವು ಕಳೆದುಕೊಂಡ ಮೂಲ ನೆಲೆಯನ್ನು  ಎಷ್ಟು ಬೇಗ ಮರಳಿ ಪಡೆಯಬಹುದು ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಈ ನಡುವೆ ಎಲ್ಲಾ ಮಹಿಳಾ ಸಂತ್ರಸ್ತರನ್ನು ತಲುಪಲು ಎಸ್ಐಟಿ ಹೆಚ್ಚಿನ ಮಹಿಳಾ ಅಧಿಕಾರಿಗಳು ಮತ್ತು ತನಿಖಾಧಿಕಾರಿಗಳನ್ನು ಹೊಂದಿರಬೇಕಾಗುತ್ತದೆ. ತನಿಖೆಯಲ್ಲಿನ ವಿಳಂಬ, ತಾಂತ್ರಿಕ ದೋಷಗಳು, ಕಳಪೆ ತನಿಖೆ ಅಥವಾ ದುರ್ಬಲ ಕಾನೂನು ಕ್ರಮಗಳಿಂದಾಗಿ ಇಂತಹ ಅಪರಾಧಗಳು ಶಿಕ್ಷೆಗೊಳಗಾಗದೆ ಪಾರಾಗುವುದು ಸಾಧ್ಯವಿಲ್ಲ. ಅಂತಹ ಘೋರ ಅಪರಾಧಿಯ ವಿರುದ್ಧ ಇಡೀ ಇಡೀ ರಾಷ್ಟ್ರವೇ ದನಿ ಎತ್ತಿರುವುದು ನಿರೀಕ್ಷಿತವೇ ಆಗಿದೆ. ಆರೋಪಿಗಳ ಮೇಲ್ಮನವಿಯ ಬಗ್ಗೆ ನ್ಯಾಯಾಲಯದ ಆದೇಶದಿಂದ ಮಾಧ್ಯಮಗಳು ಈಗಾಗಲೇ ಗಲಿಬಿಲಿಗೊಂಡಿರುವುದರಿಂದ ಯಾವುದೇ ಮಾಧ್ಯಮ ವಿಚಾರಣೆ ಸಾಧ್ಯವಾಗುವುದಿಲ್ಲ. ಸಂತ್ರಸ್ತರಿಗೆ ನ್ಯಾಯ ಒದಗಿಸಲು ಆಗ್ರಹಿಸುವ ದನಿಗೆ ಸಮಾಜದ ಪ್ರತಿಯೊಂದು ವರ್ಗವೂ ದನಿಗೂಡಿಸಬೇಕಿದೆ.

ಮಹಿಳೆಯರ ವಿರುದ್ಧದ ಅಪರಾಧಗಳ ವಿಶ್ವದ ಅತ್ಯಂತ ಭೀಕರ ಘಟನೆಗಳನ್ನು ಒಳಗೊಂಡ ಈ ಪ್ರಕರಣದಲ್ಲಿ ವ್ಯಕ್ತಿಯ ವಿಚಾರಣೆಗಾಗಿ ರಾಷ್ಟ್ರವು ಕಾಯುತ್ತಿರುವಾಗ, ಈ ಪ್ರಕರಣದ ಅತ್ಯಂತ ಹೃದಯ ವಿದ್ರಾವಕ ಚಿತ್ರವೊಂದು ಮನಸ್ಸನ್ನು ವಿಚಲಿತಗೊಳಿಸುತ್ತದೆ. ಆರೋಪಿಯ ತಂದೆ ಮತ್ತು ಅಜ್ಜನಿಗೆ ವರ್ಷಗಳ ಕಾಲ ಸೇವೆ ಸಲ್ಲಿಸಿದ 48 ವರ್ಷದ ಸಂತ್ರಸ್ತೆಯು, ಆರೋಪಿಯು ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದಾಗ ಕೈಮುಗಿದು ಬೇಡಿಕೊಳ್ಳುತ್ತಿರುವ ದೃಶ್ಯ ಎಂಥವರ ಎದೆಯಲ್ಲೂ ನಡುಕ ಹುಟ್ಟಿಸುತ್ತದೆ. ಇಂತಹ ಘೋರ ಅಪರಾಧಕ್ಕೆ ಎಂತಹ ಶಿಕ್ಷೆಯಾದರೂ ಅದು ಕಡಿಮೆಯೇ !

(ಲೇಖಕರು ನಿವೃತ್ತ ಕೇಂದ್ರ ಮಾಹಿತಿ ಆಯುಕ್ತರು, ಗುಪ್ತಚರ ಇಲಾಖೆಯ ನಿವೃತ್ತ ಭದ್ರತಾ ಕಾರ್ಯದರ್ಶಿ)


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ